ADVERTISEMENT

Para Asian Games: ಅಂಗವೈಕಲ್ಯ ಮೆಟ್ಟಿ ನಿಂತ ಚಿನ್ನದ ಸಾಧಕಿ ರಕ್ಷಿತಾ ರಾಜು!

ಪ್ಯಾರಾ ಏಷ್ಯನ್‌ ಗೇಮ್ಸ್‌ನ ಅಥ್ಲೆಟಿಕ್ಸ್‌ನಲ್ಲಿ ಮಿಂಚಿದ ಬಾಳೂರು ಹೋಬಳಿಯ ರಕ್ಷಿತಾ ರಾಜು

ಅನಿಲ್ ಮೊಂತೆರೊ
Published 2 ನವೆಂಬರ್ 2023, 6:22 IST
Last Updated 2 ನವೆಂಬರ್ 2023, 6:22 IST
ಕೋಚ್ ರಾಹುಲ್ ಬಾಲಕೃಷ್ಣ ಜೊತೆಗೆ ರಕ್ಷಿತಾರಾಜು ಚಿನ್ನ ಗೆದ್ದ ಸಂಭ್ರಮದಲ್ಲಿ
ಕೋಚ್ ರಾಹುಲ್ ಬಾಲಕೃಷ್ಣ ಜೊತೆಗೆ ರಕ್ಷಿತಾರಾಜು ಚಿನ್ನ ಗೆದ್ದ ಸಂಭ್ರಮದಲ್ಲಿ   

ಕೊಟ್ಟಿಗೆಹಾರ: ಛಲ ಮತ್ತು ಆತ್ಮವಿಶ್ವಾಸಕ್ಕೆ ಉದಾಹರಣೆಯಂತೆ ಬೆಳೆದಿದ್ದಾರೆ, ಜಿಲ್ಲೆಯ ಮೂಡಿಗೆರೆ ತಾಲ್ಲೂಕು ಬಾಳೂರು ಹೋಬಳಿಯ ಗುಡ್ನಳ್ಳಿ ನಿವಾಸಿ ರಕ್ಷಿತಾ ರಾಜು. ಜನ್ಮತಃ ಅಂಧತ್ವ ಬಾಧಿಸಿದ್ದರೂ ಸಾಧನೆಯ ಬೆನ್ನೇರಿ ಸಾಗುತ್ತಿರುವ ಅವರು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಹೆಸರು ಗಳಿಸಿದ್ದು ಇದೀಗ ಪ್ಯಾರಾ ಏಷ್ಯನ್‌ ಗೇಮ್ಸ್‌ನಲ್ಲೂ ಮಿಂಚಿದ್ದಾರೆ.

ಚೀನಾದ ಹಾಂಗ್‌ಝೌನಲ್ಲಿ ನಡೆಯುತ್ತಿರುವ ಕೂಟದ ಮಹಿಳೆಯರ ಟಿ–11 ವಿಭಾಗದ 1500 ಮೀಟರ್ಸ್ ಓಟವನ್ನು 5 ನಿಮಿಷ 21.45 ಸೆಕೆಂಡುಗಳಲ್ಲಿ ಪೂರ್ತಿಗೊಳಿಸಿ ಚಿನ್ನದ ಪದಕ ಗೆದ್ದು ಅವರು ಸಂಭ್ರಮಿಸಿದ್ದಾರೆ.

ಬಾಲ್ಯದಲ್ಲೇ ತಂದೆ ರಾಜು ಮತ್ತು ತಾಯಿ ಗೀತಾ ಅವರನ್ನು ಕಳೆದುಕೊಂಡ ರಕ್ಷಿತಾರಾಜು ಅವರನ್ನು ಅಂಗವೈಕಲ್ಯವೂ ಕಾಡಿತು. ಅಜ್ಜಿ ಲಲಿತಮ್ಮ ಅವರ ವಾತ್ಸಲ್ಯದಲ್ಲಿ ಬೆಳೆದ ಅವರು ಪ್ರಾಥಮಿಕ ಶಿಕ್ಷಣಕ್ಕೆ ಸೇರಿದ್ದು ಸ್ಥಳೀಯ ವಾಟೇಕಾನ್ ಸರ್ಕಾರಿ ಪ್ರಾಥಮಿಕ ಶಾಲೆಗೆ. ಅಂಧತ್ವ ಇದ್ದ ಕಾರಣ ಆ ಶಾಲೆಯಲ್ಲಿ ಕಲಿಯುವುದು ಕಷ್ಟವಾಯಿತು. ಅವರ ಸಮಸ್ಯೆ ಅರಿತ ಶಿಕ್ಷಕಿ ಸಿಂತಿಯಾ ಪಾಯ್ಸ್ ಅವರು ಚಿಕ್ಕಮಗಳೂರಿನ ಕೆಂಪನಹಳ್ಳಿಯ ಆಶಾ ಕಿರಣ ಅಂಧರ ಶಾಲೆಗೆ ಸೇರಿಸಿದರು.

ADVERTISEMENT

ಶಾಲೆಯ ಆಡಳಿತಗಾರ ಜೆ.ಪಿ.ಕೃಷ್ಣೇಗೌಡ ಅವರ ಆಶ್ರಯದಲ್ಲಿ ಅವರ ಶಿಕ್ಷಣ ಸಾಂಗವಾಗಿ ಸಾಗಿತು. ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ರಕ್ಷಿತಾ ರಾಜು ಅವರಿಗೆ ದೈಹಿಕ ಶಿಕ್ಷಣ ಶಿಕ್ಷಕ ಪಿ.ಮಂಜು ತರಬೇತಿ ನೀಡಿದರು. 2014ರಲ್ಲಿ ಬೆಂಗಳೂರಿನ ಕೋಚ್ ರಾಹುಲ್ ಬಾಲಕೃಷ್ಣ ಹಾಗೂ ರೋಷನ್, ಗೋವಿಂದ್ ಮತ್ತು ಗೈಡ್ ರನ್ನರ್ ಸೌಮ್ಯಾ ತಬರೇಶ್‌ ಬಳಿ ತರಬೇತಿಗೆ ಸೇರಿದರು. 2017 ಪ್ಯಾರಿಸ್‌ನಲ್ಲಿ ಟಿ–11 ವಿಭಾಗದವರ 1500ಮೀಟರ್ಸ್‌ ಓಟವನ್ನು 5 ನಿಮಿಷ 26 ಸೆಕೆಂಡುಗಳಲ್ಲಿ ಕ್ರಮಿಸಿ ಮಿಂಚಿದರು. 2018ರಲ್ಲಿ ಇಂಡೊನೇಷ್ಯಾದ ಜಕಾರ್ತದಲ್ಲಿ ಪ್ಯಾರಾಲಿಂಪಿಕ್ ಕೂಟದ 1500 ಮೀ ಓಟವನ್ನು 5 ನಿಮಿಷ 40 ಸೆಕೆಂಡುಗಳಲ್ಲಿ ಕ್ರಮಿಸಿ ಚಿನ್ನದ ಪದಕ ಗೆದ್ದುಕೊಂಡರು. ಪ್ರಧಾನಿ ನರೇಂದ್ರ ಮೋದಿ, ನಟ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅವರಿಂದ ಮೆಚ್ಚುಗೆ ಪಡೆದರು.

ಕಳೆದ ವರ್ಷ ನವದೆಹಲಿ ಹಾಗೂ ಪುಣೆಯಲ್ಲಿ ನಡೆದ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ಗೆದ್ದಿದ್ದರು. ಈ ವರ್ಷ ಪೆಬ್ರುವರಿಯಲ್ಲಿ ದುಬೈನಲ್ಲಿ ನಡೆದ ಅಂತರರಾಷ್ಟ್ರೀಯ ಮುಕ್ತ ಪ್ಯಾರಾಲಿಂಪಿಕ್ಸ್‌ನ 1500ಮೀಟರ್ಸ್‌ ಓಟದಲ್ಲಿ ಬೆಳ್ಳಿ ಪದಕ ಗಳಿಸಿದರು. ಬೆಂಗಳೂರಿನಲ್ಲಿ 400ಮೀ, 1500ಮೀ ಓಟದಲ್ಲೂ ಬೆಳ್ಳಿ ಪದಕ ಪಡೆದರು.

ಕೋಚ್ ರಾಹುಲ್ ಬಾಲಕೃಷ್ಣ ಜೊತೆ ಓಟದಲ್ಲಿ ನಿತ್ಯದ ರಕ್ಷಿತಾರಾಜು
ಅಂಧ ಕ್ರೀಡಾಪಟು ರಕ್ಷಿತಾರಾಜು
ಚೀನಾದ ಹಾಂಗ್ ಝ್ ನಲ್ಲಿ ರಕ್ಷಿತಾರಾಜು ಜೊತೆಗೆ ಭಾರತ ತಂಡ
ಬಡ ಕುಟುಂಬದಿಂದ ಬಂದ ರಕ್ಷಿತಾಗೆ ಸರ್ಕಾರಿ ನೌಕರಿ ಮತ್ತು ನಿವೇಶನ ಸೇರಿದಂತೆ ವಿವಿಧ ಸೌಲಭ್ಯಗಳು ಸಿಗುವಂತಾಗಬೇಕು ಅದರಿಂದ ಅವರ ಭವಿಷ್ಯದ ಜೀವನಕ್ಕೆ ಅನುಕೂಲ ಆಗಲಿದೆ. –
ಬಾಲಕೃಷ್ಣ ಬಾಳೂರು ಬೆಳೆಗಾರರ ಸಂಘದ ಅಧ್ಯಕ್ಷ
ಕ್ರೀಡೆಯಲ್ಲಿ ಸಾಧನೆ ಮಾಡಲು ಸಹಕರಿಸಿದ ಶಿಕ್ಷಕರು ತರಬೇತುದಾರರು ಹಾಗೂ ಕ್ರೀಡಾಧಿಕಾರಿಗಳಿಗೆ ಚಿರ ಋಣಿ. ಅತ್ತೆಯ ವಾತ್ಸಲ್ಯ ಮತ್ತು ಆಶೀರ್ವಾದ ನನಗೆ ಪ್ರೇರಣೆಯಾಗಿ ನಿಂತಿದೆ.
–ರಕ್ಷಿತಾ ರಾಜು ಚಿನ್ನದ ಪದಕ ವಿಜೇತೆ
ರಕ್ಷಿತಾ ಚಿನ್ನದ ‍ಪದಕ ಗೆದ್ದಿರುವುದು ಸಂತೋಷದ ವಿಷಯ. ಗ್ರಾಮೀಣ ಭಾಗದ ಹುಡುಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿ ಊರ ಹೆಸರಿಗೆ ಕೀರ್ತಿ ತಂದಿರುವುದು ಹೆಮ್ಮೆಯ ಸಂಗತಿ. –
ಸಿಂತಿಯಾ ಪಾಯ್ಸ್ ಶಿಕ್ಷಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.