ADVERTISEMENT

ದತ್ತಪೀಠದಲ್ಲಿ ಕುಂಕುಮ ಅಳಿಸಿ ಹಿಂದೂ ಪದ್ಧತಿಗೆ ಅಪಚಾರ: ಆರ್.ಡಿ.ಮಹೇಂದ್ರ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2024, 14:25 IST
Last Updated 22 ನವೆಂಬರ್ 2024, 14:25 IST
ಆರ್.ಡಿ.ಮಹೇಂದ್ರ
ಆರ್.ಡಿ.ಮಹೇಂದ್ರ   

ಬಾಳೆಹೊನ್ನೂರು: ‘ಶಾಖಾದ್ರಿ ವಂಶಸ್ಥರು ಎಂದು ಹೇಳಿಕೊಂಡ ಗುಂಪೊಂದು ನ.19ರಂದು ದತ್ತಪೀಠದ ಆವರಣದೊಳಗೆ ನುಗ್ಗಿ ದಾಂದಲೆ ನಡೆಸಿ ಅರ್ಚರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮಕಿ ಹಾಕಿದೆ. ಈ ಗುಂಪಿನ ವಿರುದ್ಧ ಜಿಲ್ಲಾಡಳಿತ ಕೂಡಲೇ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಬೇಕು’ ಎಂದು ವಿಶ್ವ ಹಿಂದೂ ಪರಿಷತ್ ಹಾಸನ ವಿಭಾಗ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

‘ಹಿಂದೂ ಶೈವ ಪದ್ಧತಿಯಂತೆ ಪಾದುಕೆಗಳನ್ನು ದತ್ತಪೀಠದಲ್ಲಿ ಪ್ರತಿಷ್ಠಾಪಿಸಿ ಹಿಂದೂ ಅರ್ಚಕರ ನೇತೃತ್ವದಲ್ಲಿ ಪೂಜೆ ನಡೆಯಬೇಕು ಎಂದು ಈ ಹಿಂದೆ ನ್ಯಾಯಾಲಯ ಆದೇಶಿಸಿದೆ. ಆದರೂ ಕೆಲವು ಕಿಡಿಗೇಡಿಗಳು ದತ್ತ ಪೀಠದ ಆವರಣದೊಳಗೆ ನುಗ್ಗಿ ಕುಂಕುಮ ಹಚ್ಚಬಾರದು, ಅಲಂಕಾರ ಮಾಡಬಾರದು ಎಂದಿದ್ದಾರೆ. ಅಲ್ಲದೆ, ಹಿಂದೂ ಧಾರ್ಮಿಕ ಪದ್ಧತಿಯ ಪ್ರಕಾರ ಹಚ್ಚಿದ ಅರಿಶಿಣ–ಕುಂಕುಮವನ್ನು ಮುಜಾವರ್ ಮೂಲಕ ಅಳಿಸುತ್ತಿರುವುದು ಎಷ್ಟು ಸರಿ’ ಎಂದಿದ್ದಾರೆ.

‘ನ್ಯಾಯಾಲಯದ ಆದೇಶದಂತೆ ಮುಜಾವರ್ ಗರ್ಬ್‍ಗುಡಿ ಪ್ರವೇಶಕ್ಕೆ ನಿಷೇಧವಿದೆ. ಆದರೆ, ನಿತ್ಯ ಸಂಜೆ ಮತ್ತು ಬೆಳಿಗ್ಗೆ ಮುಜಾವರ್ ಗರ್ಭಗುಡಿ ಪ್ರವೇಶಿಸಿ ಕುಂಕುಮ ಅಳಿಸಿ ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಅಪಚಾರ ಎಸಗುತ್ತಿದ್ದಾರೆ. ಮುಜಾವರ್ ಕಡೆಯವರಿಗೆ ನಂಬಿಕೆ ಮತ್ತು ಗೌರವ ಇದ್ದರೆ ದತ್ತ ಪೀಠಕ್ಕೆ ಬಂದು ಪೀಠಕ್ಕೂ ಮತ್ತು ಪಾದುಕೆಗೆ ಪೂಜೆ ಮಾಡುವುದಲ್ಲ. ನಾಗೇನಹಳ್ಳಿ ಸರ್ವೆ ನಂ 57ರಲ್ಲಿರುವ ನಿಜವಾದ ಗೋರಿಗಳ ಮುಂದೆ ಅವರ ಧಾರ್ಮಿಕ ಪದ್ಧತಿಗಳನ್ನು ಮಾಡಲಿ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಈ ಹಿಂದೆ ಗುಂಪೊಂದು ದತ್ತಪೀಠದ ಆವರಣದಲಿರುವ ಅತ್ತಿಮರದ (ಸಂಸ್ಕೃತದಲ್ಲಿ ಔದುಂಭರ) ಬುಡದಲ್ಲಿ ಗೋರಿ ಇದೆ ಎಂದು ಗೊಂದಲ ಸೃಷ್ಟಿಸಿತ್ತು. ಗೋರಿಗಳ ಮೇಲೆ ಮರ ಅಥವ ಗಿಡ ನೆಡುವ ಪದ್ಧತಿ ಇರುವುದು ಹಿಂದೂಗಳಲ್ಲಿ ಮಾತ್ರ. ಹಾಗಾದರೆ ಗೋರಿಯ ಮೇಲೆ ಮರ ನೆಟ್ಟವರು ಯಾರು? ಕೇವಲ ಒಂದೇ ಗೋರಿಗೆ ಮರನೆಟ್ಟು ಉಳಿದ ಗೋರಿಗಳಿಗೆ ಮರವನ್ನು ಯಾಕೆ ನೆಡಲಿಲ್ಲ? ನೀವು ಹೇಳುತ್ತಿರುವ ಅತ್ತಿಮರಕ್ಕೆ ನಾವು ಔದುಂಭರ ವೃಕ್ಷವೆಂದು ಕರೆದು ಪೂಜಿಸುತ್ತೇವೆ. ಈ ರೀತಿ ಔದುಂಭರ ವೃಕ್ಷ ಹೆಚ್ಚಿನ ಎಲ್ಲಾ ಹಿಂದೂ ದೇವಸ್ಥಾನ, ಪೀಠಗಳಲ್ಲಿ ಇದೆ. ಅದೇ ರೀತಿ ದತ್ತ ಪೀಠದಲ್ಲಿಯೂ ನೂರಾರು ವರ್ಷಗಳಿಂದ ಇದೆ. ದತ್ತಪೀಠ ವಿಚಾರವನ್ನು ಜೀವಂತವಾಗಿರಿಸಿಕೊಳ್ಳುವ ನಿಟ್ಟಿನಲ್ಲಿ ಕೆಲವರು ಹುನ್ನಾರ ನಡೆಸಿದ್ದಾರೆ’ ಎಂದು ಆರೋಪಿಸಿದ್ದಾರೆ.

ಡಿಸೆಂಬರ್‌ನಲ್ಲಿ ನಡೆಯಲಿರುವ ದತ್ತಮಾಲಾ ಮತ್ತು ದತ್ತ ಜಯಂತಿಗೆ ರಾಜ್ಯವೇ ತಯಾರಿಯಲ್ಲಿದ್ದು, ಈ ಸಮಯದಲ್ಲಿ ಹಿಂದೂ ಸಮಾಜದಲ್ಲಿ ಮತ್ತು ಕಾನೂನು ಸುವ್ಯವಸ್ಥೆಗೆ ಗೊಂದಲ ಸೃಷ್ಟಿಸುವ ಕೆಲಸವನ್ನು ಕೆಲವು ಕಿಡಿಗೇಡಿಗಳು ಮಾಡುತ್ತಿದ್ದಾರೆ. ಪೊಲೀಸ್ ಇಲಾಖೆ ತಕ್ಷಣ ಅಂಥವರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.