ADVERTISEMENT

ಚಿಕ್ಕಮಗಳೂರು: ಸಂತ್ರಸ್ತರಿಗೆ ದೊರಕದ ಪುನರ್ವಸತಿ

ಗುಡ್ಡ ಕುಸಿತಕ್ಕೆ ಐದು ವರ್ಷ: ಹಸಿರಾದ ಗುಡ್ಡ: ಕೆಂಪಾಗೇ ಉಳಿದ ಬದುಕು

ವಿಜಯಕುಮಾರ್ ಎಸ್.ಕೆ.
Published 10 ಜುಲೈ 2024, 4:31 IST
Last Updated 10 ಜುಲೈ 2024, 4:31 IST
<div class="paragraphs"><p>ಮಲೆಮನೆ ಗುಡ್ಡ ಕುಸಿತದಲ್ಲಿ ಹಾನಿಗೀಡಾಗಿದ್ದ ಮನೆಯ ಈಗ ಕಾಡಿನಲ್ಲಿ ಮುಚ್ಚಿ ಹೋಗಿರುವುದು</p></div>

ಮಲೆಮನೆ ಗುಡ್ಡ ಕುಸಿತದಲ್ಲಿ ಹಾನಿಗೀಡಾಗಿದ್ದ ಮನೆಯ ಈಗ ಕಾಡಿನಲ್ಲಿ ಮುಚ್ಚಿ ಹೋಗಿರುವುದು

   

ಚಿಕ್ಕಮಗಳೂರು: ಗುಡ್ಡ ಕುಸಿತದಿಂದ ಕೆಂಪು ಬಣ್ಣಕ್ಕೆ ತಿರುಗಿದ್ದ ಗುಡ್ಡಗಳು ಮತ್ತೆ ಹಸಿರು ಬಣ್ಣಕ್ಕೆ ತಿರುಗಿವೆ. ಐದು ವರ್ಷಗಳ ಅವಧಿಯಲ್ಲಿ ಕಾಡು ಮತ್ತೆ ತನ್ನ ರೂಪಕ್ಕೆ ಹೊರಳಿದೆ. ಕೆಮ್ಮಣ್ಣಿನೊಂದಿಗೆ ಕೊಚ್ಚಿ ಹೋದ ಮನೆಗಳ ಅವಶೇಷಗಳೂ ಅದರಲ್ಲಿ ಮುಚ್ಚಿ ಹೋಗಿವೆ. ಆಗ ನೆಲೆ ಕಳೆದುಕೊಂಡ ಜನರ ಬದುಕು ಮಾತ್ರ ಇನ್ನೂ ಬೀದಿಯಲ್ಲೇ ಇದೆ.

‘2019ರ ಆಗಸ್ಟ್‌ 9ರಂದು ವರಮಹಾಲಕ್ಷ್ಮೀ ಹಬ್ಬ. ಅಂದು ಎಲ್ಲರೂ ಹಬ್ಬದ ಸಂಭ್ರಮದಲ್ಲಿದ್ದರೆ ಮಲೆನಾಡಿನಲ್ಲಿ ಮಳೆಯ ಅಬ್ಬರ ಜೋರಾಗಿತ್ತು. ಮೂಡಿಗೆರೆ ತಾಲ್ಲೂಕಿನ ಮಧುಗುಂಡಿ ಮತ್ತು ಮಲೆಮನೆ ಬಳಿ ಅಂದು ಮಧ್ಯಾಹ್ನ 3.30ರ ಸುಮಾರಿಗೆ ಗುಡ್ಡವೊಂದು ಕುಸಿದು ಅದರ ಬುಡದಲ್ಲಿದ್ದ ಮನೆಗಳತ್ತ ನುಗ್ಗಿತ್ತು. ನೋಡ ನೋಡುತ್ತಲೇ ಮನೆಗಳು ಮುಚ್ಚಿ ಹೋದವು, ಮಣ್ಣಿನೊಂದಿಗೆ ಕೊಚ್ಚಿ ಹೋದವು, ತೋಟಗಳು ಮಾಯವಾದವು...’ ಗುಡ್ಡ ಕುಸಿತವನ್ನು ಕಣ್ಣಾರೆ ಕಂಡ ಮೂಡಿಗೆರೆ ತಾಲ್ಲೂಕಿನ ಮಲೆಮನೆ ಗ್ರಾಮಸ್ಥರು ಹೇಳುವ ಮಾತಿದು.

ADVERTISEMENT

ಮೂಡಿಗೆರೆ ತಾಲ್ಲೂಕಿನ ಮಧುಗುಂಡಿಯಲ್ಲಿ ಒಬ್ಬ ವ್ಯಕ್ತಿ ಪ್ರಾಣ ಕೂಡ ಕಳೆದುಕೊಂಡರು. ಮನೆ ಮತ್ತು ಜಮೀನು ಕಳೆದುಕೊಂಡ ಮಲೆಮನೆ ಮತ್ತು ಮದುಗುಂಡಿಯ 11 ಕುಟುಂಬಗಳು ಇಂದಿಗೂ ಬೀದಿಯಲ್ಲೇ ಇವೆ. ಕಳಸ ತಾಲ್ಲೂಕಿನ ಮರಸಣಿಗೆ ಪಂಚಾಯಿತಿ ವ್ಯಾಪ್ತಿಯ ಚನ್ನಡಲು ಗ್ರಾಮದಲ್ಲೂ ಅದೇ ದಿನ ಗುಡ್ಡ ಕುಸಿತದಿಂದ ಯುವಕ ಪ್ರಾಣ ಕಳೆದುಕೊಂಡರೆ, ತೋಟಗಳು ಮಣ್ಣಿನೊಂದಿಗೆ ಕೊಚ್ಚಿ ಹೋದವು.

ಗುಡ್ಡ ಕುಸಿದಿದ್ದ ಸ್ಥಳಗಳಲ್ಲಿ ಈಗ ಮರಗಿಡಗಳು ಬೆಳೆದಿವೆ. ಮನೆಗಳ ಗೋಡೆಗಳು ಅವಶೇಷಗಳಾಗಿ ಕಾಡಿನಲ್ಲಿ ಮುಚ್ಚಿ ಹೋಗಿವೆ. ಪ್ರಕೃತಿ ತನ್ನ ಕೆಲಸ ಮುಂದುವರಿಸಿ ಹಸಿರು ಹೊದ್ದಿದೆ. ಸರ್ಕಾರ ನಂಬಿರುವ ಸಂತ್ರಸ್ತರು ಮಾತ್ರ ಇನ್ನೂ ನಿರ್ವಸತಿಗರಾಗಿಯೇ ಉಳಿದಿದ್ದಾರೆ.

‘ದುರಂತ ಸಂಭವಿಸಿದ ಬಳಿಕ ಗ್ರಾಮಕ್ಕೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಆದಿಯಾಗಿ ರಾಜಕೀಯ ಪಕ್ಷಗಳ ನಾಯಕರು ಭೇಟಿ ನೀಡಿದ್ದರು. ಅಧಿಕಾರಿಗಳ ದಂಡೇ ಬಂದು ನಿಂತಿತ್ತು. ಆಗ ನೀಡಿದ್ದ ಭರವಸೆಗಳೆಲ್ಲವೂ ಹುಸಿಯಾಗಿವೆ. ಬಾಡಿಗೆ ಮನೆಗಳಲ್ಲಿ, ಕಾಫಿ ತೋಟದ ಲೇನ್‌ ಮನೆಗಳಲ್ಲಿ ಜೀವನ ನಡೆಸುವಂತಾಗಿದೆ. ಅಂದು ತೋಟದ ಮಾಲೀಕರಾಗಿದ್ದವರು ಈಗ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಇದೇ ಕೊರಗಿನಲ್ಲಿ ವೃದ್ಧರಿಬ್ಬರು ಪ್ರಾಣ ಬಿಟ್ಟರು’ ಎಂದು ಸಂತ್ರಸ್ತರು ತಮ್ಮ ಅಳಲು ತೋಡಿಕೊಳ್ಳುತ್ತಾರೆ.

‘ಅಳಿದು ಉಳಿದಿದ್ದ ಜಮೀನನ್ನೂ ಸರ್ಕಾರ ನಮಗೆ ಉಳಿಸಿಲ್ಲ. ಊರು ಖಾಲಿ ಮಾಡಿದರೆ ಬೇರೆಡೆ ಜಮೀನು ನೀಡಲಾಗುತ್ತದೆ. ಅಲ್ಲೇ ಮನೆ ಕಟ್ಟಿಕೊಂಡು ವಾಸ ಮಾಡಬಹುದು. ಈ ಎಲ್ಲಾ ಕಾರ್ಯಕ್ಕೆ 10 ತಿಂಗಳು ಸಾಕು. ಅಲ್ಲಿಯ ತನಕ ಬಾಡಿಗೆ ಮನೆಗಳಲ್ಲಿ ವಾಸ ಮಾಡಲು ತಿಂಗಳಿಗೆ ಕುಟುಂಬಕ್ಕೆ ₹5 ಸಾವಿರದಂತೆ ₹50 ಸಾವಿರ ನೀಡುವ ಭರವಸೆ ನೀಡಿದ್ದರು. ಅದಕ್ಕೆ ಒಪ್ಪಿ ಜಮೀನಿನ ಪತ್ರಗಳನ್ನು ಅವರಿಗೆ ಒಪ್ಪಿಸಿ ಸಹಿ ಹಾಕಿದೆವು. ಐದು ವರ್ಷಗಳು ಕಳೆದರೂ ಜಾಗ ಗುರುತಿಸಲು ಜಿಲ್ಲಾಡಳಿತದಿಂದ ಸಾಧ್ಯವಾಗಿಲ್ಲ. ಬಾಡಿಗೆ ವೆಚ್ಚ ₹25 ಸಾವಿರ ಮಾತ್ರ ಬಂದಿದೆ’ ಎಂದು ಮಲೆಮನೆ ರಾಜುಗೌಡ ಬೇಸರ ವ್ಯಕ್ತಪಡಿಸುತ್ತಾರೆ.

ಚನ್ನಡಲು ಗ್ರಾಮದ ಎಲ್ಲಾ ಕುಟುಂಬಗಳನ್ನೂ ಸ್ಥಳಾತರಿಸಲು ಜಿಲ್ಲಾಡಳಿತ ಮುಂದಾಗಿತ್ತು. 16 ಕುಟುಂಬಗಳು ಮಾತ್ರ ಒಪ್ಪಿದ್ದು, ಅವರಿಗೆ ಇಡಕಿಣಿ ಗ್ರಾಮದ ಓಡಿನಕುಡಿಗೆ ಬಳಿ ನಿವೇಶನ ಒದಗಿಸಿದೆ. ಆದರೆ, ಹಕ್ಕುಪತ್ರ ಬಂದಿಲ್ಲ.

ಕಾನೂನು ಹೋರಾಟದ ಆಲೋಚನೆ

‘ಸರ್ಕಾರವನ್ನು ನಂಬಿ ಊರು ಬಿಟ್ಟು ಹೊರಗೆ ಬಂದಿದ್ದೇವೆ. ಐದು ವರ್ಷಗಳಿಂದ ಅಧಿಕಾರಿಗಳು ನಮ್ಮನ್ನು ಸತಾಯಿಸುತ್ತಿದ್ದಾರೆ. ಪುನರ್ವಸತಿ ಕೋರಿ ನ್ಯಾಯಾಲಯದ ಮೊರೆ ಹೋಗುವ ಆಲೋಚನೆಯಲ್ಲಿದ್ದೇವೆ’ ಎಂದು ಸಂತ್ರಸ್ತರಲ್ಲಿ ಒಬ್ಬರಾದ ರಾಜುಗೌಡ ಹೇಳಿದರು.

‘ಐದು ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ ವಾಸವಿದ್ದೇವೆ. ಆ ವೆಚ್ಚವನ್ನೂ ಸರ್ಕಾರ ನೀಡಿಲ್ಲ. ನಮಗೆ ಜೀವನಾಂಶ ಕೊಡಿಸಬೇಕು ಎಂದೂ ನ್ಯಾಯಾಲಯವನ್ನು ಕೋರುತ್ತೇವೆ’ ಎಂದರು.

ಬೆಟ್ಟಗೆರೆ ಬಳಿ ಜಾಗ ಗುರುತು

ಮೂಡಿಗೆರೆ ತಾಲ್ಲೂಕಿನ ಬೆಟ್ಟಗೆರೆ ಬಳಿ ಜಾಗ ಗುರುತಿಸಲಾಗಿದೆ ಎಂದು ಜಿಲ್ಲಾಡಳಿತ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಅರಣ್ಯ ಜಾಗದ ಗೊಂದಲಗಳಿದ್ದವು. ಎಲ್ಲವನ್ನೂ ಬಗೆಹರಿಸಿ ಶೀಘ್ರವೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಸರ್ಕಾರದಿಂದ ಅನುಮತಿ ದೊರೆತ ಕೂಡಲೇ ಮಲೆಮನೆ ಮತ್ತು ಮಧುಗುಂಡಿ ಸಂತ್ರಸ್ತರಿಗೆ ಭೂಮಿ ಒದಗಿಸಲಾಗುವುದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.