ADVERTISEMENT

ಚಿಕ್ಕಮಗಳೂರು | ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಪ್ರತಿಭಟನೆ ನಾಳೆ

ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 13:42 IST
Last Updated 30 ಜೂನ್ 2024, 13:42 IST
ಅಶೋಕ್ ಕೆಂಪನಹಳ್ಳಿ
ಅಶೋಕ್ ಕೆಂಪನಹಳ್ಳಿ   

ಚಿಕ್ಕಮಗಳೂರು: ರಾಜ್ಯದಲ್ಲಿ ಕನ್ನಡಿಗರಿಗೆ ಎಲ್ಲ ಮಾದರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ಸರೋಜಿನಿ ಮಹಿಷಿ ವರದಿ ಸಮರ್ಪಕ ಅನುಷ್ಠಾನಕ್ಕೆ ಒತ್ತಾಯಿಸಿ ರಾಜ್ಯದಾದ್ಯಂತ ಜುಲೈ 1 ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್‌ ಕೆಂಪನಹಳ್ಳಿ ತಿಳಿಸಿದರು.

ಹೊರ ರಾಜ್ಯಗಳಿಂದ ವಲಸೆ ಬಂದು ನೆಲೆಸಿರುವವರಿಗೆ ಸಿಗುವ ಉದ್ಯೋಗ ಮಾನ್ಯತೆ  ಕನ್ನಡಿಗರಿಗೆ ಇಲ್ಲಂತದಾಗಿದೆ. ಇದರಿಂದ ನಾಡಿನ ಜನತೆ ನಿರುದ್ಯೋಗ ಸಮಸ್ಯೆ ಎದುರಿಸುವಂತಾಗಿದೆ. ಖಾಸಗಿ ಕಂಪನಿಗಳು ಸಿ ಮತ್ತು ಡಿ ದರ್ಜೆ ಹುದ್ದೆಯಲ್ಲಿ ಶೇ 100 ರಷ್ಟು ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲು ಇಡಬೇಕು. 1946 ಕಾಯ್ದೆ ಅನ್ವಯ ಕಾನೂನು ರೂಪಿಸಿ ಸರ್ಕಾರ ಕನ್ನಡಿಗರಿಗೆ ಉದ್ಯೋಗ ಮೀಸಲು ಕಲ್ಪಿಸಬೇಕು. ಆ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ನೇತೃತ್ವದಲ್ಲಿ ಪ್ರತಿಭಟನೆ ರೂಪಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಹೇಳಿದರು.

ಕೇಂದ್ರ ಸರ್ಕಾರದ ಇಲಾಖೆಗಳು, ಸಾರ್ವಜನಿಕ ವಲಯದ ಘಟಕಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಕಲ್ಪಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ನಿಯಾವಳಿ ಪಾಲಿಸದ ಸಂಸ್ಥೆಗಳ ಮಾನ್ಯತೆ ರದ್ದುಪಡಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಕರ್ನಾಟಕದಲ್ಲಿ ಕನ್ನಡಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ನೀಡಬೇಕು ಎಂಬುದು ನ್ಯಾಯಯುತ ಬೇಡಿಕೆ. ಆ ನಿಟ್ಟಿನಲ್ಲಿ ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಲಾಗಿದೆ. ಆದರೆ, ಸಮರ್ಪಕವಾಗಿ ಜಾರಿಯಾಗಿಲ್ಲ ಎಂದು ದೂರಿದರು.

ಜಿಲ್ಲಾ ಕೇಂದ್ರದಲ್ಲಿ ನಗರದ ಆಜಾದ್ ಪಾರ್ಕ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದ್ದು, ನೂರಾರು ಕಾರ್ಯಕರ್ತರು, ನಿರುದ್ಯೋಗಿಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಸರ್ಕಾರ ಹೋರಾಟಕ್ಕೆ ಮಣಿಯದಿದ್ದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. 

ಗೋಷ್ಠಿಯಲ್ಲಿ ವೇದಿಕೆ ಜಿಲ್ಲಾ ಘಟಕದ ಉಪಾಧ್ಯಕ್ಷ ಕೋಟೆ ಮಲ್ಲೇಶ್, ಯುವ ಘಟಕದ ಅಧ್ಯಕ್ಷ ಕುಮಾರ್ ಆರ್. ಶೆಟ್ಟಿ, ಸಂಘಟನಾ ಕಾರ್ಯದರ್ಶಿ ರುದ್ರೇಶ್ ಸಿಂಹಾದ್ರಿ, ಭರತ್‌, ರಾಜಣ್ಣ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.