ADVERTISEMENT

ಚಿಕ್ಕಮಗಳೂರು | ದತ್ತಮಾಲೆ ಧರಿಸಿದ ಆರ್‌.ಅಶೋಕ್

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2023, 16:31 IST
Last Updated 24 ಡಿಸೆಂಬರ್ 2023, 16:31 IST
ಚಿಕ್ಕಮಗಳೂರು ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ದತ್ತಮಾಲೆ ಧರಿಸಿದ ಆರ್.ಅಶೋಕ್
ಚಿಕ್ಕಮಗಳೂರು ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ದತ್ತಮಾಲೆ ಧರಿಸಿದ ಆರ್.ಅಶೋಕ್   

ಚಿಕ್ಕಮಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಇದೇ ಮೊದಲ ಬಾರಿ ದತ್ತಮಾಲೆ ಧರಿಸಿ ದತ್ತ ಜಯಂತಿಯಲ್ಲಿ ಭಾಗವಹಿಸಿದ್ದಾರೆ. ‘ದತ್ತಪೀಠ ಹಿಂದೂಗಳ ಧಾರ್ಮಿಕ ಕ್ಷೇತ್ರ ಎಂದು ಘೋಷಿಸಲು ಇರುವ ಗೊಂದಲ ಬಗೆಹರಿಸಲು ಹಾಲಿ ನ್ಯಾಯಾಧೀಶರನ್ನು ನೇಮಿಸಬೇಕು’ ಎಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಅಯೋಧ್ಯೆ, ಶ್ರೀರಂಗಪಟ್ಟಣ, ಕಾಶಿ ರೀತಿ ದತ್ತಪೀಠ ಕೂಡ ಹಿಂದೂಗಳ ಧಾರ್ಮಿಕ ಕ್ಷೇತ್ರ. ಈ ಎಲ್ಲಾ ಕ್ಷೇತ್ರಗಳಲ್ಲಿ ಇದ್ದ ಗೊಂದಲ ಬಗೆ ಹರಿದಿದೆ. ಅದೇ ರೀತಿ ಇಲ್ಲಿರುವ ಗೊಂದಲಗಳನ್ನೂ ಸರ್ಕಾರ ಬಗೆಹರಿಸಬೇಕು ಎಂದರು.

ಈ ಕ್ಷೇತ್ರವನ್ನು ಹಿಂದೂಗಳ ಕ್ಷೇತ್ರವಾಗಿ ಉಳಿಸಬೇಕು ಎಂಬ ಹೋರಾಟವನ್ನು ಲಕ್ಷಾಂತರ ಕಾರ್ಯಕರ್ತರು ನಿರಂತರವಾಗಿ ಮಾಡುತ್ತಿದ್ದಾರೆ. ಸರ್ಕಾರ ಹಿಂದೂಗಳ ಭಾವನೆ ಕೆರೆಳಿಸುವ ಪ್ರಯತ್ನ ಮಾಡಬಾರದು. ಈಗ ಹೋರಾಟದ ಮನೋಭಾವದಲ್ಲಿ  ದತ್ತಪೀಠಕ್ಕೆ ಬರುತ್ತಿರುವ ಕಾರ್ಯಕರ್ತರು ಮುಂದಿನ ವರ್ಷ ಸಂತಸ ಮತ್ತು ಸಂಭ್ರಮದಿಂದ ಭಾಗವಹಿಸುವಂತೆ ಆಗಬೇಕು. ಸರ್ಕಾರ ಆ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

‘ಈ ಹಿಂದೆ ದತ್ತಪೀಠಕ್ಕೆ ಭೇಟಿ ನೀಡಿದ್ದೇನೆ. ಇದೇ ಮೊದಲ ಬಾರಿಗೆ ಮಾಲೆ ಧರಿಸಿದ್ದೇನೆ. ಸೋಮವಾರ ಹೋಮದಲ್ಲೂ ಪಾಲ್ಗೊಳ್ಳುತ್ತೇನೆ. ಈ ಹಿಂದೆ ನ್ಯಾಯಾಲಯದಲ್ಲಿ ವಿಷಯ ಇತ್ತು. ಕಂದಾಯ ಸಚಿವನಾಗಿ ಆದೇಶ ಹೊರಡಿಸುವ ಸ್ಥಾನದಲ್ಲಿ ಇದ್ದು ಹಿಂದೂ ಅರ್ಚಕರ ನೇಮಕ ರೀತಿಯ ಕ್ರಮಗಳನ್ನು ಕೈಗೊಂಡಿದ್ದೇನೆ. ದತ್ತಪೀಠವೇ ಬೇರೆ, ದರ್ಗಾವೇ ಬೇರೆ ಎಂದು ನ್ಯಾಯಾಲಯ ಹೇಳಿದೆ. ಆದ್ದರಿಂದ ಗೊಂದಲ ಪರಿಹರಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ’ ಎಂದರು. ಬಿಜೆಪಿ ಮುಖಂಡರಾದ ಸಿ.ಟಿ.ರವಿ, ಪ್ರಮೋದ್ ಮಧ್ವರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.