ADVERTISEMENT

ಕುದುರೆಮುಖ, ಕಳಸದಲ್ಲಿ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2022, 13:16 IST
Last Updated 4 ಜುಲೈ 2022, 13:16 IST
ಕಳಸ-ಹೊರನಾಡು ರಸ್ತೆಯ ಹೆಬ್ಬೊಳೆ ಸೇತುವೆಯ ಮೇಲೆ ಸತತ ಮಳೆಯ ಕಾರಣಕ್ಕೆ ಸೋಮವಾರ ಬೆಳಿಗ್ಗೆ ನೀರು ತುಂಬಿ ಹರಿಯಿತು.
ಕಳಸ-ಹೊರನಾಡು ರಸ್ತೆಯ ಹೆಬ್ಬೊಳೆ ಸೇತುವೆಯ ಮೇಲೆ ಸತತ ಮಳೆಯ ಕಾರಣಕ್ಕೆ ಸೋಮವಾರ ಬೆಳಿಗ್ಗೆ ನೀರು ತುಂಬಿ ಹರಿಯಿತು.   

ಕಳಸ: ತಾಲ್ಲೂಕಿನಾದ್ಯಂತ ಭಾನುವಾರ ರಾತ್ರಿಯಿಂದ ಧಾರಾಕಾರ ಮಳೆ ಸುರಿದಿದೆ. ಕುದುರೆಮುಖ, ಸಂಸೆ ವ್ಯಾಪ್ತಿಯಲ್ಲಿ ಸತತ ಮಳೆಯಿಂದ ಭದ್ರಾ ನದಿಯಲ್ಲಿ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಪ್ರವಾಹ ಭೀತಿ ಎದುರಾಗಿದೆ. ಭದ್ರಾ ನದಿಯು ಕೆಂಬಣ್ಣದ ನೀರಿನಿಂದ ಉಕ್ಕಿ ಹರಿಯುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಕಳಸ-ಹೊರನಾಡು ರಸ್ತೆಯ ಹೆಬ್ಬೊಳೆ ಸೇತುವೆ ಮೇಲೆ ನೀರು ಹರಿದು ಸಂಚಾರಕ್ಕೆ ಸ್ವಲ್ಪ ಸಮಯ ಅಡ್ಡಿಯಾಯಿತು. ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ಜನರು ಮನೆಗಳಿಂದ ಹೊರಬರದೆ, ಪಟ್ಟಣ ಬಿಕೋ ಎನ್ನುತ್ತಿತ್ತು. ಪ್ರವಾಸಿಗರ ಸಂಖ್ಯೆಯಲ್ಲೂ ಗಣನೀಯ ಇಳಿಮುಖವಾಗಿದೆ. ಮಳೆಯ ಕಾರಣ ತೋಟದ ಕೆಲಸಕ್ಕೆ ಕಾರ್ಮಿಕರು ರಜೆ ಮಾಡಿದ್ದರು. ಪಟ್ಟಣದ ಶಾಲೆಗಳು ಮಕ್ಕಳಿಗೆ ರಜೆ ಘೋಷಿಸಿದ್ದವು.

ಸತತ ಮಳೆಯಿಂದ ತಂಪಿನ ವಾತಾವರಣ ಸೃಷ್ಟಿಯಾಗಿದೆ. ಉಕ್ಕಿ ಹರಿಯುವ ಭದ್ರಾ ನದಿಯನ್ನು ಕಣ್ತುಂಬಿಕೊಳ್ಳಲು ಗ್ರಾಮಸ್ಥರು ನದಿ ದಂಡೆಗೆ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ADVERTISEMENT

ಕಳಸದಲ್ಲಿ ಭಾನುವಾರ ಬೆಳಿಗ್ಗೆಯಿಂದ ಸೋಮವಾರ ಬೆಳಿಗ್ಗೆವರೆಗೆ 114 ಮಿ.ಮೀ.ಮಳೆ ಆಗಿದೆ. ಇದು ಈ ವರ್ಷದಲ್ಲಿ 24 ಗಂಟೆಗಳಲ್ಲಿ ಸುರಿದಿರುವ ಗರಿಷ್ಠ ಮಳೆ ಪ್ರಮಾಣ. ಕಳಸೇಶ್ವರ ದೇವಸ್ಥಾನದ ಹಿಂದಿನ ಕಲ್ಲಿನ ಕಟ್ಟೆ ಭಾಗರ್ಶ ಕುಸಿದು ಬಿದ್ದಿದೆ. ಕಳಸ ತಹಶೀಲ್ದಾರ್ ನಂದಕುಮಾರ್, ಕಂದಾಯ ನಿರೀಕ್ಷಕ ಅಜ್ಜೇಗೌಡ ಮತ್ತು ಸಿಬ್ಬಂದಿ ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.