ADVERTISEMENT

ಕಳಸ-ಕುದುರೆಮುಖ ಹೆದ್ದಾರಿ ದುರಸ್ತಿಗೆ ಮೀನ ಮೇಷ

ರವಿ ಕೆಳಂಗಡಿ
Published 23 ನವೆಂಬರ್ 2023, 5:59 IST
Last Updated 23 ನವೆಂಬರ್ 2023, 5:59 IST
ಕಳಸ-ಕುದುರೆಮುಖ- ಎಸ್.ಕೆ. ಬಾರ್ಡರ್ ಹೆದ್ದಾರಿಯಲ್ಲಿ ಬುಧವಾರ ಜೆಸಿಬಿ ಬಳಸಿ ರಸ್ತೆ ಬದಿ ಪೊದೆ ನಿವಾರಣೆ ಮಾಡುತ್ತಿರುವುದು
ಕಳಸ-ಕುದುರೆಮುಖ- ಎಸ್.ಕೆ. ಬಾರ್ಡರ್ ಹೆದ್ದಾರಿಯಲ್ಲಿ ಬುಧವಾರ ಜೆಸಿಬಿ ಬಳಸಿ ರಸ್ತೆ ಬದಿ ಪೊದೆ ನಿವಾರಣೆ ಮಾಡುತ್ತಿರುವುದು   

ಕಳಸ: ಮಲೆನಾಡನ್ನು ಕರಾವಳಿ ಜೊತೆಗೆ ಬೆಸೆಯುವ ಕಳಸ- ಕುದುರೆಮುಖ- ಎಸ್.ಕೆ. ಬಾರ್ಡರ್ ಹೆದ್ದಾರಿಯ ಹದಗೆಟ್ಟ ಸ್ಥಿತಿಯ ಬಗ್ಗೆ ಸ್ಥಳೀಯರಲ್ಲಿ ಆಕ್ರೋಶ ಹೆಚ್ಚುತ್ತಿದೆ.

3 ವರ್ಷಗಳಿಂದ ಈ ಹೆದ್ದಾರಿ ದುರಸ್ತಿ ಬಗ್ಗೆ ಕಳಸ, ಸಂಸೆ, ಜಾಂಬಳೆ, ನೆಲ್ಲಿಬೀಡು, ಕುದುರೆಮುಖ ಆಸುಪಾಸಿನ ಗ್ರಾಮಸ್ಥರು ಸತತವಾಗಿ ದನಿ ಎತ್ತುತ್ತಲೆ ಇದ್ದಾರೆ. ಅನೇಕ ಪ್ರತಿಭಟನೆಗಳು, ಘೆರಾವ್, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಕೆ ನಡೆದಿವೆ. ಆದರೆ ಈವರೆಗೂ ಈ ರಸ್ತೆ ದುರಸ್ತಿ ಆಗಿಲ್ಲ.

ಕಳೆದ ಮಳೆಗಾಲಕ್ಕೆ ಮುನ್ನ 8 ಕಿ.ಮೀ ರಸ್ತೆಯ ಡಾಂಬರೀಕರಣಕ್ಕೆ ಟೆಂಡರ್ ಕರೆದು, ಕೆಲಸ ಆರಂಭಗೊಂಡಿತ್ತು. ಆದರೆ, ಮಳೆಯ ಕಾರಣಕ್ಕೆ ಕಾಮಗಾರಿ ಅರ್ಧಕ್ಕೆ ನಿಲ್ಲಿಸಲಾಯಿತು. ಆಗಿನಿಂದಲೂ ಗುತ್ತಿಗೆದಾರರು ನಾಪತ್ತೆ ಆಗಿದ್ದಾರೆ. ಇಂಥವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.

ADVERTISEMENT
ಕಳೆದ ಬಾರಿ ಟೆಂಡರ್ ನಡೆದ ಕಾಮಗಾರಿಯ ಉಳಿದ ಭಾಗದ ಕೆಲಸ ಮುಂದಿನ ವಾರ ಆರಂಭವಾಗಲಿದೆ. ರಸ್ತೆಯ ಉಳಿದ ಭಾಗದ ಅಭಿವೃದ್ಧಿಗೂ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ
ಎಂಜಿನಿಯರ್ ಚನ್ನಬಸಪ್ಪ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯ ಪಾಲಕ

ಸಂಸೆಯಿಂದ ಎಸ್.ಕೆ. ಬಾರ್ಡರ್‌ವರೆಗಿನ 34 ಕಿ.ಮೀ ರಸ್ತೆಯಲ್ಲಿ ಈಗಲೂ ವಾಹನ ಸಂಚಾರ ಅಸಾಧ್ಯ ಎಂಬಷ್ಟು ದೊಡ್ಡ ಗಾತ್ರದ ಗುಂಡಿಗಳು ಇವೆ. ಚರಂಡಿಗಳು ಮುಚ್ಚಿಕೊಂಡು ಮಳೆ ನೀರು ರಸ್ತೆ ಮೇಲೆಯೇ ಹರಿಯುತ್ತಿದೆ. ರಸ್ತೆ ಪಕ್ಕದ ಮರಗಳು, ಪೊದೆಗಳು ಹೆದ್ದಾರಿ ಆಕ್ರಮಿಸಿಕೊಳ್ಳುತ್ತಿವೆ. ಈ ಹೆದ್ದಾರಿಯನ್ನು ಪ್ರತಿನಿತ್ಯ ಬಳಸುವ ಸ್ಥಳೀಯರು ಮತ್ತು ಪ್ರವಾಸಿ ವಾಹನಗಳು ದುಃಸ್ಥಿತಿಗೆ ತಲುಪುತ್ತಿದ್ದು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಜನರು ಹಿಡಿಶಾಪ ಹಾಕಿ ರಸ್ತೆ ಸವೆಸುವ ಸ್ಥಿತಿ ಇಲ್ಲಿದೆ.

ಕಳಸ ತಾಲ್ಲೂಕಿನಿಂದ ನಿತ್ಯ ಮಂಗಳೂರಿನ ಆಸ್ಪತ್ರೆಗಳಿಗೆ ನೂರಾರು ಜನರು ಮತ್ತು ಕಾಲೇಜು ವಿದ್ಯಾರ್ಥಿಗಳು ಇದೇ ಮಾರ್ಗದಲ್ಲಿ ಸಂಚರಿಸಬೇಕು. ಮಂಗಳೂರಿನಿಂದ ಕಳಸ ತಾಲ್ಲೂಕಿಗೆ ವಿವಿಧ ಸರಕುಗಳು ಬರುತ್ತವೆ. ಕಾರ್ಕಳ, ಮೂಡುಬಿದರೆಯಿಂದ ಕಳಸ ತಾಲ್ಲೂಕಿಗೆ ಕಟ್ಟಡ ನಿರ್ಮಾಣ ವಸ್ತುಗಳು ಬರುತ್ತವೆ. ಸರಕು ಸಾಗಣೆ ವಾಹನಗಳು ಈ ರಸ್ತೆಯಲ್ಲಿ ಸಾಗುವುದರಿಂದ ಅವುಗಳ ನಿರ್ವಹಣಾ ವೆಚ್ಚ ಏರುತ್ತಿದೆ. ಪರಿಣಾಮವಾಗಿ ಸರಕುಗಳ ಬೆಲೆಯೂ ಹೆಚ್ಚುತ್ತಿದೆ.

‘ಕೊಟ್ಟಿಗೆಹಾರ-ಕಳಸ-ಎಸ್.ಕೆ. ಬಾರ್ಡರ್ ರಸ್ತೆ ನಿರ್ವಹಣೆಗೆ ಈ ಸಾಲಿನಲ್ಲಿ ₹26 ಲಕ್ಷ ಹಣವನ್ನು ಲೋಕೋಪಯೋಗಿ ಇಲಾಖೆ ನೀಡುತ್ತಿದೆ. ಈಗ 3 ದಿನದಲ್ಲಿ ಒಂದು ಜೆಸಿಬಿ ಬಳಸಿ ರಸ್ತೆ ಬದಿ ಹುಲ್ಲು ಕೆರೆದು ಆ ಹಣ ಗಿಟ್ಟಿಸಿಕೊಳ್ಳುವ ಯತ್ನ ನಡೆದಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಿಗಾ ವಹಿಸದೆ ಅನುಮಾನಕ್ಕೆ ಕಾರಣರಾಗಿದ್ದಾರೆ’ ಎಂದು ಮುಖಂಡ ರವಿ ರೈ ದೂರಿದರು.

ಸೋಮವಾರದ ಒಳಗೆ ರಸ್ತೆ ಕಾಮಗಾರಿ ಆರಂಭಿಸದಿದ್ದರೆ ಸ್ಥಳೀಯರನ್ನು ಒಗ್ಗೂಡಿಸಿ ರಸ್ತೆ ತಡೆ ಮತ್ತು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.