ಬಾಳೆಹೊನ್ನೂರು: ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಯ 31ನೇ ವರ್ಷದ ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜಾ ತಪೋನುಷ್ಠಾನ ಇದೇ 29ರಿಂದ ಆಗಸ್ಟ್ 27ರ ವರೆಗೆ ನಡೆಯಲಿದೆ.
ಪ್ರತಿದಿನ ಸಂಜೆ 7ಕ್ಕೆ ಗಂವ್ಹಾರ ಹಿರೇಮಠದ ವಿರೂಪಾಕ್ಷ ದೇವರು ಮತ್ತು ದಾನಯ್ಯ ದೇವರು ಅವರಿಂದ ‘ಶ್ರೀ ಜಗದ್ಗುರು ರೇಣುಕ ವಿಜಯ’ ಪುರಾಣ ಪ್ರವಚನ ನಡೆಯುವುದು. ಜತೆಗೆ ವಾಗ್ಮಿಗಳಿಂದ ನುಡಿಸೇವೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತವೆ. ಪ್ರತಿ ಸೋಮವಾರ ಮತ್ತು ಗುರುವಾರ ರಂಭಾಪುರಿ ಸ್ವಾಮೀಜಿ ಸಭೆಯಲ್ಲಿ ಆಶೀರ್ವಚನ ನೀಡುವರು. ಪ್ರತಿದಿನ ಬೆಳಿಗ್ಗೆ 8.30 ಗಂಟೆಗೆ ಇಷ್ಟಲಿಂಗ ಮಹಾಪೂಜೆಯಲ್ಲಿ ಸೇವಾಕರ್ತರು ಮತ್ತು ಭಕ್ತಾದಿಗಳು ಪಾಲ್ಗೊಳ್ಳಲು ಅವಕಾಶವಿದೆ.
ಆ.1ರಂದು ಶಿವಾನಂದ ರಾಜೇಂದ್ರ ಶಿವಾಚಾರ್ಯ ಭಗವತ್ಪಾದರ 75ನೇ ಪುಣ್ಯ ಸ್ಮರಣೋತ್ಸವ ನಡೆಯಲಿದ್ದು, ಖಾಂಡ್ಯ ಮತ್ತು ಜಾಗರ ಹೋಬಳಿ ಶಿಷ್ಯ ಸಮುದಾಯದಿಂದ ದಾಸೋಹ ಸೇವೆ ಜರುಗುವುದು. ಆ.5ರಂದು ವೀರರುದ್ರ ಮುನಿದೇವ ಶಿವಾಚಾರ್ಯ ಭಗವತ್ಪಾದರ 30ನೇ ಪುಣ್ಯ ಸ್ಮರಣೆ ಜರುಗಲಿದ್ದು, ಆಲ್ದೂರು ಹೋಬಳಿ ವೀರಶೈವ ಸಮಾಜದಿಂದ ಪೂಜಾ ಹಾಗೂ ದಾಸೋಹ ಸೇವೆ ನಡೆಯುವುದು. ವರ್ಷದ 365 ದಿನ ರುದ್ರಾಭಿಷೇಕ ಹಾಗೂ ಶ್ರಾವಣ ಮಾಸ ಪರ್ಯಂತ ಮಹಾರುದ್ರಾಭಿಷೇಕ ಹಾಗೂ ಸಿಹಿ ಪ್ರಸಾದ ವಿತರಣೆ ಸೇವೆಯನ್ನು ಭದ್ರಾವತಿಯ ಲಿಂ.ಎಸ್.ಜಿ.ಶಿವಶಂಕರಯ್ಯನವರ ಮಕ್ಕಳು ನೆರವೇರಿಸುವರು.
ಪ್ರತಿನಿತ್ಯ ರೇಣುಕಾಚಾರ್ಯರಿಗೆ, ಕ್ಷೇತ್ರನಾಥ ವೀರಭದ್ರ ಸ್ವಾಮಿಗೆ, ಶಕ್ತಿಮಾತೆ ಚೌಡೇಶ್ವರಿಗೆ, ಸೋಮೇಶ್ವರ ಮಹಾಲಿಂಗಕ್ಕೆ ಮಹಾರುದ್ರಾಭಿಷೇಕ, ಅಷ್ಟೋತ್ತರ, ಮಹಾಮಂಗಲ ಹಾಗೂ ಲಿಂಗೈಕ್ಯ ಸ್ವಾಮೀಜಿಗಳ ಗದ್ದುಗೆಗೆ ವಿಶೇಷ ಪೂಜೆ ನಡೆಯಲಿದೆ ಎಂದು ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.