ಚಿಕ್ಕಮಗಳೂರು: ಮೂಡಿಗೆರೆ ತಾಲ್ಲೂಕಿನ ಸಾರಗೋಡು ಮೀಸಲು ಅರಣ್ಯದಲ್ಲೇ ಉಳಿದಿದ್ದ 16 ಕುಟುಂಬಗಳನ್ನು ಸ್ಥಳಾಂತರ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ನಿವಾಸಿಗಳ 18 ವರ್ಷಗಳ ವನವಾಸಕ್ಕೆ ಮುಕ್ತಿ ಸಿಕ್ಕಿದೆ.
ಬಾಳೂರು ಹೋಬಳಿ ಹಾದಿಓಣಿ ಗ್ರಾಮದ ಸರ್ವೆ ನಂಬರ್ 21ರಲ್ಲಿ 16 ಕುಟುಂಬಗಳಿಗೆ ತಲಾ ಎರಡು ಎಕರೆ ಜಾಗ ಮತ್ತು ಮನೆ ನಿರ್ಮಾಣ ಮಾಡಿಕೊಳ್ಳಲು 4 ಗುಂಟೆ ಜಾಗ ಗುರುತಿಸಿತ್ತು.
ವಿದೇಶದಲ್ಲಿ ಇದ್ದವರ ಹೆಸರಿಗೂ ಅಕ್ರಮವಾಗಿ ಭೂಮಂಜೂರಾದ ಪ್ರಕರಣದಲ್ಲಿ ಅಷ್ಟೂ ಭೂಮಿಯನ್ನು ಹಿಂದಿನ ಉಪವಿಭಾಗಾಧಿಕಾರಿ ಎಚ್.ಡಿ. ರಾಜೇಶ್ ವಿಚಾರಣೆ ನಡೆಸಿ ಸರ್ಕಾರದ ವಶಕ್ಕೆ ಪಡೆದಿದ್ದರು. ಅಲ್ಲಿ ಬೆಳೆಸಿರುವ ಕಾಫಿ ತೋಟ ಹಾಗೇ ಉಳಿಸಿದ್ದು, ಆ ತೋಟಗಳನ್ನೇ ಸಾರಗೋಡು ನಿವಾಸಿಗಳಿಗೆ ಹಸ್ತಾಂತರಿಸಲು ಸಿದ್ಧತೆಯನ್ನು ರಾಜೇಶ್ ಮಾಡಿದ್ದರು. ಸರ್ಕಾರಕ್ಕೆ ಜಿಲ್ಲಾಡಳಿತದಿಂದ ಪ್ರಸ್ತಾವನೆ ಸಲ್ಲಿಕೆಯಾಗಿತ್ತು.
ಈ ಸರ್ವೆ ನಂಬರ್‌ನಲ್ಲಿ ಒಟ್ಟು 36 ಎಕರೆ ಜಾಗ ಲಭ್ಯವಿದ್ದು, ರಸ್ತೆ, ಅಂಗನವಾಡಿಗೆ ಜಾಗ ಮೀಸಲಿಡಲಾಗುತ್ತಿದೆ. ಕುಡಿಯುವ ನೀರು, ವಿದ್ಯುತ್ ಸಂಪರ್ಕ ಕಲ್ಪಿಸಲು ಸಿದ್ಧತೆ ನಡೆಸಿದ್ದ ಜಿಲ್ಲಾಡಳಿತ ಸಚಿವ ಸಂಪುಟದ ಒಪ್ಪಿಗೆಗೆ ಕಾದಿತ್ತು.
ಸೋಲಾರ್ ಬೇಲಿಯೊಳಗೆ ಸಿಲುಕಿದ್ದ ಕುಟುಂಬ: ಅರಣ್ಯದಿಂದ ಹೊರ ಬರಲು ಒಪ್ಪಿದ್ದರೂ ಈ 16 ಕುಟುಂಬಗಳ ಸ್ಥಳಾಂತರವಾಗಿರಲಿಲ್ಲ. ಅಷ್ಟೂ ಕುಟುಂಬಗಳನ್ನು ಅರಣ್ಯದೊಳಗೆ ಬಿಟ್ಟು ಸುತ್ತ ಸೋಲಾರ್ ಆಧಾರಿತ ಟೆಂಟಕಲ್ ಬೇಲಿ ನಿರ್ಮಿಸಲಾಗಿದ್ದು, ಆನೆ, ಹುಲಿ, ಕಾಡುಕೋಣಗಳ ಜತೆಯಲ್ಲೇ ಈ ಕುಟುಂಬಗಳೂ ನೆಲೆಸಿದ್ದವು.
ಸಾರಗೋಡು ಮೀಸಲು ಅರಣ್ಯ ಘೋಷಣೆ ಸಂದರ್ಭದಲ್ಲಿ ಮಂಡುಗುಳಿಹಾರ ಮತ್ತು ಬೈರಿಗದ್ದೆ ಸುತ್ತಮುತ್ತಲ 70ಕ್ಕೂ ಹೆಚ್ಚು ಕುಟುಂಬಗಳನ್ನು 2006ರಲ್ಲೇ ಸ್ಥಳಾಂತರ ಮಾಡಲಾಗಿತ್ತು. 1978ಕ್ಕೂ ಪೂರ್ವದಿಂದ ನೆಲೆಸಿರುವ ಕುಟುಂಬಗಳು ಎಂಬ ಕಾರಣಕ್ಕೆ ಪಾರಂಪರಿಕ ಅರಣ್ಯವಾಸಿಗಳು ಎಂದು ತೀರ್ಮಾನಿಸಿ 16 ಕುಟುಂಬಗಳನ್ನು ಇಲ್ಲೇ ಉಳಿಸಲಾಗಿತ್ತು.
ಕಾಡು ಹೆಚ್ಚಾದಂತೆ ವನ್ಯಜೀವಿಗಳ ಸಂಖ್ಯೆಯೂ ಹೆಚ್ಚಾಗಿದೆ. ಆನೆಗಳು ಅರಣ್ಯ ದಾಟಿ ಊರಿನತ್ತ ಬರದಂತೆ ಸೋಲಾರ್ ಆಧಾರಿತ ಟೆಂಟಕಲ್ ಬೇಲಿಯನ್ನು ಅರಣ್ಯ ಇಲಾಖೆ ನಿರ್ಮಿಸಿದೆ. 16 ಕುಟುಂಬಗಳು ಈ ಬೇಲಿಯೊಳಗೆ ಉಳಿದುಕೊಂಡಿವೆ. ಅಷ್ಟೂ ಮನೆಗಳು ಕಾಡಿನಲ್ಲಿ ಒಂದೇ ಕಡೆ ಇಲ್ಲ. ಮಧ್ಯದಲ್ಲಿ ಅಲ್ಲೊಂದು, ಇಲ್ಲೊಂದು ಎಂಬಂತಿವೆ. ಊರಿನ ಸಂಪರ್ಕ ರಸ್ತೆಗೆ ಬರಬೇಕೆಂದರೆ ಕನಿಷ್ಠ ಮೂರು ಕಿಲೋ ಮೀಟರ್ ನಡೆದು ಸಾಗಬೇಕು. ಆ ನಂತರ ಟೆಂಟಕಲ್ ಬೇಲಿ ದಾಟಿ ರಸ್ತೆಗೆ ಬರಬೇಕಿತ್ತು.
ಕಾಡಿನೊಳಗೆ ಉಳಿದಿರುವುದರಿಂದ ಆನೆ ಮತ್ತು ಹುಲಿಗಳು ಮನೆಯ ಮುಂದೆಯೇ ಬಂದು ಹೋಗುತ್ತಿದ್ದು, ಜೀವಭಯದಲ್ಲೇ ಬದುಕುತ್ತಿದ್ದರು. ಮಕ್ಕಳನ್ನು ಅಂಗನವಾಡಿಗೆ ಕಳುಹಿಸಲೂ ಸಾಧ್ಯವಾಗದ ಸ್ಥಿತಿಯಲ್ಲಿ ಕುಟುಂಬಗಳು ಇದ್ದವು.
‘ಪ್ರಜಾವಾಣಿ’ ಸ್ಥಳಕ್ಕೆ ತೆರಳಿ ಆ ಜನರ ಸಮಸ್ಯೆ ಆಲಿಸಿತ್ತು. ‘ನಮ್ಮನ್ನು ಕಾಡಿನಲ್ಲಿ ಬಿಟ್ಟು ಸುತ್ತಲೂ ಸೋಲಾರ್ ಬೇಲಿ ಹಾಕಲಾಗಿದೆ. ಆನೆ, ಹುಲಿ, ಕಾಡುಕೋಣ ಮತ್ತು ನಮ್ಮನ್ನು ಒಟ್ಟಿಗೆ ಕೂಡಿ ಹಾಕಲಾಗಿದೆ’ ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದರು. ‘16 ಕುಟುಂಬಗಳನ್ನು ಕಾಡಿಲ್ಲೇ ಉಳಿಸಿ ಸೋಲಾರ್ ಬೇಲಿ ಹಾಕಿದರು!’ ಎಂಬ ಶೀರ್ಷಿಕೆಯಡಿ ಸೆ.11ರಂದು ವಿಶೇಷ ವರದಿ ಪ್ರಕಟಿಸಿತ್ತು.
ಬಳಿಕ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್‌ಕುಮಾರ್ ಕಟಾರಿಯಾ ಅವರು, ‘ಒಂದು ತಿಂಗಳಲ್ಲಿ ಸಂತ್ರಸ್ತರಿಗೆ ಭೂಮಿ ಒದಗಿಸಲಾಗುವುದು’ ಎಂದು ಭರವಸೆ ನೀಡಿದ್ದರು.
ಸಂತ್ರಸ್ತರಲ್ಲಿ ಸಂತಸ: ಜಿಲ್ಲಾಡಳಿತಕ್ಕೆ ಮೆಚ್ಚುಗೆ
ಸಾರಗೋಡು ಅರಣ್ಯದಿಂದ ಹೊರತರಲು ನಿರ್ಧರಿಸಿದ ಸರ್ಕಾರದ ನಿರ್ಧಾರಕ್ಕೆ ಸಂತ್ರಸ್ತರು ಸಂತಸ ವ್ಯಕ್ತಪಡಿಸಿದ್ದಾರೆ. ‘18 ವರ್ಷಗಳ ವನವಾಸದಿಂದ ಮುಕ್ತಿ ದೊರಕುವ ಕಾಲ ಹತ್ತಿರವಾಗಿದೆ. ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೆಚ್ಚುವರಿ ಜಿಲ್ಲಾಧಿಕಾರಿ ನಾರಾಯಣ ಕನಕರಡ್ಡಿ ಈ ಹಿಂದಿನ ಉಪವಿಭಾಗಾಧಿಕಾರಿ ಎಚ್.ಡಿ.ರಾಜೇಶ್ ಅವರು ಆಸಕ್ತಿ ತೋರಿಸಿದ್ದರಿಂದ ಈ ಕೆಲಸ ಆಗಿದೆ. ರಾಜೇಂದರ್‌ಕುಮಾರ್ ಕಟಾರಿಯಾ ನಮಗೆ ಕೊಟ್ಟ ಮಾತಿನಂತೆ ಭೂಮಿ ಕೊಡಿಸಿದ್ದಾರೆ. ಶಾಸಕಿ ನಯನಾ ಮೋಟಮ್ಮ ಅವರೂ ನಮ್ಮ ಪರವಾದ ಧ್ವನಿ ಎತ್ತಿದ್ದರು’ ಎಂದು ಸಂತ್ರಸ್ತ ರಾಜೇಶ್ ಹೇಳಿದರು.
‘ನಮ್ಮ ಜೀವನದಲ್ಲಿ ಇದಕ್ಕಿಂತ ಸಂಸದ ಕ್ಷಣಗಳು ಬೇರೆ ಇಲ್ಲ. ಎಲ್ಲರೂ ಕಣ್ಣುಗಳು ತುಂಬಿಕೊಂಡಿವೆ. ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟವಾದ ಬಳಿಕ ನಮಗೆ ನ್ಯಾಯ ದೊರೆತಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.