ಕಳಸ: ತಾಲ್ಲೂಕಿನಲ್ಲಿ ಎರಡು ವಾರಗಳಿಂದ ಸತತ ಮಳೆಯಾಗುತ್ತಿದ್ದು, ಎಲ್ಲೆಡೆ ನೀರಿನ ಒರತೆ ಎದ್ದಿವೆ.
ಬೇಸಿಗೆಯಲ್ಲಿ ಬಾಡಿ ಹೋಗಿದ್ದ ಹಳ್ಳಗಳಿಗೆ ಮರುಜೀವ ಬಂದಿದೆ. ಕಳಸದಲ್ಲಿ ಈವರೆಗೆ 225 ಸೆಂ.ಮೀ ಮಳೆ ಆಗಿದ್ದರೆ ಸಂಸೆ ಗ್ರಾಮದಲ್ಲಿ 275 ಸೆಂ.ಮೀ. ದಾಟಿದೆ. ಬೇಸಿಗೆಯಲ್ಲಿ ಮಳೆಯಾಗಿದ್ದ ಮರಸಣಿಗೆ ಮತ್ತು ಬಲಿಗೆ ಗ್ರಾಮದಲ್ಲಿ 350 ಸೆಂ.ಮೀ., ಕುದುರೆಮುಖ ಪ್ರದೇಶದಲ್ಲಿ 430 ಸೆಂ.ಮೀ. ಮಳೆಯಾಗಿದೆ. ರಾಷ್ಟ್ರೀಯ ಉದ್ಯಾನದಲ್ಲಿ ಸಣ್ಣ ತೊರೆಗಳು ವಯ್ಯಾರದಿಂದ ಹರಿಯುತ್ತಿವೆ. ದೊಡ್ಡ ಜಲಪಾತಗಳು ಭೋರ್ಗರೆಯುತ್ತಿವೆ.
ಮಳೆಯ ಜೊತೆಗೆ ವೇಗವಾದ ಗಾಳಿ ಸೇರಿದ್ದರಿಂದ ಬೇಗ ಜಲ ಆಗಿದೆ. ಕಳೆದ ವರ್ಷದ ಮಳೆಗಾಲದ ಒಟ್ಟು ಮಳೆಯ ಪ್ರಮಾಣವನ್ನು ಈ ವರ್ಷದ ಮಳೆ ಈಗಾಗಲೇ ಮೀರಿಸಿದೆ. ಕಳೆದ ವರ್ಷ ಗಾಳಿಯ ಸುಳಿವೇ ಇರದಿದ್ದರಿಂದ ಜಲವೂ ಆಗಿರಲಿಲ್ಲ ಎಂಬುದು ಕೃಷಿಕರ ಅಭಿಪ್ರಾಯ.
ಈ ಬಾರಿ ಮಳೆ –ಗಾಳಿಗೆ ಜಲದ ಕಣ್ಣುಗಳು ವೃದ್ಧಿಸಿವೆ. ಮುಂದಿನ ಬೇಸಿಗೆಯಲ್ಲಿ ಗುಡ್ಡದ ಒರತೆಯನ್ನು ನಂಬಿಕೊಂಡವರಿಗೆ ನಿರಾಸೆ ಆಗುವುದಿಲ್ಲ ಎಂದು ಗುರುತ್ವದ ಬಲದಿಂದ ಹರಿದು ಬರುವ ನೀರನ್ನೇ ನಂಬಿಕೊಂಡಿರುವ ಮುಜೆಕಾನಿನ ಅನಿಲ್‌ಕುಮಾರ್ ಹೇಳುತ್ತಾರೆ.
ಜುಲೈ ತಿಂಗಳ ಸತತ ಮಳೆಯು ಕಾಫಿ ಫಸಲು ನೆಲಕಚ್ಚುವಂತೆ ಮಾಡಿದೆ. ಆದರೆ ಮುಂದಿನ ಬೇಸಿಗೆಯಲ್ಲಿ ತೋಟಗಳಿಗೆ ನೀರು ಉಣಿಸಲು ನೀರಿನ ಕೊರತೆ ಆಗಲಾರದು. ಕಳೆದ ಬೇಸಿಗೆಯಲ್ಲಿ ಅಡಿಕೆ, ಕಾಫಿಗೆ ಹೆಚ್ಚಿನ ನೀರು ಸಿಗದೆ ಕಷ್ಟ ಆಗಿತ್ತು. ಈಗಿನ ಮಳೆ ನೋಡಿದರೆ ಮುಂದಿನ ಬೇಸಿಗೆಯಲ್ಲಿ ನಮ್ಮ ಹಳ್ಳ, ಕೆರೆಗಳಲ್ಲಿ ನೀರು ಇರಬಹುದು ಎನ್ನುತ್ತಾರೆ ಬೆಳೆಗಾರರು.
ಬೇಸಿಗೆ ಮಳೆ ಮತ್ತು ಮಳೆಗಾಲದ ಮಳೆಗಳಲ್ಲಿ ಆಗುವ ವ್ಯತ್ಯಾಸಗಳು ಮಲೆನಾಡಿನ ತೋಟಗಾರಿಕಾ ಬೆಳೆಗಳ ಪಾಲಿಗೆ ನಿರ್ಣಾಯಕ ಆಗಿರುವುದರಿಂದ ರೈತರು ಇವನ್ನು ಕುತೂಹಲದಿಂದ ಗಮನಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.