ಎ.ಕೆ.ಅಣ್ಣಮ್ಮ, ಹಿರಿಯ ಶುಶ್ರೂಷಾಧಿಕಾರಿ, ಜಿಲ್ಲಾ ಆಸ್ಪತ್ರೆ
ಕೋವಿಡ್ ರೋಗಿಗಳ ಆರೈಕೆ ಗರಿಮೆ...
ಅಣ್ಣಮ್ಮ ಅವರು ಕೋವಿಡ್ ಆರೈಕೆ ಕೇಂದ್ರದಲ್ಲಿ (ಕೆಎಸ್ಒಯು ಪ್ರಾದೇಶಿಕ ಕಚೇರಿ ಕಟ್ಟಡ) ಅವಿರತವಾಗಿ ರೋಗಿಗಳ ಶುಶ್ರೂಷೆ ಮಾಡಿ ಮನ್ನಣೆಗೆ ಭಾಜನರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಬಳಿಯ ಶಿರಾಡಿಯವರು. 33 ವರ್ಷಗಳಿಂದ ಚಿಕ್ಕಮಗಳೂರಿನಲ್ಲಿ ಶುಶ್ರೂಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕೊರೊನಾ ಸವಾಲುಗಳಿಗೆ ಸೆಡ್ಡು ಹೊಡೆದು ಒಂಬತ್ತು ತಿಂಗಳಿನಿಂದ ಒಂದೂ ರಜೆ ತೆಗೆದುಕೊಳ್ಳದೆ, ವಾರದ ರಜೆ ದಿನಗಳಲ್ಲೂ ಕಾಯಕ ನಿರ್ವಹಿಸಿದ್ದಾರೆ. ಕೊರೊನಾ ರೋಗಿಗಳಿಗೆ ಧೈರ್ಯ ತುಂಬಿ, ಚಿಕಿತ್ಸೆ ನೀಡಿ ಸಲುಹಿದ್ದಾರೆ.
ಎರಡು ಸಾವಿರ ಮಂದಿಯನ್ನು ಆರೈಕೆ ಮಾಡಿದ ತೃಪ್ತಿ ಅವರಿಗಿದೆ. ಕೋವಿಡ್ ಚಿಕಿತ್ಸಾ ವಿಭಾಗದಲ್ಲೇ ಮುಂದೆಯೂ ಕಾರ್ಯನಿರ್ವಹಿಸುವ ತುಡಿತ ಇದೆ.
‘ಕೋವಿಡ್ ಆರೈಕೆ ಕೇಂದ್ರದಲ್ಲಿ ಹಗಲಿರುಳು ಶ್ರಮಿಸಿದ್ದೇನೆ. ಬೆಳಿಗ್ಗೆ 8ರಿಂದ ರಾತ್ರಿ 9 ಗಂಟೆವರೆಗೆ ಕರ್ತವ್ಯ ನಿರ್ವಹಿಸಿದ್ದೇನೆ. ಆರೈಕೆ ಕೇಂದ್ರದಲ್ಲಿ ದಾಖಲಾದವರನ್ನು ಮುಟ್ಟಿ, ವಾತ್ಸಲ್ಯದಿಂದ ಮಾತನಾಡಿಸುತ್ತಿದ್ದೆ. ಮಾನಸಿಕ ಸಮಸ್ಯೆ ಇದ್ದವರನ್ನು ನಿಭಾಯಿಸುವುದು ತುಸು ಕಷ್ಟವಾಗುತ್ತಿತ್ತು. ‘ಈಸಬೇಕು ಇದ್ದು ಜಯಿಸಬೇಕು’ ಎಂದು ಎಲ್ಲರಿಗೂ ಧೈರ್ಯ ತುಂಬುತ್ತಿದ್ದೆ’ ಎಂದು ತಿಳಿಸಿದರು.
‘ರೋಗಿಗಳಿಗೆ ಹಣ್ಣು, ಆಹಾರ, ವೈದ್ಯರು ಸೂಚಿಸಿದ ಔಷಧಗಳನ್ನು ನೀಡುತ್ತಿದ್ದೆವು. ನಾಲ್ಕು ಅಂತಸ್ತಿನ ಕಟ್ಟಡವನ್ನು ಹತ್ತಿ–ಇಳಿಯುವುದು ಸ್ವಲ್ಪ ಕಷ್ಟವಾಗುತ್ತಿತ್ತು. ಆದರೆ, ರೋಗಿಗಳ ಶುಶ್ರೂಷೆಯಲ್ಲಿ ಸುಸ್ತು ಕಳೆದುಹೋಗುತ್ತಿತ್ತು’ ಎಂದು ಅನುಭವ ಹಂಚಿಕೊಂಡರು.
‘ವಯಸ್ಸಾಗಿದೆ, ಕೋವಿಡ್ ಕರ್ತವ್ಯಕ್ಕೆ ಹೋಗಬೇಡಿ, ರಜೆ ಹಾಕಿ ಮನೆಯಲ್ಲಿರಿ ಎಂದು ಬಹಳಷ್ಟು ಮಂದಿ ಹೇಳಿದರು. ಆಗಬೇಕಾದ್ದು, ಆಗಿಯೇ ತೀರುತ್ತದೆ ಅದನ್ನು ತಡೆಯಲು ಆಗುವುದಿಲ್ಲ. ಸೈನಿಕರು ಯುದ್ಧಕ್ಕೆ ಅಂಜುವುದಿಲ್ಲ, ಹಾಗೆಯೇ ಸಂಕಷ್ಟ ಸಂದರ್ಭದಲ್ಲಿ ನಾವು ಕರ್ತವ್ಯದಿಂದ ವಿಮುಖರಾಗಬಾರದು ಎಂದು ಮುನ್ನುಗ್ಗಿದೆ. ಕೋವಿಡ್ ರೋಗಿಗಳ ಶುಶ್ರೂಷೆ ಮಾಡಿದ ಖುಷಿ ಇದೆ’ ಎಂದು ಸಾರ್ಥಕಭಾವ ವ್ಯಕ್ತಪಡಿಸಿದರು.
ಅಣ್ಣಮ್ಮ ಅವರ ಕಾರ್ಯ ಗುರುತಿಸಿ ಜಿಲ್ಲಾಡಳಿತ ಕೊರೊನಾ ವಾರಿಯರ್ ಪುರಸ್ಕಾರ ನೀಡಿದೆ. ಸಹರಾ ಟ್ರಸ್ಟ್ ಮತ್ತು ಜೆಸಿಐ ಸಂಸ್ಥೆಯ ‘ಅತ್ಯುತ್ತಮ ಶುಶ್ರೂಷಕಿ’ ಗರಿಯೂ ಸಂದಿದೆ.
***
ಬಡಪಾಯಿಗಳ ಸಂಕಷ್ಟಕ್ಕೆ ಮಿಡಿದ ಹೃದಯ
ನಗರದ ಗೌರಿ ಕಾಲುವೆಯ ರೂಬೆನ್ ಮೊಸೆಸ್ ಅವರು ಲಾಕ್‌ಡೌನ್ ಅವಧಿಯಲ್ಲಿ ನಿರ್ಗತಿಕರ ಪಾಲನೆಗೆ ಶ್ರಮಿಸಿದ್ದಾರೆ. ನೆರವಿನ ಹಸ್ತ ಚಾಚಿ ಸಂಕಷ್ಟಗಳಿಗೆ ಸ್ಪಂದಿಸಿದ್ದಾರೆ.
ರೂಬೆನ್ ಅವರೊಂದಿಗೆ ಪತ್ನಿ ಸಹನಾ, ಪುತ್ರಿ ರೇಮಾ ಅವರೂ ಈ ಸಮಾಜಮುಖಿ ಕಾರ್ಯದಲ್ಲಿ ಸಾಥ್ ನೀಡಿದ್ದಾರೆ. ಕೋವಿಡ್ ತಲ್ಲಣದಲ್ಲಿ ಎದೆಗುಂದದೆ ಮೂರು ತಿಂಗಳು ಆ ಬಡಪಾಯಿಗಳಿಗೆ ಆಸರೆಯಾಗಿ ನಿಂತಿದ್ದರು.
ನಿರ್ಗತಿಕರ ಕಟ್ಟಿಂಗ್, ಶೇವಿಂಗ್ ಮಾಡಿದ್ದಾರೆ. ಯರ್ರಾಬಿರ್ರಿ ಬೆಳೆದಿದ್ದ ಉಗುರುಗಳನ್ನು ಕತ್ತರಿಸಿದ್ದಾರೆ. ಸ್ನಾನ ಮಾಡಿಸಿ ಬಟ್ಟೆ ತೊಡಿಸಿದ್ದಾರೆ. ಮಾಸ್ಕ್ ಒದಗಿಸಿದ್ದಾರೆ. ಊಟ, ಉಪಾಹಾರ ನೀಡಿ ದಯೆ ತೋರಿದ್ದಾರೆ.
‘ಲಾಕ್‌ಡೌನ್ ಸಂದರ್ಭದಲ್ಲಿ ನಿರ್ಗತಿಕರು, ಭಿಕ್ಷಕರು ತಂಗಲು ಮೊದಲು ಎಐಟಿ ವೃತ್ತದ ಬಳಿಯ ಅಂಬೇಡ್ಕರ್ ವಸತಿ ನಿಲಯದಲ್ಲಿ ವ್ಯವಸ್ಥೆ ಮಾಡಿದೆವು. ಅದಕ್ಕೆ ನಗರಸಭೆ ಆಯುಕ್ತರು, ಪೊಲೀಸರು ಸಹಕಾರ ನೀಡಿದರು. ದಾನಿಗಳ ನೆರವು ಪಡೆದು ಅವರಿಗೆ ಆಹಾರಕ್ಕೆ ಒದಗಿಸಿದೆವು. ಸಹಾಯ ಹಸ್ತ ತಂಡ, ಮಲೆನಾಡು ಕ್ರೈಸ್ತ ಅಭಿವೃದ್ಧಿ ಸಂಘಗಳ ಜೂತೆಗೂಡಿ ಕಾಯಕ ಮಾಡಿದೆವು’ ಎಂದು ರೂಬೆನ್ ತಿಳಿಸಿದರು.
‘ಯೋಗ, ವ್ಯಾಯಾಮ ಕಲಿಸಿದೆವು. ಅಲ್ಲಿಯೇ ಕರುಕುಶಲ ಕಲೆ (ಬ್ಯಾಗು–ಪರ್ಸ್ ತಯಾರಿಕೆ…) ತರಬೇತಿ ನೀಡಿದೆವು. ನಿಲಯದಲ್ಲಿ ತಂಗಿದ್ದ 70 ಮಂದಿ ಪೈಕಿ ಈಗ 25 ಮಂದಿಗೆ ಕೆಲಸ ಕೊಡಿಸಿದ್ದೇವೆ. ಕೋಳಿ ಫಾರಂ, ಲಾರಿ ಕಚೇರಿ, ಕಾಫಿ ತೋಟ, ಚಿಪ್ಸ್ ಅಂಗಡಿಗಳಲ್ಲಿ ದುಡಿಮೆ ಮಾಡುತ್ತಿದ್ದಾರೆ. ವೃದ್ಧರನ್ನು ಅನ್ನಪೂರ್ಣ ವೃದ್ಧಾಶ್ರಮಕ್ಕೆ ಸೇರಿಸಿ, ದಾರಿ ತೋರಿದ್ದೇವೆ’ ಎಂದು ಅವರು ತಿಳಿಸಿದರು.
ರೂಬೆನ್ ಅವರು ಹಲವಾರು ವರ್ಷಗಳಿಂದ ಸಮಾಜಮುಖಿ ಕಾರ್ಯಗಳನಲ್ಲಿ ತೊಡಗಿಸಿಕೊಂಡಿದ್ದಾರೆ.
ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ 2001ರಲ್ಲಿ ಜಿಲ್ಲಾ ಯುವ ಪ್ರಶಸ್ತಿ ನೀಡಿವೆ. ಲಯನ್ಸ್ ಕ್ಲಬ್‌ನ ‘ಅತ್ಯುತ್ತಮ ಕಾರ್ಯದರ್ಶಿ’ ಜಿಲ್ಲಾ ಪ್ರಶಸ್ತಿ ಲಭಿಸಿದೆ. ನವದೆಹಲಿಯ ಐ ಕೆನ್ ಫೌಂಡೇಷನ್‌ನ 2020ನೇ ಸಾಲಿನ ಹ್ಯುಮಾನಿಟೇರಿಯನ್ ಎಕ್ಸಲೆನ್ಸ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
***
ಗ್ರಾಮಸ್ಥರಿಗೆ ಕೋವಿಡ್ ಜಾಗೃತಿ ಕಾಯಕ
– ಕೆ.ಎಸ್.ಸರಸ್ವತಿ, ಅಂಗನವಾಡಿ ಕಾರ್ಯಕರ್ತೆ, ಕರ್ತಿಕೆರೆ, ಚಿಕ್ಕಮಗಳೂರು ತಾಲ್ಲೂಕು
ಅಂಗನವಾಡಿ ಕಾರ್ಯಕರ್ತೆ ಕೆ.ಎಸ್.ಸರಸ್ವತಿ ಅವರು ಗ್ರಾಮಸ್ಥರಲ್ಲಿ ಕೋವಿಡ್ ಜಾಗೃತಿ ಮೂಡಿಸಲು ಅವಿರತವಾಗಿ ಶ್ರಮಿಸಿದ್ದಾರೆ. ಮಳೆ, ಬಿಸಿಲು ಎನ್ನದೇ ಗ್ರಾಮದ ಮನೆಗಳಿಗೆ ತೆರಳಿ ಸಮೀಕ್ಷೆ ಮಾಡಿದ್ದಾರೆ.
ಕೋವಿಡ್ ತಡೆಗೆ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳನ್ನು ತಿಳಿಸಿದ್ದಾರೆ. ಆಗಾಗ್ಗೆ ಸಾಬೂನಿನಿಂದ ಕೈ ತೊಳೆಯಬೇಕು, ಮಾಸ್ಕ್ ಹಾಕಿಕೊಳ್ಳಬೇಕು, ಅಂತರ ಪಾಲಿಸಬೇಕು ಮೊದಲಾದ ಮಾರ್ಗಸೂಚಿಗಳ ಪಾಲನೆಯ ಅರಿವು ಮೂಡಿಸಿದ್ದಾರೆ.
ಸ್ವಚ್ಛತೆ ಕಾಪಾಡುವಂತೆ ಜನರಿಗೆ ಮಾಹಿತಿ ನೀಡಿದ್ದಾರೆ. ಗ್ರಾಮದಲ್ಲಿ ಸೋಂಕು ತಗುಲಿದ್ದವರನ್ನು ಆಸ್ಪತ್ರೆಗೆ ಕಳಿಸುವ, ಕುಟುಂಬದವರ ಕ್ವಾರಂಟೈನ್ ಮತ್ತು ಅವರಿಗೆ ಧೈರ್ಯ ತುಂಬಿದ್ದಾರೆ.
‘ಬಿಸಿಲಿನಲ್ಲಿ ಸುತ್ತಿ ಸಮೀಕ್ಷೆ ಮಾಡುವುದು ಸವಾಲಾಗಿತ್ತು. ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ಕಳಿಸಿದರೂ ಅವರ ಮನೆ ಸುತ್ತಮುತ್ತಲೂ ಯಾರೂ ಸುಳಿಯದ ಸ್ಥಿತಿ ಇತ್ತು. ಆ ಮನೆಗಳವರಿಗೆ ಕೊಡದಲ್ಲಿ ನೀರು ಒಯ್ದು ಕೊಟ್ಟಿದ್ದೇನೆ. ಹಣ್ಣು–ತರಕಾರಿಗಳನ್ನು ಒಯ್ದು ಕೊಟ್ಟಿದ್ದೇವೆ’ ಎಂದು ಅವರು ಸರಸ್ವತಿ ಅನುಭವಗಳನ್ನು ತಿಳಿಸಿದರು.
‘ಜಾತ್ರೆ, ಮದುವೆ ಸಮಾರಂಭಗಳಿಗೆ ಹೋಗದಂತೆ ಗ್ರಾಮಸ್ಥರಿಗೆ ತಿಳಿಸುತ್ತಿದ್ದೆ. ಕೋವಿಡ್ ಅಪಾಯಗಳನ್ನು ಜನರಿಗೆ ಮನವರಿಕೆ ಮಾಡುತ್ತಿದ್ದೆ. ಅನಗತ್ಯವಾಗಿ ಸುತ್ತಾಡದಂತೆ ಎಚ್ಚರಿಕೆ ನೀಡುತ್ತಿದ್ದೆವು’ ಎಂದು ಅವರು ತಿಳಿಸಿದರು.
ಸರಸ್ವತಿ ಅವರು ಕರ್ತಿಕೆರೆ ಗ್ರಾಮದವರು. ಬಿ.ಎ ಓದಿದ್ದಾರೆ. 15 ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯಾಗಿದ್ದಾರೆ. ಲಾಕ್‌ಡೌನ್ ಅವಧಿ, ಕೋವಿಡ್‌ನ ಈ ಕಾಲಘಟ್ಟದಲ್ಲಿ ಅವರ ಕಾರ್ಯ ಗುರುತಿಸಿ ಗ್ರಾಮ ಪಂಚಾಯಿತಿಯವರು ‘ಕೊರೊನಾ ವಾರಿಯರ್‘ ಪುರಸ್ಕಾರ ನೀಡಿ ಸನ್ಮಾನಿಸಿದ್ದಾರೆ.
***
ನಿರ್ಗತಿಕರಿಗೆ ಆಸರೆ ಸಮಾಜ ಸೇವಕರ ತಂಡ
ಮೂಡಿಗೆರೆಯ ಸಕ್ರಿಯ ಸಮಾಜ ಸೇವಕರ ತಂಡವು ಲಾಕ್‌ಡೌನ್ ಸಂದರ್ಭದಲ್ಲಿ ನಿರ್ಗತಿಕರಿಗೆ ಆಸರೆಯಾಗಿ ನಿಂತಿತ್ತು. ಪಟ್ಟಣದ ಅಡ್ಯಂತಾಯ ರಂಗಮಂದಿರ, ಬಸ್ ನಿಲ್ದಾಣ, ಸಂತೆಕಟ್ಟೆ, ಬಾಲಭವನ ಸಹಿತ ವಿವಿಧೆಡೆ 25ಕ್ಕೂ ನಿರ್ಗತಿಕರು ಇದ್ದರು. ಭಿಕ್ಷೆ ಬೇಡಿ ಬದುಕುತ್ತಿದ್ದರು. ಲಾಕ್ ಡೌನ್‌ನಿಂದಾಗಿ ಹೊಟ್ಟೆಪಾಡಿಗೆ ತಣ್ಣೀರುಬಟ್ಟೆ ಎನ್ನುವಂತಾಗಿತ್ತು. ಆ ಸಮಯದಲ್ಲಿ ತಂಡ ಅವರಿಗೆ ನೆರವಾಗಿತ್ತು.
ಫಿಶ್ ಮೋಣು ನೇತೃತ್ವದ ಈ ತಂಡದಲ್ಲಿ ಬಿಳಗುಳದ ಹಸೈನಾರ್, ಅಬ್ದುಲ್ ರೆಹಮಾನ್, ಆರೀಫ್ ಬಣಕಲ್, ಹಂಝಾ, ರೆಹಮಾನ್, ಸುಲೈಮಾನ್ ಸಹಿತ 14 ಮಂದಿ ಇದ್ದಾರೆ.
ಪಟ್ಟಣದ ನಿರ್ಗತಿಕರನ್ನು ಅಡ್ಯಂತಾಯ ರಂಗಮಂದಿರಕ್ಕೆ ಕರೆದೊಯ್ದು ಊಟದ ವ್ಯವಸ್ಥೆ ಕಲ್ಪಿಸಿದ್ದರು. ಪುರುಷ ನಿರ್ಗತಿಕರಿಗೆ ಕ್ಷೌರ ಮಾಡಿ, ದಾಡಿ ಬೋಳಿಸಿ, ಸ್ನಾನಕ್ಕೆ ವ್ಯವಸ್ಥೆ ಕಲ್ಪಿಸಿ ಅವರ ಪಾಲಿನ ಮಹಾಪೋಷಕರಾಗಿದ್ದರು.
ಲಾಕ್‌ಡೌನ್ ಅವಧಿಯಲ್ಲಿ ಹೋಟೆಲ್‌ಗಳು ಬಾಗಿಲು ಮುಚ್ಚಿದ್ದವು. ಉಪಾಹಾರ, ಊಟಕ್ಕೆ ಪರದಾಡುತ್ತಿದ್ದ ಕರ್ತವ್ಯನಿರತ ಪೊಲೀಸ್, ಆರೋಗ್ಯ ಸಿಬ್ಬಂದಿಗೂ ಆಹಾರ ವ್ಯವಸ್ಥೆ ಕಲ್ಪಿಸಿದ್ದರು.
ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯವ ಕಾಯಕಕ್ಕೆ ಆರೋಗ್ಯ ಇಲಾಖೆ ಜತೆ ಕೈ ಜೋಡಿಸಿದ್ದಾರೆ. ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ವಾಪಸಾಗಿರುವವರ ನಿಗಾ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ಮೃತಪಟ್ಟ ನಿರ್ಗತಿಕರೊಬ್ಬರು ಅಂತ್ಯಸಂಸ್ಕಾರವನ್ನು ತಂಡದವರು ಖುದ್ದಾಗಿ ನೆರವೇರಿಸಿದ್ದಾರೆ. ಮೂಡಿಗೆರೆ, ಬೇಲೂರು, ಸಕಲೇಶಪುರ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಕೋವಿಡ್‌ನಿಂದ ಸಾವಿಗೀಡಾದ 14 ಮಂದಿಯ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ.
ಕೋವಿಡ್‌ನಿಂದ ಮೃತಪಟ್ಟವರನ್ನು ಕುಟುಂಬದವರೇ ಮುಟ್ಟದಂಥ ಸ್ಥಿತಿ ಇದ್ದಾಗ ಈ ತಂಡವು ಜಾತಿ, ಧರ್ಮದ ಚೌಕಟ್ಟನ್ನು ಮೀರಿ ಅಂತ್ಯಕ್ರಿಯೆ ನೆರವೇರಿಸಿರುವುದು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಗಿದೆ.
ಕೊರೊನಾ ಸೋಂಕಿತರ ಸೇವೆ ಮಾತ್ರವಲ್ಲದೇ, ಈವರೆಗೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಪತ್ತೆಯಾದ 200ಕ್ಕೂ ಅಧಿಕ ಅನಾಥ ಶವಗಳನ್ನು ಅಂತ್ಯಸಂಸ್ಕಾರ ಮಾಡಿದ್ದಾರೆ, ಚಾರ್ಮಾಡಿ ಘಾಟಿಯಲ್ಲಿ ಸಿಗುವ ಅನಾಥ ಶವಗಳನ್ನು ಮೇಲೆತ್ತುವ ಕೆಲಸ, ಕೆರೆ, ಬಾವಿ, ನದಿಗಳಲ್ಲಿ ಸಿಗುವ ಅನಾಥ ಶವಗಳ ಸಂಸ್ಕಾರ ಕಾರ್ಯ, ರಕ್ತದಾನ, ಸ್ವಚ್ಛತಾ ಕಾರ್ಯಗಳನ್ನು ನಡೆಸುವ ಮೂಲಕ ಮಾದರಿಯಾಗಿದ್ದಾರೆ.
ತಂಡಕ್ಕೆ ಹಲವು ಪುರಸ್ಕಾರಗಳು ಸಂದಿವೆ. ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಜಿಲ್ಲಾ ಪ್ರಶಸ್ತಿ, ಮುಖ್ಯಮಂತ್ರಿ ಹರೀಶ್ ಸಾಂತ್ವನ ಯೋಜನೆಯಲ್ಲಿ ‘ಜೀವ ರಕ್ಷಕ’ ಪ್ರಶಸ್ತಿ, ಪೀಸ್ ಅಂಡ್ ಅವೆರ್ನೆಸ್ ಸಂಸ್ಥೆಯ ಮಹಾ ರಕ್ತದಾನಿ ಪ್ರಶಸ್ತಿ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.