ಚಿಕ್ಕಮಗಳೂರು | ಮಳೆ: 158 ಅಪಾಯದ ಸ್ಥಳ
Published 15 ಜುಲೈ 2024, 7:45 IST Last Updated 15 ಜುಲೈ 2024, 7:45 IST ಮೀನಾ ನಾಗರಾಜ್
ಚಿಕ್ಕಮಗಳೂರು: ಮುಂಗಾರು ಈ ಬಾರಿ ಉತ್ತಮವಾಗಿದ್ದು, ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಸುರಿಯುತ್ತಿದೆ. ಜುಲೈ ಅಂತ್ಯ ಮತ್ತು ಆಗಸ್ಟ್‌ನಲ್ಲಿ ಇನ್ನೂ ಜೋರಾಗುವ ನಿರೀಕ್ಷೆ ಇದ್ದು, ಜಿಲ್ಲೆಯಲ್ಲಿ ಅಪಾಯ ಸಂಭವಿಸಬಹುದಾದ 158 ಪ್ರದೇಶಗಳನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಗುರುತು ಮಾಡಿದೆ.
ಮುಂಗಾರು ಪೂರ್ವ ಮತ್ತು ಮುಂಗಾರು ಮಳೆ ಉತ್ತಮವಾಗಿದ್ದು, ಸಿಡಿಲು ಬಡಿದು ಇಬ್ಬರು ಮತ್ತು ಮರ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ. ಒಂದು ಮನೆ ಸಂಪೂರ್ಣ ಬಿದ್ದಿದ್ದು, 49 ಮನೆಗಳಿಗೆ ಭಾರಿ ಹಾನಿಯಾಗಿದೆ. 70 ಮನೆಗಳಿಗೆ ಭಾಗಶಃ ಹಾನಿಯಾಗಿದೆ.
2019ರಲ್ಲಿ ಸಂಭವಿಸಿದ ಭೂಕುಸಿತದಿಂದ ಇಡೀ ಮಲೆನಾಡು ತತ್ತರಗೊಂಡಿತ್ತು. ಆಗ ನೆಲೆ ಕಳೆದುಕೊಂಡವರು ಪುನರ್ವಸತಿಗೆ ಇನ್ನೂ ತಡಕಾಡುತ್ತಿದ್ದಾರೆ. ಆದ್ದರಿಂದ ಜೋರು ಮಳೆ ಬಂದರೆ ಜನ ಭಯಪಡುವ ಸ್ಥಿತಿ ಇದೆ.
ಜುಲೈ ಅಂತ್ಯ ಮತ್ತು ಆಗಸ್ಟ್‌ನಲ್ಲಿ ಮಳೆ ತೀವ್ರಗೊಳ್ಳುವ ಸಾಧ್ಯತೆ ಇರುವುದರಿಂದ ಪ್ರವಾಹ, ಗುಡ್ಡ ಕುಸಿತ ರೀತಿಯ ಅಪಾಯ ಸಂಭವಿಸಬಹುದಾದ ಪ್ರದೇಶಗಳನ್ನು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಗುರುತು ಮಾಡಿ ನಿಗಾ ವಹಿಸಿದೆ. ಶೃಂಗೇರಿ ತಾಲ್ಲೂಕಿನಲ್ಲೇ ಅತಿ ಹೆಚ್ಚು 87 ಪ್ರದೇಶಗಳನ್ನು ಗುರುತಿಸಿದ್ದು, ಎನ್.ಆರ್.ಪುರ ತಾಲ್ಲೂಕಿನಲ್ಲಿ 21 ಮತ್ತು ಮೂಡಿಗೆರೆ ತಾಲ್ಲೂಕಿನಲ್ಲಿ 17 ಪ್ರದೇಶಗಳನ್ನು ಗುರುತಿಸಲಾಗಿದೆ.
ಜಿಲ್ಲಾಡಳಿತ ಕೂಡ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಅಪಾಯದ ಪ್ರದೇಶಗಳನ್ನು ಗುರುತಿಸಿರುವ ಅಧಿಕಾರಿಗಳು ಸಂದರ್ಭ ಬಂದರೆ ಜನರನ್ನು ಸ್ಥಳಾಂತರ ಮಾಡಲು ಸುರಕ್ಷಿತ 77 ಜಾಗಗಳನ್ನೂ ಗುರುತಿಸಿದ್ದಾರೆ.
ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಚೆನ್ನಡ್ಲು ಗ್ರಾಮದ ಸುರೇಶ್ ಎಂಬುವವರ ಮನೆಯ ಬಳಿ ಭೂ ಕುಸಿತವಾಗಿದ್ದು ಮನೆ ಕುಸಿಯುವ ಅಪಾಯ ಎದುರಾಗಿದೆ
ಸವಾಲಾದ ಗುಡ್ಡೇತೋಟ
ಕೊಪ್ಪ ತಾಲ್ಲೂಕಿನ ಗುಡ್ಡೇತೋಟದಲ್ಲಿ 14 ಕುಟುಂಬಗಳು ವಾಸಿಸುತ್ತಿದ್ದು ಜೋರು ಮಳೆಯಾದರೆ ತೊಂದರೆಗೆ ಸಿಲುಕುವ ಸಾಧ್ಯತೆ ಇದೆ. ಎತ್ತರದ ಪ್ರದೇಶದಲ್ಲಿರುವ ಈ ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಕರೆತರಲು ಜಿಲ್ಲಾಡಳಿತ ಮೂರು ಕಿಲೋ ಮೀಟರ್ ದೂರದಲ್ಲಿ ಜಿಲ್ಲಾಡಳಿತ 5ಎಕರೆ ಜಾಗ ಕೂಡ ಗುರುತು ಮಾಡಿದೆ. ಆದರೆ ಅಲ್ಲಿಂದ ಸ್ಥಳಾಂತರಗೊಳ್ಳಲು ನಿವಾಸಿಗಳು ಸಿದ್ಧರಿಲ್ಲ. ಅವರ ಮನವೊಲಿಸುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಮಳೆ ಜೋರಾಗಿ ಅಪಾಯ ಸಂಭವಿಸುವ ಸಂದರ್ಭ ಕಂಡರೆ ಬಲವಂತವಾಗಿಯೇ ಅವರನ್ನು ಅಲ್ಲಿಂದ ಸುರಕ್ಷಿತ ಪ್ರದೇಶಕ್ಕೆ ಕರೆತರಲಾಗುವುದು ಎಂದು ಹೇಳಿದರು. ಅವರು ವಾಸ ಇರುವ ಪ್ರದೇಶ ಮಾತ್ರ ಅಪಾಯದಲ್ಲಿದೆ. ಕೃಷಿ ಮಾಡುತ್ತಿರುವ ಜಮೀನಿಗೆ ತೊಂದರೆ ಇಲ್ಲ. ಸುರಕ್ಷಿತ ಜಾಗಕ್ಕೆ ಕರೆತರಲು ಮತ್ತೊಮ್ಮೆ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಮನವರಿಕೆ ಮಾಡಿಕೊಡಲಾಗುವುದು ಎಂದರು.
167 ಸೇತುವೆ 51 ಕಾಲು ಸಂಕಗಳ ಮೇಲೆ ನಿಗಾ
ಮಳೆ ಜೋರಾಗಿ ಹೊಳೆಗಳು ಉಕ್ಕಿದರೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ. ತೊಂದರೆ ಎದುರಾಗಬಹುದಾದ 167 ಸೇತುವೆ ಮತ್ತು 51 ಕಾಲು ಸಂಕಗಳನ್ನು ಜಿಲ್ಲಾಡಳಿತ ಗುರುತು ಮಾಡಿದ್ದು ಅವುಗಳ ಮೇಲೆ ನಿಗಾ ಇಟ್ಟಿದೆ. ‘ಜೋರು ಮಳೆ ಬಂದರೆ ಹಳೆ ಸೇತುವೆಗಳು ಕೊಚ್ಚಿ ಹೋಗುವ ಸಾಧ್ಯತೆ ಇದೆ. ಅಲ್ಲದೇ ನೀರು ರಸ್ತೆಗಳ ಮೇಲೆ ಉಕ್ಕುವ ಅಪಾಯವೂ ಇದೆ. ಆದ್ದರಿಂದ ಅವಗಳ ಮೇಲೆ ನಿಗಾ ಇರಿಸಿದ್ದೇವೆ. ಸಂದರ್ಭ ಬಂದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಹಳ್ಳಗಳಲ್ಲಿ ನೀರು ಹೆಚ್ಚಾದರೆ ಕಾಲು ಸಂಕಗಳು ಕೂಡ ಕೊಚ್ಚಿ ಹೋಗಲಿದ್ದು ಅವುಗಳನ್ನು ಸ್ಥಳೀಯ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ನೀರು ಹೆಚ್ಚಾದರೆ ಕಾಲುಸಂಕಗಳ ಮೇಲಿನ ನಡಿಗೆ ನಿಯಂತ್ರಿಸಲಾಗುವುದು ಎಂದು ಹೇಳಿದರು.
77 ಕಡೆ ಸುರಕ್ಷತ ಜಾಗ ಗುರುತು: ಜಿಲ್ಲಾಧಿಕಾರಿ
ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಗುರುತಿಸಿರುವ ಜಾಗದ ಜೊತೆಗೆ ಸ್ಥಳೀಯ ಮಳೆ ಪ್ರದೇಶಗಳನ್ನು ಆಧರಿಸಿ 77 ಕಡೆ ಸುರಕ್ಷಿತ ಜಾಗಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಪಡೆ ರಚನೆ ಮಾಡಲಾಗಿದೆ. ನೋಡಲ್ ಅಧಿಕಾರಿಗಳನ್ನೂ ನೇಮಕ ಮಾಡಲಾಗಿದ್ದು ಸ್ಥಳಕ್ಕೆ ತೆರಳಿ ವರದಿ ನೀಡಲು ತಿಳಿಸಲಾಗಿದೆ. ರಸ್ತೆ ಬಿರುಕು ಬಿಟ್ಟಿರುವ ಮಾಹಿತಿಯೂ ಬಂದಿದೆ. ಅವುಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದರು.