ರಂಭಾಪುರಿ ಪೀಠ (ಬಾಳೆಹೊನ್ನೂರು): ಜೀವನೋಪಾಯಕ್ಕಾಗಿ ಬಡವರು ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ತೆರವುಗೊಳಿಸುತ್ತಿರುವ ಅರಣ್ಯ ಇಲಾಖೆಯ ಕ್ರಮ ಸರಿಯಲ್ಲ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಶ್ರಾವಣ ಪೂಜಾನುಷ್ಠಾನದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಪರಿಸರ ಸಂರಕ್ಷಣೆಗೆ ವಿರೋಧವಿಲ್ಲ. ಆದರೆ ಒತ್ತುವರಿ ತೆರವು ನೆಪದಲ್ಲಿ ಬಡವರಿಗೆ ತೊಂದರೆ ಕೊಡಬಾರದು ಎಂದರು.
ಮಲೆನಾಡಿನಲ್ಲಿ ಬದುಕುತ್ತಿರುವ ಬಡ ಕುಟುಂಬಗಳು 1ಅಥವಾ 2 ಎಕರೆ ಭೂಮಿ ಸಾಗುವಳಿ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಅವರಿಗೆ ಮಾಹಿತಿ ನೀಡದೆ ಕಾಫಿ ಗಿಡಗಳನ್ನು ಕತ್ತರಿಸಿ ಹಾಕುತ್ತಿರುವುದು ನೋವಿನ ಸಂಗತಿ. ಸರ್ಕಾರ ಎಚ್ಚತ್ತುಕೊಂಡು ಈ ಕ್ರಮವನ್ನು ನಿಲ್ಲಿಸಲು ತಿಳಿಸಬೇಕು. ಬಡವರು ಒತ್ತುವರಿ ಮಾಡಿರುವ ಭೂಮಿ ಅರಣ್ಯ ವ್ಯಾಪ್ತಿಗೆ ಬರುವುದಾದರೆ ಅರಣ್ಯ ಹಕ್ಕು ಕಾಯ್ದೆಯಡಿ ಸಕ್ರಮ ಮಾಡಿಕೊಡಲಿ ಎಂದು ಅವರು ಆಗ್ರಹಿಸಿದರು.
ಸಾವಿರಾರು ಎಕರೆ ಒತ್ತುವರಿ ಮಾಡಿರುವ ಭೂಮಾಲೀಕರು, ಕಾರ್ಪೊರೇಟ್ ಕಂಪನಿಗಳು ಮತ್ತು ಗಣಿ ಉದ್ಯಮಿಗಳ ಬಗ್ಗೆ ಕ್ರಮ ಕೈಗೊಳ್ಳದೆ ಬಡವರನ್ನು ತೊಂದರೆಗೊಳಪಡಿಸುವುದು ಕ್ರಮ ಒಳ್ಳೆಯದಲ್ಲ. ಸರ್ಕಾರ ಹಠ ಹಿಡಿದರೆ ಮಲೆನಾಡಿನಲ್ಲಿ ಉಗ್ರ ಹೋರಾಟ ನಡೆಯಲಿದೆ ಎಂದು ಸರ್ಕಾರಕ್ಕೆ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.