ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪ್ರಮುಖ ರಸ್ತೆಗಳು ಗುಂಡಿ ಬಿದ್ದು ಹಾಳಾಗಿದ್ದು, ಮಳೆಗಾಲ ಮುಗಿದರೂ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿ ಆರಂಭವಾಗಿಲ್ಲ.
ಯಾವುದೇ ರಸ್ತೆಗೆ ಹೋದರೂ ಗುಂಡಿಗಳ ದರ್ಶನ ಆಗುತ್ತಿದೆ. ನಗರದಲ್ಲೇ ಬಹುತೇಕ ರಸ್ತೆಗಳು ಹಾಳಾಗಿದ್ದು, ಸಂಚಾರಕ್ಕೆ ಸಾಧ್ಯವಾಗದ ಸ್ಥಿತಿ ಇದೆ.
ಜಿಲ್ಲಾಧಿಕಾರಿ ಕಚೇರಿ ರಸ್ತೆ, ನಾಡ್ಡುರಸ್ತೆ, ನೇಕಾರ ಬೀದಿ, ಉಂಡೇದಾಸರಹಳ್ಳಿ ರಸ್ತೆ, ಬಸವನಹಳ್ಳಿ ರಸ್ತೆ, ವಿಜಯಪುರ ರಸ್ತೆಗಳು ಗುಂಡಿಮಯವಾಗಿವೆ. ಬಿದ್ದಿರುವ ಗುಂಡಿಗೆ ಕಟ್ಟಡ ತ್ಯಾಜ್ಯ ತಂದು ಸುರಿಯಲಾಗಿದ್ದು, ಅದರಿಂದ ಇನ್ನಷ್ಟು ಮಣ್ಣು ಗುಡ್ಡೆಗಳು ನಿರ್ಮಾಣವಾಗಿವೆ. ಮಳೆ ನಿಂತಿರುವುದರಿಂದ ಧೂಳು ಆವರಿಸಿಕೊಂಡು ಸಂಚಾರವೇ ಕಷ್ಟವಾಗಿದೆ.
ನಾಯ್ಡು ರಸ್ತೆ(ಅಂಚೆ ಕಚೇರಿ ರಸ್ತೆ) ಮತ್ತು ಅದಕ್ಕೆ ಪರ್ಯಾಯವಾಗಿರುವ ನೇಕಾರರ ಬೀದಿಯಲ್ಲಿ ಚೆನ್ನಾಗಿದ್ದ ರಸ್ತೆಗಳನ್ನು ನಗರಸಭೆ ಅಧಿಕಾರಿಗಳು ಅಗೆದು ಬಿಟ್ಟಿದ್ದಾರೆ. ಒಳಚರಂಡಿ ಕಾಮಗಾರಿಗಾಗಿ ಅಗೆದ ನಂತರ ಸಮರ್ಪಕವಾಗಿ ಮರು ನಿರ್ಮಾಣ ಮಾಡಿಲ್ಲ. ಮಣ್ಣು ತುಂಬಿಸಿ ಬಿಟ್ಟು ಹೋಗಿದ್ದಾರೆ. ನಗರಸಭೆ ಅಧಿಕಾರಿಗಳ ಈ ಬೇಜವಾಬ್ದಾರಿತನಕ್ಕೆ ಜನ ಹಿಡಿಶಾಪ ಹಾಕುತ್ತಿದ್ದಾರೆ.
ಇನ್ನು ಉಂಡೇದಾಸರಹಳ್ಳಿ ರಸ್ತೆಯಲ್ಲಂತೂ ಹೆಜ್ಜೆಗೊಂದು ಗುಂಡಿಗಳಿವೆ. ಕೆಲವೆಡೆ ಹೊಂಡಗಳೇ ನಿರ್ಮಾಣವಾಗಿದ್ದರೂ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ರಾಮಯ್ಯ ವೃತ್ತದಲ್ಲಿ ಚೆನ್ನಾಗಿದ್ದ ರಸ್ತೆಯನ್ನು ಒಳಚರಂಡಿ ಕಾಮಗಾರಿಗಾಗಿ ನಗರಸಭೆ ಅಧಿಕಾರಿಗಳೇ ನಿಂತು ಅಗೆದಿದ್ದು, ಹಾಗೇ ಬಿಟ್ಟು ಹೋಗಿದ್ದಾರೆ.
ಕಾಮಗಾರಿ ಪೂರ್ಣಗೊಂಡ ಬಳಿಕ ಮರು ನಿರ್ಮಾಣ ಮಾಡುವ ಕೆಲಸಕ್ಕೆ ನಗರಸಭೆ ಕ್ರಮ ಕೈಗೊಳ್ಳುತ್ತಿಲ್ಲ. ಸುಸ್ಥಿತಿಯಲ್ಲಿ ಇದ್ದ ರಸ್ತೆಯನ್ನೂ ಅಗೆದು ಹಾಳು ಮಾಡುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯ.
‘ಮಳೆಯಾಗುತ್ತಿರುವುದರಿಂದ ರಸ್ತೆ ಗುಂಡಿ ಮುಚ್ಚುವುದು ಕಷ್ಟವಾಗಿದೆ ಎಂದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನೆಪ ಹೇಳುತ್ತಿದ್ದರು. ಈಗ ಮಳೆ ನಿಂತು ಹಲವು ದಿನಗಳೇ ಕಳೆದಿದ್ದು, ರಸ್ತೆ ಗುಂಡಿ ಮುಚ್ಚುವ ಕೆಲಸವನ್ನೂ ಆರಂಭಿಸಿಲ್ಲ’ ಎಂಬುದು ಜನರ ಅಸಮಾಧಾನ.
ನರಸಿಂಹರಾಜಪುರ: ತಾಲ್ಲೂಕಿನಾದ್ಯಂತ ಪ್ರಮುಖ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು ಸುಗಮ ಸಂಚಾರಕ್ಕೆ ಸಂಚಕಾರ ತಂದಿದೆ. ಪ್ರಮುಖವಾಗಿ ಪಟ್ಟಣದ ಮಿನಿ ವಿಧಾನಸೌಧದ ಮೂಲಕ ಹಾದು ಹೋಗಿರುವ ಬೈಪಾಸ್ ರಸ್ತೆಯ ತುಂಬಾ ಅಲ್ಲಲ್ಲಿ ಭಾರಿ ಪ್ರಮಾಣದ ಗುಂಡಿಗಳು ಬಿದ್ದಿದ್ದು ವಾಹನ ಸಂಚರಿಸುವುದು ದುಸ್ತರವಾಗಿದೆ. ಬಿ.ಎಚ್.ಕೈಮರ ಗ್ರಾಮದ ಅಯ್ಯಪ್ಪಸ್ವಾಮಿ ದೇವಸ್ಥಾನದ ಮುಂಭಾಗದಲ್ಲೂ ಗುಂಡಿಗಳು ಬಿದ್ದಿವೆ. ಎನ್.ಆರ್.ಪುರದಿಂದ ಕೊಪ್ಪಕ್ಕೆ ಹೋಗುವ ಮಾರ್ಗಮಧ್ಯೆ ಹಲವೆಡೆ ದೊಡ್ಡ ಗುಂಡಿಗಳು ಬಿದ್ದಿವೆ. ಎನ್.ಆರ್.ಪುರದಿಂದ ಶಿವಮೊಗ್ಗಕ್ಕೆ ಹೋಗುವ ಪ್ರಮುಖ ರಸ್ತೆಯಲ್ಲಿ ಪಟ್ಟಣದ ಹಳೇಪೇಟೆ ಶೆಟ್ಟಿಕೊಪ್ಪ ಮಡಬೂರು ಗ್ರಾಮ ಮುತ್ತಿನಕೊಪ್ಪ ಕೊರಲುಕೊಪ್ಪ ವ್ಯಾಪ್ತಿಯಲ್ಲೂ ರಸ್ತೆ ಉದ್ದಕ್ಕೂ ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಮಳೆ ಬಂದಾಗ ಗುಂಡಿಗಳ ತುಂಬಾ ನೀರು ತುಂಬಿಕೊಳ್ಳುವುದರಿಂದ ಗುಂಡಿಯಾವುದು ರಸ್ತೆಯಾವುದು ಎಂಬುದು ತಿಳಿಯದ ಸ್ಥಿತಿ ಇದೆ. ಮಳೆ ಕಡಿಮೆಯಾದ ಕೂಡಲೇ ರಸ್ತೆ ಗುಂಡಿ ಮುಚ್ಚಲಾಗುತ್ತದೆ ಎಂದು ಹೇಳುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಳೆ ನಿಂತರೂ ಗುಂಡಿ ಮುಚ್ಚಲು ಕ್ರಮಕೈಗೊಂಡಿಲ್ಲ ಎಂದು ವಾಹನ ಸವಾರರು ಬೇಸರ ವ್ಯಕ್ತಪಡಿಸುತ್ತಾರೆ.
ಕೊಪ್ಪ: ತಾಲ್ಲೂಕು ಕೇಂದ್ರ ಹಾದು ಹೋಗುವ ರಾಜ್ಯ ಹೆದ್ದಾರಿ ಸೇರಿದಂತೆ ಗ್ರಾಮೀಣ ರಸ್ತೆಗಳು ಹೊಂಡ ಗುಂಡಿಗಳಿಂದಾಗಿ ಸಂಪೂರ್ಣ ಹದಗೆಟ್ಟಿವೆ. ಪಟ್ಟಣದಲ್ಲಿ ಮಾರ್ಕೆಟ್ ರಸ್ತೆ ಮೇಲಿನಪೇಟೆಯಲ್ಲಿನ ಮುಖ್ಯ ರಸ್ತೆ ಮಳೆಗಾಲದಲ್ಲಿ ಗುಂಡಿ ಬಿದ್ದಿವೆ. ನಿತ್ಯ ವಾಹನ ಸವಾರರಿಗೆ ಪೀಕಲಾಟ. ಇಲ್ಲಿ ಅಪಘಾತಕ್ಕೆ ಎಡೆ ಮಾಡಿಕೊಡುವಂತಿರುವ ರಸ್ತೆಗಳಲ್ಲಿರುವ ಗುಂಡಿ ತಪ್ಪಿಸಲು ಬೈಕ್ ಸವಾರರಂತೂ ಹರ ಸಾಹಸಪಡಬೇಕು. ತಾಲ್ಲೂಕು ಕೇಂದ್ರ ಹಾದು ಹೋಗುವ ಮಲ್ಪೆ ಮೊಳಕಾಲ್ಮೂರು ರಾಜ್ಯ ಹೆದ್ದಾರಿ ತಾಲ್ಲೂಕಿನ ಕುದುರೆಗುಂಡಿಯಲ್ಲಿ ಗುಂಡಿ ಬಿದ್ದಿವೆ. ಜಿಲ್ಲಾ ಕೇಂದ್ರಕ್ಕೆ ತೆರಳುವ ಮಾರ್ಗ ಮಧ್ಯೆ ಕಲ್ಕೆರೆ ಲೋಕನಾಥಪುರ ಬಳಿ ದೊಡ್ಡ ಗುಂಡಿಗಳು ವಾಹನ ಸವಾರರಿಗೆ ತೀವ್ರ ಸಮಸ್ಯೆ ಉಂಟು ಮಾಡುತ್ತಿವೆ.
ಕಡೂರು: ಪಟ್ಟಣದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿ 206ರ ಬೈಪಾಸ್ ಕಾಮಗಾರಿ ನಡೆಯುತ್ತಿದೆ. ಇದು ಸಂಪೂರ್ಣಗೊಂಡರೆ ಹೆದ್ದಾರಿಯಲ್ಲಿ ಬರುವ ವಾಹನಗಳು ಕಡೂರು ಪಟ್ಟಣದೊಳಗೆ ಹೋಗುವ ಅಗತ್ಯವಿಲ್ಲ. ಇದರಿಂದ ಪಟ್ಟಣದೊಳಗೆ ವಾಹನ ಸಂಚಾರ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿ ಒತ್ತಡ ಕಡಿಮೆಯಾಗುತ್ತದೆ. ಬೈಪಾಸ್ ರಸ್ತೆ ಕಾಮಗಾರಿ ಬಹಳಷ್ಟು ಪೂರ್ಣಗೊಂಡಿದೆ. ಆದರೆ ತಂಗಲಿ ಬಳಿ ಕಡೂರು ಪಟ್ಟಣಕ್ಕೆ ಪ್ರವೇಶ ಮಾಡುವ ಜಾಗದಿಂದ ಆರಂಭಿಸಿ ಕಡೂರು ಪಟ್ಟಣ ಕೊನೆಗೊಳ್ಳುವ ಉಳುಕಿನ ಕಲ್ಲು ತನಕ ರಸ್ತೆಯಲ್ಲಿ ಗುಂಡಿಗಳ ಸರಮಾಲೆಯೇ ಇದೆ. ಅಗ್ನಿಶಾಮಕ ಕಚೇರಿ ತೋಟಗಾರಿಕಾ ಇಲಾಖೆ ಕಚೇರಿಯೆದುರು ಮುಂದೆ ಬಂದರೆ ಬಸವೇಶ್ವರ ವೃತ್ತದ ಬಳಿ ಮರವಂಜಿ ರಸ್ತೆ ಶಾಸಕರ ಕಚೇರಿ ಎದುರು ಗಣಪತಿ ಆಂಜನೇಯ ವೃತ್ತ ವಿಜಯಲಕ್ಷ್ಮಿ ಟಾಕೀಸ್ ಬಳಿ ಹಲವು ಗುಂಡಿಗಳು ಇದ್ದು ಸಂಚಾರ ದುಸ್ತರವಾಗಿದೆ. ಇದು ರಾಷ್ಟ್ರೀಯ ಹೆದ್ದಾರಿಯಾದರೂ ಬೈಪಾಸ್ ರಸ್ತೆ ಕಾಮಗಾರಿ ಮುಗಿದರೆ ಸದರಿ ರಸ್ತೆಯ ನಿರ್ವಹಣೆಯನ್ನು ಪುರಸಭೆ ಮಾಡಬೇಕಾಗಬಹುದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಮಾಡಬೇಕು ಎಂದು ಕೆಲ ಅಧಿಕಾರಿಗಳು ಹೇಳುತ್ತಾರೆ. ಈ ಗೊಂದಲದ ನಡುವೆ ಪಟ್ಟಣದೊಳಗೆ ಹಾದು ಹೋಗಿರುವ ರಸ್ತೆಯಲ್ಲಿ ಆಗಿರುವ ಗುಂಡಿಗಳು ದೊಡ್ಡದಾಗುತ್ತಿವೆ. ಅವುಗಳನ್ನು ಮುಚ್ಚಿ ರಸ್ತೆ ದುರಸ್ತಿ ಮಾಡಿಸಬೇಕು. ಆ ನಂತರವೇ ಲೋಕೋಪಯೋಗಿ ಇಲಾಖೆ ಅಥವಾ ಪುರಸಭೆಗೆ ವಹಿಸಿ ನಿರ್ವಹಣೆ ಮಾಡಬೇಕು ಎಂಬುದು ಜನರ ಒತ್ತಾಯ.
ತರೀಕೆರೆ: ಮೊದಲೇ ಹಾಳಾಗಿದ್ದ ತರೀಕೆರೆ ಪಟ್ಟಣದ ಮುಖ್ಯ ರಸ್ತೆಗಳು ಈ ಬಾರಿ ಸುರಿದ ಅತಿಯಾದ ಮಳೆಯಿಂದಾಗಿ ಗುಂಡಿಗಳ ಮಧ್ಯೆ ರಸ್ತೆಯನ್ನು ಹುಡುಕಾಡುವಂತಾಗಿದೆ. ಕಳೆದ ತಿಂಗಳು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಪಟ್ಟಣದ ಮುಖ್ಯ ರಸ್ತೆಯನ್ನು ನಾಲ್ಕು ಪಥದ ರಸ್ತೆಯನ್ನಾಗಿ ವಿಸ್ತರಿಸುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ ಹಿಂಗಾರು ಮಳೆ ಮುಗಿಯುವ ಹಂತದಲ್ಲಿದ್ದರೂ ಸಹ ಇನ್ನು ಕಾಮಗಾರಿ ಪ್ರಾರಂಭವಾಗಿಲ್ಲ. ರಸ್ತೆಗಳಲ್ಲಿ ಬಿದ್ದಿದ್ದ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದರೂ ಸಹ ರಸ್ತೆಯಲ್ಲಿ ವಾಹನ ಸವಾರರು ಓಡಾಡುವುದು ಕಷ್ಟಕರವಾಗಿದೆ. ಕೂಡಲೇ ಎಚ್ಚೆತ್ತುಕೊಂಡು ಕಾಮಗಾರಿ ಆರಂಭಿಸಬೇಕು ಎಂಬುದು ಸ್ಥಳೀಯರ ಒತ್ತಾಯ.
ಮೂಡಿಗೆರೆ: ತಾಲ್ಲೂಕಿನಲ್ಲಿ ಹಾದು ಹೋಗಿರುವ ಹೆದ್ದಾರಿಯಲ್ಲಿ ನಿರ್ಮಾಣವಾಗಿರುವ ಗುಂಡಿಗಳಿಂದ ವಾಹನ ಸವಾರರುನಿತ್ಯವೂ ಹೈರಾಣಾಗುವಂತಾಗಿದೆ. ತಾಲ್ಲೂನಿಂದ ಸಕಲೇಶಪುರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಜನ್ನಾಪುರದಿಂದ ಜಿಲ್ಲೆಯ ಗಡಿಭಾಗವಾದಕಿರುಗುಂದದವರೆಗೂ ಗುಂಡಿ ಬಿದ್ದು ನಿತ್ಯವು ತಿರುಗಾಡುವ ನೂರಾರು ವಾಹನಗಳ ಚಾಲಕರು ಹಿಡಿಶಾಪಹಾಕುತ್ತಿದ್ದಾರೆ. ಈ ಬಾರಿ ಮಳೆ ಹೆಚ್ಚಾಗಿ ಸುರಿದ ಪರಿಣಾಮ ರಸ್ತೆಗಳ ಹಾನಿ ಪ್ರಮಾಣವೂ ಹೆಚ್ಚಾಗಿದೆ. ರಸ್ತೆ ಇಕ್ಕೆಲದ ಚರಂಡಿಗಳುಮುಚ್ಚಿರುವುದರಿಂದ ಮಳೆ ನೀರು ಸರಾಗವಾಗಿ ಹರಿಯಲಾಗದೇ ರಸ್ತೆ ಮೇಲೆ ಸಂಗ್ರಹವಾಗುವುದರಿಂದ ಗುಂಡಿಬೀಳುತ್ತಿವೆ. ತಾಲ್ಲೂಕಿನಿಂದ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕೂಡ ಕುದುರೆಗುಂಡಿ ಆಲದಗುಡ್ಡಸೇರಿದಂತೆ ವಿವಿಧೆಡೆ ಗುಂಡಿ ಬಿದ್ದು ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ದಶಕದಿಂದ ಅನುದಾನ ಕಾಣದ ಗ್ರಾಮೀಣರಸ್ತೆಗಳ ಸ್ಥಿತಿಯಂತೂ ಹೇಳ ತೀರದಾಗಿದೆ. ತಾಲ್ಲೂಕಿನ ಸಾರಗೋಡಿನಿಂದ ಆಲ್ದೂರು ಸಂಪರ್ಕಿಸುವ ಗ್ರಾಮೀಣ ರಸ್ತೆ ಐದು ವರ್ಷಗಳಿಂದ ಗುಂಡಿ ಬಿದ್ದಿದ್ದರೂ ಕನಿಷ್ಠ ಗುಂಡಿ ಮುಚ್ಚುವ ಕಾರ್ಯವನ್ನೂ ಮಾಡಿಲ್ಲ. ಸಾರಗೋಡು -ಕೂವೆ ರಸ್ತೆಯೂ ಗುಂಡಿಗಳಿಂದ ಕೂಡಿದೆ. ಮತ್ತಿಕಟ್ಟೆ ಬಿ. ಹೊಸಳ್ಳಿ ರಸ್ತೆ ಬಿ. ಹೊಸಳ್ಳಿ - ಕುಂಡ್ರ ರಸ್ತೆ ಮೂಡಿಗೆರೆ - ತತ್ಕೊಳ ರಸ್ತೆ ಕಡೆಮಾಡ್ಕಲ್- ಘಟ್ಟದಹಳ್ಳಿರಸ್ತೆ ಹೊಯ್ಸಳಲು ರಸ್ತೆ ಸೇರಿದಂತೆ ಗ್ರಾಮೀಣ ಪ್ರದೇಶಗಳ ಬಹುತೇಕ ರಸ್ತೆಗಳು ಗುಂಡಿಮಯವಾಗಿದ್ದು ವಾಹನಸವಾರರು ಹೈರಾಣಾಗುವಂತಾಗಿದೆ.
ನಗರದ ವಿಜಯಪುರ ಮುಖ್ಯರಸ್ತೆಯಲ್ಲಿ ಬಿದ್ದಿರುವ ಗುಂಡಿ ಮುಚ್ಚದ ನಗರಸಭೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು ಗುಂಡಿ ಮೇಲೆ ಬ್ಯಾರಿಕೇಡ್ ಇಟ್ಟು ಪೂಜೆ ಸಲ್ಲಿಸಿದ್ದಾರೆ. ಹಲವು ದಿನಗಳಿಂದ ರಸ್ತೆಯಲ್ಲಿ ಗುಂಡಿ ಬಿದ್ದಿದ್ದು ಇದರಿಂದ ಹಲವು ಬೈಕ್ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಆದರೂ ಗುಂಡಿ ಮುಚ್ಚಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದು ಪೂಜೆ ಸಲ್ಲಿಸುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ. ಮೂರು ದಿನಗಳಲ್ಲಿ ಗುಂಡಿ ಮುಚ್ಚದಿದ್ದರೆ ಹಾಲು– ತುಪ್ಪ ಬಿಡುವ ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.