ADVERTISEMENT

ಅಜ್ಜಂಪುರ | ಅಬ್ಬರಿಸಿದ ಮಳೆ: ಹೊಲಗಳಲ್ಲಿ ನೀರು

ಅಜ್ಜಂಪುರ ತಾಲ್ಲೂಕಿನಲ್ಲಿ ಬೆಳೆ ಕೈತಪ್ಪುವ ಭೀತಿ, ರೈತರ ಆತಂಕ

ಜೆ.ಒ.ಉಮೇಶ್ ಕುಮಾರ್
Published 28 ಜುಲೈ 2024, 6:39 IST
Last Updated 28 ಜುಲೈ 2024, 6:39 IST
ಅಜ್ಜಂಪುರ ಸಮೀಪ ಗೌರಾಪುರದಲ್ಲಿ ಈರುಳ್ಳಿ ಕೃಷಿ ಮಾಡಿದ ಜಮೀನಿನಲ್ಲಿ ನಿಂತಿರುವ ನೀರು
ಅಜ್ಜಂಪುರ ಸಮೀಪ ಗೌರಾಪುರದಲ್ಲಿ ಈರುಳ್ಳಿ ಕೃಷಿ ಮಾಡಿದ ಜಮೀನಿನಲ್ಲಿ ನಿಂತಿರುವ ನೀರು   

ಅಜ್ಜಂಪುರ: ತಾಲ್ಲೂಕಿನಲ್ಲಿ ಮಳೆ ಪ್ರಮಾಣ ತಗ್ಗಿದೆ. ಆದರೆ, ಹೊಲಗಳಲ್ಲಿ ನಿಂತಿರುವ ನೀರಿನ ಪ್ರಮಾಣ ಇಳಿಕೆಯಾಗಿಲ್ಲ. ಕೃಷಿಭೂಮಿಯಲ್ಲಿ ಹೆಚ್ಚಿದ ತೇವಾಂಶ ಬೆಳೆಗಳಲ್ಲಿ ರೋಗ ಬಾಧೆಗೆ ಕಾರಣವಾಗುತ್ತಿದೆ. ಉತ್ತಮ ಬೆಳೆ ಬೆಳೆದು, ಹೆಚ್ಚಿನ ಆದಾಯ ಗಳಿಸುವ ನಿರೀಕ್ಷೆಯಲ್ಲಿದ್ದ ರೈತರನ್ನು ಆತಂಕಕ್ಕೀಡುಮಾಡಿದೆ.

ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ಈರುಳ್ಳಿ, ಆಲೂಗಡ್ಡೆ, ಹಸಿಮೆಣಸಿನ ಕಾಯಿ, ಮೆಕ್ಕೆಜೋಳ, ರಾಗಿ ಕೃಷಿ ಪೂರ್ಣಗೊಂಡಿದೆ. ಹೆಚ್ಚಿನ ಮಳೆಯಿಂದಾಗಿ ಬೆಳೆ ನೀರಿನಿಂದ ಆವೃತಗೊಂಡಿದೆ. ಈರುಳ್ಳಿಯಲ್ಲಿ ತಳರೋಗ ಅಥವಾ ಕೊಳೆರೋಗ ಕಾಣಿಸಿಕೊಂಡಿದ್ದು, ಇಳುವರಿ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.

‘ಹೊಲ ಹಸನು, ಬೇಸಾಯ, ಬಿತ್ತನೆ ಬೀಜ, ಬಿತ್ತನೆ, ಗೊಬ್ಬರ, ಬೆಳವಣಿಗೆ ಟಾನಿಕ್ ಸಿಂಪಡಣೆ, ಕಳೆ ತೆಗೆಸುವಿಕೆ ಸೇರಿದಂತೆ ಈವರೆಗೆ ಎಕರೆಗೆ ಕನಿಷ್ಠ ₹25 ಸಾವಿರ ವೆಚ್ಚ ಮಾಡಿದ್ದೇವೆ. ಮಳೆಯಿಂದ ಬೆಳೆ ಕೊಳೆಯುತ್ತಿದೆ. ಬೆಳೆಗೆ ಮಾಡಿರುವ ಖರ್ಚನ್ನು ಪಡೆಯುತ್ತೇವೆಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ’ ಎಂದು ಗೌರಾಪುರದ ರೈತ ಪ್ರಶಾಂತ್ ಅಳಲು ತೋಡಿಕೊಂಡರು.

ADVERTISEMENT

ತಾಲ್ಲೂಕಿನಲ್ಲಿ ಸುಮಾರು 13,500 ಎಕರೆಯಲ್ಲಿ ಈರುಳ್ಳಿ ಕೃಷಿ ನಡೆದಿದೆ. ಬೆಳೆಯಲ್ಲಿ ಕೊಳೆರೋಗ ಕಾಣಿಸುವ ಸಾಧ್ಯತೆ ಇದೆ. ರೈತರು ಬೆಳೆಯಲ್ಲಿ ನಿಂತ ನೀರು ಹೊರಹೋಗುವಂತೆ ವ್ಯವಸ್ಥೆ ಮಾಡಬೇಕು. ಬಳಿಕ ಮಣ್ಣಿನ ಉಷ್ಣಾಂಶ ಹೆಚ್ಚಿಸಿ, ಸಸಿ ಬೆಳವಣಿಗೆಗೆ ಸಹಕಾರಿಯಾಗುವ ಎನ್.ಪಿ.ಕೆ ಅಂಶವುಳ್ಳ ಗೊಬ್ಬರ ಹಾಕಬೇಕು ಎಂದು ತೋಟಗಾರಿಕಾ ಸಹಾಯಕ ನಿರ್ದೇಶಕ ಅವಿನಾಶ್ ಸಲಹೆ ನೀಡಿದ್ದಾರೆ.

ಮುಂಗಾರು ಆರಂಭದಲ್ಲಿ ಮುನಿಸಿಕೊಂಡಿದ್ದ ವರುಣ ಈಗ ಅಬ್ಬರಿಸಿದ್ದಾನೆ. ರೈತರು, ಪ್ರಾರಂಭದಲ್ಲಿ ಮಳೆ ಕೊರತೆ ನಡುವೆಯೇ ಬಿತ್ತನೆ ಮಾಡಿ, ಕೊಳವೆ ಬಾವಿ ನೀರು ಹಾಯಿಸಿ, ಬೆಳೆ ಉಳಿಸಿಕೊಂಡಿದ್ದರು. ಪ್ರಸ್ತುತ ವರುಣ ಹೆಚ್ಚು ಮಳೆ ಸುರಿಸಿ, ಬೆಳೆ ಕೊಳೆಯುವ ಸ್ಥಿತಿಗೆ ಕಾರಣವಾಗಿದ್ದಾನೆ ಎನ್ನುತ್ತಾರೆ ರೈತರು.

ಅಜ್ಜಂಪುರ ಸಮೀಪ ಗೌರಾಪುರದಲ್ಲಿ ಈರುಳ್ಳಿ ಕೃಷಿ ಮಾಡಿದ ಜಮೀನಿನಲ್ಲಿ ನಿಂತಿರುವ ನೀರು

‘ಬೆಳೆವಿಮೆ ಮಾಡಿಸಿ’ ಪ್ರತಿ ಎರಡೂವರೆ ಎಕರೆ ರಾಗಿಗೆ ₹ 850 ವಿಮಾ ಕಂತು ಪಾವತಿಸಿದರೆ ಬೆಳೆ ನಷ್ಟಕ್ಕೆ ₹42500 ಹಾಗೂ ಮುಸುಕಿನ ಜೋಳಕ್ಕೆ ₹1130 ವಿಮಾ ಕಂತನ್ನು ಆ.16 ರೊಳಗೆ ಪಾವತಿಸಿದರೆ ₹56500 ಬೆಳೆವಿಮೆ ದೊರೆಯಲಿದೆ.  ಶೇಂಗಾ ಬೆಳೆಗೆ ₹1090 ವಿಮಾಕಂತು ಪಾವತಿಸಿದರೆ ₹54500 ಬೆಳೆ ಪರಿಹಾರ ಸಿಗಲಿದೆ. ಅತಿವೃಷ್ಟಿ ಅನಾವೃಷ್ಟಿ ವೇಳೆ ಬೆಳೆ ನಷ್ಟದಿಂದ ಪಾರಾಗಲು ರೈತರು ಬೆಳೆವಿಮೆ ಪಡೆಯಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಶಿವಪ್ರಸಾದ್ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.