ADVERTISEMENT

ರೈಲ್ವೆ ಮೇಲ್ಸೇತುವೆ: ಬೀದಿ ದೀಪ ಅಳವಡಿಕೆಗೆ ಆಗ್ರಹ

ಬಾಲು ಮಚ್ಚೇರಿ
Published 5 ನವೆಂಬರ್ 2024, 6:14 IST
Last Updated 5 ನವೆಂಬರ್ 2024, 6:14 IST
ರಾಷ್ಟ್ರೀಯ ಹೆದ್ದಾರಿ 73 ರಿಂದ ಕಂಸಾಗರಕ್ಕೆ ಹೋಗುವ ಮುಖ್ಯರಸ್ತೆಯ ಮೇಲ್ಸೇತುವೆ ಬಳಿ ರಸ್ತೆಯಲ್ಲಿ ಬೀದಿ ದೀಪಗಳೇ ಇಲ್ಲ.
ರಾಷ್ಟ್ರೀಯ ಹೆದ್ದಾರಿ 73 ರಿಂದ ಕಂಸಾಗರಕ್ಕೆ ಹೋಗುವ ಮುಖ್ಯರಸ್ತೆಯ ಮೇಲ್ಸೇತುವೆ ಬಳಿ ರಸ್ತೆಯಲ್ಲಿ ಬೀದಿ ದೀಪಗಳೇ ಇಲ್ಲ.   

ಕಡೂರು: ರಾಷ್ಟ್ರೀಯ ಹೆದ್ದಾರಿ 73ರಲ್ಲಿ (ಕೆ.ಎಂ.ರಸ್ತೆ) ಕಂಸಾಗರಕ್ಕೆ ಹೋಗುವ ಮುಖ್ಯರಸ್ತೆಯ  ರೈಲ್ವೆ ಮೇಲ್ಸೇತುವೆ ಬಳಿ ಬೀದಿ ದೀಪದ ಸೌಲಭ್ಯವಿಲ್ಲದೆ, ಜನರು ಭಯದಲ್ಲಿ ಓಡಾಡುವಂತಾಗಿದೆ.

2013ರಲ್ಲಿ ಕಡೂರು- ಚಿಕ್ಕಮಗಳೂರು ರೈಲ್ವೆ ಮಾರ್ಗ ಕಾಮಗಾರಿ ಆರಂಭವಾದಾಗ ಕಂಸಾಗರ ಗ್ರಾಮಕ್ಕೆ ಹೆದ್ದಾರಿಯಿಂದ ಇದ್ದ ಮುಖ್ಯರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಿಸಲಾಗಿದೆ. ಈ ಮಾರ್ಗದಲ್ಲಿ ಸಮುದಾಯ ಭವನ, ಶನೀಶ್ಚರ ದೇವಸ್ಥಾನವಿದೆ. ಕಂಸಾಗರ ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ಕಡೂರು- ಚಿಕ್ಕಮಗಳೂರಿನ ಶಾಲೆ ಕಾಲೇಜುಗಳಿಗೆ  ಹೋಗುವ ವಿದ್ಯಾರ್ಥಿನಿಯರು ಈ ಮೇಲ್ಸೇತುವೆಯ ಮೂಲಕ ಬರಬೇಕು. ಆದರೆ, ಸೇತುವೆ ನಿರ್ಮಾಣವಾದಾಗಿನಿಂದ ಇಲ್ಲಿಯವರೆಗೆ  ಸುಮಾರು ಒಂದು ಕಿ.ಮೀ. ಮಾರ್ಗದಲ್ಲಿ  ವಿದ್ಯುತ್ ದೀಪಗಳನ್ನು ಅಳವಡಿಸಿಲ್ಲ. ಸುತ್ತಮುತ್ತ ದಟ್ಟ ತೋಟಗಳಿಂದ ಕೂಡಿರುವ ಇಲ್ಲಿ ಸಂಜೆಯಾಗುತ್ತಿದ್ದಂತೆ ದಟ್ಟ ಕತ್ತಲು ಕವಿಯುತ್ತದೆ.

ಸಂಜೆ ದೇವಸ್ಥಾನಕ್ಕೆ ಹೋಗುವವರು, ಸಮುದಾಯ ಭವನದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಬರುವವರು, ಚಿಕ್ಕಮಗಳೂರಿಗೆ ಹೋಗಲು ಬಸ್ ಹತ್ತಲು ಹೆದ್ದಾರಿಗೆ ಬರುವವರಿಗೆ ಬೀದಿ ದೀಪ ಇಲ್ಲದೆ ತೀವ್ರ ತೊಂದರೆಯಾಗಿದೆ. ಮಹಿಳೆಯರು ಭಯದಲ್ಲೇ ಅನಿವಾರ್ಯವಾಗಿ ಈ ಮಾರ್ಗದಲ್ಲಿ ಬರಬೇಕಿದೆ.

ADVERTISEMENT

ಬೀದಿ ದೀಪ ಅಳವಡಿಸುವಂತೆ ಸರಸ್ವತೀಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಕಂಸಾಗರ ಸೋಮಶೇಖರ್ ಅವರು ಸಾಕಷ್ಟು ಬಾರಿ ಪ್ರಯತ್ನ ಪಟ್ಟರೂ ಫಲಪ್ರದವಾಗಿಲ್ಲ. ದಕ್ಷಿಣ ರೈಲ್ವೆ ಮೈಸೂರು ವಿಭಾಗೀಯ ಅಧಿಕಾರಿಗಳಿಗೂ ಅವರು ಮನವಿ ಸಲ್ಲಿಸಿದ್ದಾರೆ. ಸಂಸದ ಶ್ರೇಯಸ್ ಪಟೇಲ್ ಅವರು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ  ಜಿಲ್ಲಾ ಪಂಚಾಯಿತಿಗೆ ಪತ್ರ ಬರೆದಿದ್ದಾರೆ. 

ಈ ರಸ್ತೆ ಮತ್ತು ಮೇಲ್ಸೇತುವೆ ಮೇಲೆ ಬೀದಿ ಅಳವಡಿಕೆ ಆಗಿ ಜನರು ಭಯವಿಲ್ಲದೆ ಓಡಾಡುವಂತಾಗಬೇಕು ಎಂಬುದು ನಮ್ಮ ಆಶಯ ಎಂದು ಕಂಸಾಗರದ ರಮೇಶ್, ಕೃಷ್ಣಮೂರ್ತಿ, ಪದ್ಮನಾಭ್, ಕೆ.ವಿ.ರಾಜಣ್ಣ, ದೇವರಾಜ್, ರಾಜು, ರಘು ಹೇಳಿದರು.

ಮೈಸೂರಿನಲ್ಲಿ ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಕಂಸಾಗೆ ಸೋಮಶೇಖರ್ ಮತ್ತಿತರರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.