ADVERTISEMENT

ಬಾಳೆಹೊನ್ನೂರು: ತೋಟದಲ್ಲೇ ಕೊಳೆಯುತ್ತಿರುವ ಹಣ್ಣಡಕೆ

ಸತತ ಮಳೆಯಿಂದ ಹಾನಿ: ಬೆಳೆಗಾರರಿಗೆ ಸಂಕಷ್ಟ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 15:30 IST
Last Updated 17 ಅಕ್ಟೋಬರ್ 2024, 15:30 IST
ಬಾಳೆಹೊನ್ನೂರು ಸಮೀಪದ ಹುಲ್ಸೆಯಲ್ಲಿ ತೋಟದಲ್ಲೇ ಕೊಳೆತ ಹಣ್ಣಡಿಕೆಯನ್ನು ಯಂತ್ರದ ಮೂಲಕ ಸಂಸ್ಕರಿಸುತ್ತಿರುವುದು
ಬಾಳೆಹೊನ್ನೂರು ಸಮೀಪದ ಹುಲ್ಸೆಯಲ್ಲಿ ತೋಟದಲ್ಲೇ ಕೊಳೆತ ಹಣ್ಣಡಿಕೆಯನ್ನು ಯಂತ್ರದ ಮೂಲಕ ಸಂಸ್ಕರಿಸುತ್ತಿರುವುದು   

ಬಾಳೆಹೊನ್ನೂರು: ಸತತ ಮಳೆಯಿಂದಾಗಿ ಹಣ್ಣಡಕೆ ನೆಲಕ್ಕೆ ಉದುರಿ ಬಿದ್ದು ತೋಟದಲ್ಲೇ ಕೊಳೆಯತೊಡಗಿದ್ದು ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ.

ಮಳೆಯಿಂದಾಗಿ ಅಡಿಕೆಗೆ ಕೊಳೆ ರೋಗ ಕಾಣಿಸಿಕೊಂಡಿದೆ. ಕೊಳೆ ಪೀಡಿತ ಅಡಿಕೆ ಜತೆಗೆ ಹಣ್ಣಾದ ಅಡಿಕೆಯೂ ಉದುರತೊಡಗಿವೆ. ಇನ್ನೊಂದು ಸುತ್ತಿನ ಬೋರ್ಡೊ ದ್ರಾವಣ ಸಿಂಪಡಿಸಬೇಕಾ ಅಥವಾ ಮರದಲ್ಲಿ ಉಳಿದಿರುವ ಅಡಿಕೆ ಕೊಯಿಲು ಮಾಡಬೇಕಾ ಎಂಬ ಗೊಂದಲದಲ್ಲಿ  ಬೆಳೆಗಾರರಿದ್ದಾರೆ.

ಹಣ್ಣಾಗಿ ಉದುರಿ ಕೊಳೆತ  ಅಡಿಕೆಯನ್ನು ಸಂಸ್ಕರಿಸಿ ಒಣಗಿಸಿ ಸಿಪ್ಪೆಗೋಟು ಮಾಡಲು ಮಳೆ ಅಡ್ಡಿಯಾಗಿದೆ. ಹಸಿ ಗೋಟಡಿಕೆಯನ್ನು ನೇರವಾಗಿ ಮಾರಾಟ ಮಾಡೋಣವೆಂದರೆ, ಬೆಲೆ ಕಡಿಮೆ ಇದ್ದು, ಕೆ.ಜಿಗೆ ₹25 ದರದಲ್ಲಿ ಮದ್ಯವರ್ತಿಗಳು ಖರೀದಿಸುತ್ತಿದ್ದಾರೆ. ಈಗಾಗಲೇ ಅಡಿಕೆ ತೋಟದಲ್ಲಿ ಎಲೆಚುಕ್ಕಿ ರೋಗ, ಹಳದಿ ಎಲೆ ರೋಗ ತೀವ್ರವಾಗಿದ್ದು,  ಶೇ50ಕ್ಕೂ ಹೆಚ್ಚು ಫಸಲು ನಷ್ಟವಾಗುವ ಭೀತಿ ಎದುರಾಗಿದೆ ಎನ್ನುತ್ತಾರೆ ಬೆಳೆಗಾರರು.

ADVERTISEMENT

ಕಳೆದ ವರ್ಷ ಅಕ್ಟೋಬರ್‌ನಲ್ಲಿ ₹38 ರಿಂದ ₹40 ಸಾವಿರಕ್ಕೆ ಮಾರಾಟವಾಗುತ್ತಿದ್ದ ಗೊರಬಲು ಅಡಿಕೆ ದರ ಈ ಬಾರಿ ₹30 ರಿಂದ ₹32 ಸಾವಿರಕ್ಕೆ ಕುಸಿದಿದೆ. ಬೆಲೆ ಕುಸಿತದ ಜತೆಗೆ ಇಳುವರಿಯೂ ಕಡಿಮೆಯಾಗಿರುವುದು ಮಲೆನಾಡಿನ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

‘ಕಳೆದ ಎರಡು ವರ್ಷ ಫಸಲು ನಷ್ಟಕ್ಕೆ ಸರ್ಕಾರ ಅಡಿಕೆ ಬೆಳೆಗಾರರಿಗೆ ಎಕರೆಗೆ ₹20 ಸಾವಿರ ಪರಿಹಾರ ನೀಡಿದೆ.ಈ ಬಾರಿಯೂ ಸರ್ಕಾರ ಪರಿಹಾರ ನೀಡಬೇಕು. ಅಡಿಕೆ ಬೆಳೆಗಾರರ ಸಮಸ್ಯೆ ಕುರಿತು ತೋಟಗಾರಿಕೆ ಸಚಿವರನ್ನು ಭೇಟಿ ಮಾಡಿ ಗಮನ ಸೆಳೆಯಲು ಶಾಸಕರ ಮೂಲಕ ಕಳೆದ ಮೂರು ತಿಂಗಳಿನಿಂದ ಪ್ರಯತ್ನಿಸಿದರೂ ಫಲಪ್ರದವಾಗಿಲ್ಲ. ಬೆಳೆಗಾರರ ಸಮಸ್ಯೆ ಕೇಳುವವರೇ ಇಲ್ಲವಾಗಿದೆ. ಸರ್ಕಾರ ತಕ್ಷಣ ಬೆಳೆಗಾರರ ನೆರವಿಗೆ ದಾವಿಸಬೇಕು’ ಎನ್ನುತ್ತಾರೆ ಮಲೆನಾಡು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ತಲವಾನೆ ಪ್ರಕಾಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.