ADVERTISEMENT

ಕೊಟ್ಟಿಗೆಹಾರ | ದರೋಡೆ ಪ್ರಕರಣ: ಐವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2024, 12:49 IST
Last Updated 23 ಫೆಬ್ರುವರಿ 2024, 12:49 IST
<div class="paragraphs"><p>ಜೈಲು(ಸಾಂದರ್ಭಿಕ ಚಿತ್ರ)</p></div>

ಜೈಲು(ಸಾಂದರ್ಭಿಕ ಚಿತ್ರ)

   

ಕೊಟ್ಟಿಗೆಹಾರ: ಮೂಡಿಗೆರೆ ತಾಲ್ಲೂಕಿನ ಜಾವಳಿ ಸಮೀಪದ ಜೆ.ಹೊಸಳ್ಳಿಯ ಅನಂತರಾಮ ಹೆಬ್ಬಾರ್ ಎಂಬುವರ ತೋಟದ ಮನೆಗೆ ನುಗ್ಗಿ ದರೋಡೆ ನಡೆಸಿದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಫೆ.15ರಂದು ರಾತ್ರಿ ದರೋಡೆ ನಡೆದಿತ್ತು. ಮನೆಯಲ್ಲಿದ್ದವರ ಮೇಲೆ ಖಾರದ ಪುಡಿ ಎರಚಿ, ಅಡ್ಡಿಪಡಿಸಲು ಬಂದ ಮನೆ ಕೆಲಸಗಾರ ಶ್ರೀನಿವಾಸಮೂರ್ತಿ ಎಂಬುವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ, ಮನೆಯಲ್ಲಿ ₹5.25 ಲಕ್ಷ ನಗದು ಮತ್ತು ₹1.25 ಲಕ್ಷ ಮೌಲ್ಯದ ಚಿನ್ನಾಭರಣ ದೋಚಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ಮೂಲದ ಅನ್ಸರ್ ಆಲಿಯಾಸ್ ಅಂಚು, ಬೆಳ್ತಂಗಡಿ ಮೂಲದ ಖಲಂದರ್ ಆಲಿಯಾಸ್ ಮೊಹಮ್ಮದ್ ಗೌಸ್, ಮೂಡಿಗೆರೆ ಸಮೀಪದ ಬೆಟ್ಟದಮನೆ ಗ್ರಾಮದ ಶೈನಿಂಗ್ ಕುಮಾರ್ ಆಲಿಯಾಸ್ ಶೈನಿ, ಅಣಜೂರು ಗ್ರಾಮದ ಅಶ್ರಫ್ ಆಲಿಯಾಸ್ ಹಸರಬ್, ಜನ್ನಾಪುರ ಗ್ರಾಮದ ಉಮೇಶ್ ಬಂಧಿತ ಆರೋಪಿಗಳು.

ADVERTISEMENT

ಕೃತ್ಯ ನಡೆದ ಅನ್ಸರ್ ಎಂಬ ಆರೋಪಿ ತಪ್ಪಿಸಿಕೊಂಡು ಕತ್ತಲಲ್ಲಿ ಓಡುವಾಗ ದಾರಿ ತಪ್ಪಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದು, ಪೊಲೀಸರ ಅತಿಥಿಯಾಗಿದ್ದ.  ಉಳಿದವರು ತಪ್ಪಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಇನ್ನೂ ನಾಲ್ವರು ಆರೋಪಿಗಳು ಭಾಗಿಯಾಗಿರುವ ಶಂಕೆ ಇದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಕಾಫಿ ವ್ಯಾಪಾರಕ್ಕೆ ಬಂದು ದರೋಡೆ: ದರೋಡೆ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಟ್ಟದಮನೆ ಮೂಲದ ಶೈನಿ ಕುಮಾರ್ ಕಾಫಿ ವ್ಯಾಪಾರಿಯಾಗಿದ್ದು, ದರೋಡೆ ನಡೆದ ಅನಂತ ಹೆಬ್ಬಾರ್ ಅವರ ಮನೆಯಿಂದ ಕಾಫಿಬೀಜ ಖರೀದಿಸುತ್ತಿದ್ದ. ಈ ಮನೆಯನ್ನು ದರೋಡೆಗೆ ಗುರುತಿಸಿ, ಉಳಿದ ಆರೋಪಿಗಳನ್ನು ಒಟ್ಟು ಸೇರಿಸಿ ಕೃತ್ಯಕ್ಕೆ ಈತನೇ ಸಂಚು ರೂಪಿಸಿದ್ದ ಎನ್ನಲಾಗಿದೆ. ದರೋಡೆ ನಡೆದ ಹಿಂದಿನ ದಿನ ಆರೋಪಿಗಳೆಲ್ಲರೂ ಕೊಟ್ಟಿಗೆಹಾರದ ಲಾಡ್ಜ್ ಒಂದರಲ್ಲಿ ತಂಗಿದ್ದರು ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ವಿಕ್ರಂ ಅಮಟೆ, ಹೆಚ್ಚುವರಿ ಎಸ್ಪಿ ಯೋಗೇಂದ್ರನಾಥ್, ಡಿವೈಎಸ್ಪಿ ಶೈಲೇಂದ್ರ ಎಚ್.ಎಂ. ಮಾರ್ಗದರ್ಶನದಲ್ಲಿ ಮೂಡಿಗೆರೆ ಸರ್ಕಲ್ ಇನ್‌ಸ್ಪೆಕ್ಟರ್‌ ಸೋಮೇಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು. ಕಾರ್ಯಾಚರಣೆಯಲ್ಲಿ ಬಾಳೂರು ಪಿಎಸ್‌ಐ ದಿಲೀಪ್ ಕುಮಾರ್, ಮೂಡಿಗೆರೆ ಪಿಎಸ್‌ಐ ವಿ.ಶ್ರೀನಾಥ್ ರೆಡ್ಡಿ, ಗೋಣಿಬೀಡು ಪಿಎಸ್‌ಐ ಹರ್ಷವರ್ಧನ್, ಮೂಡಿಗೆರೆ ಪೊಲೀಸ್ ಠಾಣೆಯ ಸಿ.ಟಿ.ರಮೇಶ್, ಗಿರೀಶ್ ಬಿ.ಸಿ, ಬಾಳೂರು ಠಾಣಾ ಎಎಸ್‌ಐ ವಿಶ್ವನಾಥ್, ನಂದೀಶ್, ರಾಜೇಂದ್ರ, ವಸಂತ್, ಓಂಕಾರನಾಯ್ಕ, ಸತೀಶ್, ಮಹೇಶ್, ಅನಿಲ್, ಮನು ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.