ಚಿಕ್ಕಮಗಳೂರು: ಸರ್ಕಾರಿ ಜಾಗ ಒತ್ತುವರಿ ಮಾಡಿ ಪ್ಲಾಂಟೇಷನ್ ಬೆಳೆ ಬೆಳೆದಿರುವ ಜಿಲ್ಲೆಯ ಬೆಳೆಗಾರರು 25 ಎಕರೆ ತನಕ 30 ವರ್ಷಗಳ ಅವಧಿಗೆ ಗುತ್ತಿಗೆಗೆ ಪಡೆಯಲು 4,113 ಬೆಳೆಗಾರರು ಅರ್ಜಿ ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಕಂದಾಯ ಭೂಮಿ ಒತ್ತುವರಿ 20,844 ಎಕರೆ ಇದೆ ಎಂಬುದನ್ನು ಅಧಿಕಾರಿಗಳು ಅಂದಾಜಿಸಿದ್ದಾರೆ. 2005ರ ಜನವರಿ 1ಕ್ಕೂ ಮುಂಚಿನಿಂದ ಒತ್ತುವರಿ ಜಾಗದಲ್ಲಿ ಪ್ಲಾಂಟೇಷನ್ ಬೆಳೆಗಳನ್ನು(ಏಲಕ್ಕಿ, ಕಾಫಿ, ಮೆಣಸು, ರಬ್ಬರ್, ಟೀ) ಬೆಳೆಯುತ್ತಿದ್ದರೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ಮುಂದಾಗಿದೆ.
ಅರ್ಜಿ ಸಲ್ಲಿಕೆಗೆ 90 ದಿನಗಳ ತನಕ ಅವಕಾಶ ಕಲ್ಪಿಸಲಾಗಿತ್ತು. ಅದು ಈಗ ಪೂರ್ಣಗೊಂಡಿದೆ. ಅರ್ಜಿದಾರರ ವಿಳಾಸ, ಆಧಾರ್ ಕಾರ್ಡ್, ಪಾನ್ ಕಾರ್ಡ್, ಹಿಂದಿನ 5 ವರ್ಷಗಳ ಆದಾಯ ತೆರಿಗೆ ಪಾವತಿ ವಿವರ, ಅನಧಿಕೃತ ಸಾಗುವಳಿ ಮಾಡುತ್ತಿರುವ ಜಮೀನಿನ ವಿವರ, ಸಾಗುವಳಿ ಮಾಡುತ್ತಿರುವ ದಿನಾಂಕ ಹಾಗೂ ಟಿ.ಟಿ ಜುಲ್ಮಾನೆ ಪಾವತಿಸಿರುವ ವಿವರ ಸಲ್ಲಿಸಬೇಕು.
ಅರ್ಜಿದಾರರ ಕುಟುಂಬದ ಇತರ ಸದಸ್ಯರು ಸರ್ಕಾರಿ ಜಮೀನುಗಳಲ್ಲಿ ಅನಧಿಕೃತ ಸಾಗುವಳಿ ಮಾಡುತ್ತಿದ್ದರೆ ಅವುಗಳ ವಿವರ, ಅರ್ಜಿದಾರರು ಮತ್ತು ಕುಟುಂಬದವರು ಹೊಂದಿರುವ ಒಟ್ಟು ಆಸ್ತಿ ವಿವರ ಲಗತ್ತಿಸಬೇಕು. ಗುತ್ತಿಗೆ ಪಡೆಯುವ ರೈತರು 30 ವರ್ಷಗಳ ಬಾಡಿಗೆ ಮೊತ್ತವನ್ನು ಮೊದಲೇ ಒಮ್ಮೆಲೇ ಪಾವತಿಸಬೇಕು ಎಂಬ ಷರತ್ತುಗಳನ್ನು ವಿಧಿಸಿದೆ.
ಬೆಳೆಗಾರರ ಸಂಘಟನೆಗಳು ಹೇಳುವ ಪ್ರಕಾರ 4 ಎಕರೆಗಿಂತ ಕಡಿಮೆ ಒತ್ತುವರಿ ಮಾಡಿರುವ ಬೆಳೆಗಾರರ ಸಂಖ್ಯೆಯೇ ಹೆಚ್ಚಿದೆ. ಅದರಲ್ಲೂ ಮೂಡಿಗೆರೆ ತಾಲ್ಲೂಕಿನಲ್ಲಿ ಹೆಚ್ಚು ಒತ್ತುವರಿ ಇದೆ.
‘ಅರ್ಜಿ ಸಲ್ಲಿಕೆಗೆ ಸರ್ಕಾರ ವಿಧಿಸಿರುವ ಷರತ್ತುಗಳು, ಕೇಳಿರುವ ದಾಖಲೆಗಳನ್ನು ಒದಗಿಸಲು ಬೆಳೆಗಾರರು ಭಯಪಡುತ್ತಿದ್ದಾರೆ. ಸರ್ಕಾರ ನಮ್ಮಿಂದಲೇ ದಾಖಲೆಗಳನ್ನು ಪಡೆದುಕೊಂಡು ಜಾಗವನ್ನು ತನ್ನ ಹಿಡಿತ ಸಾಧಿಸಲಿದೆ’ ಎಂಬ ಆತಂಕವೂ ಕೆಲ ಬೆಳೆಗಾರರಲ್ಲಿದೆ. ಆದರೂ, 4,140 ಬೆಳೆಗಾರರು ಅರ್ಜಿ ಸಲ್ಲಿಸಿದ್ದು, 27 ಅರ್ಜಿಗಳು ಕ್ರಮಬದ್ಧವಾಗಿಲ್ಲ. 4,113 ಅರ್ಜಿಗಳನ್ನು ನೋಂದಣಿ ಮಾಡಿಕೊಂಡಿದೆ. ಈ ಅರ್ಜಿದಾರರು 43,887 ಎಕರೆಯಷ್ಟು ಜಾಗವನ್ನು ಗುತ್ತಿಗೆ ಕೋರಿದ್ದಾರೆ.
ಒತ್ತುವರಿ ಮಾಡಿರುವುದು ಅರಣ್ಯ ಭೂಮಿಯೋ, ಕಂದಾಯ ಭೂಮಿಯೋ ಎಂಬ ಸ್ಪಷ್ಟತೆಯೇ ಬೆಳೆಗಾರರಿಗೆ ಇಲ್ಲ. ಕಂದಾಯ ಜಾಗದಲ್ಲಷ್ಟೇ ಗುತ್ತಿಗೆಗೆ ನೀಡಲು ಅವಕಾಶ ಇದೆ. ಎಲ್ಲರೂ ಅರ್ಜಿ ಸಲ್ಲಿಸುತ್ತಿದ್ದು, ಇನ್ನೂ ಎರಡು ತಿಂಗಳ ಅವಧಿ ಇರುವುದರಿಂದ ಇನ್ನಷ್ಟು ಜನ ಅರ್ಜಿ ಸಲ್ಲಿಸಲು ಅವಕಾಶ ಇದೆ. ಲಭ್ಯ ಇರುವ ಕಂದಾಯ ಜಾಗದಲ್ಲಷ್ಟೇ ಗುತ್ತಿಗೆ ನೀಡಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.