ADVERTISEMENT

ನರಸಿಂಹರಾಜಪುರ: ಚೇತರಿಕೆ ಹಾದಿಯಲ್ಲಿ ರಬ್ಬರ್‌ ಧಾರಣೆ

ಬೆಲೆ ಇಳಿಕೆ ಕಾರಣ ರಬ್ಬರ್‌ ಮರಗಳನ್ನು ಕಡಿದು ಅಡಿಕೆ ಬೆಳೆದ ಕೃಷಿಕರು

ಕೆ.ವಿ.ನಾಗರಾಜ್
Published 29 ಮಾರ್ಚ್ 2024, 6:45 IST
Last Updated 29 ಮಾರ್ಚ್ 2024, 6:45 IST
ನರಸಿಂಹರಾಜಪುರ ತಾಲ್ಲೂಕಿನ ಲಿಂಗಾಪುರ ಗ್ರಾಮದ ವ್ಯಾಪ್ತಿಯಲ್ಲಿರುವ ರಬ್ಬರ್ ತೋಟ
ನರಸಿಂಹರಾಜಪುರ ತಾಲ್ಲೂಕಿನ ಲಿಂಗಾಪುರ ಗ್ರಾಮದ ವ್ಯಾಪ್ತಿಯಲ್ಲಿರುವ ರಬ್ಬರ್ ತೋಟ   

ನರಸಿಂಹರಾಜಪುರ: ರಬ್ಬರ್‌ ಧಾರಣೆಯಲ್ಲಿ ಏರಿಕೆ ಆಗುತ್ತಿರುವುದು ತಾಲ್ಲೂಕಿನ ಬೆಳೆಗಾರರಲ್ಲಿ ಆಶಾಭಾವನೆ ಮೂಡಿಸಿದೆ. ಭತ್ತ ಬೆಳೆಯುತ್ತಿದ್ದ ರೈತರು  ಬೆಲೆ ಕುಸಿತದಿಂದ ಸಂಕಷ್ಟಕ್ಕೀಡಾದಾಗ ಭತ್ತದ ಬದಲು ರಬ್ಬರ್ ಬೆಳೆಯಲು ಒಲವು ತೋರಿದ್ದರು. 2013ರಲ್ಲಿ ರಬ್ಬರ್ ಧಾರಣೆ ಕೆಜಿಗೆ ₹250ರವರೆಗೂ ಏರಿಕೆ ಕಂಡಿತ್ತು. ಬೆಲೆ ಹೆಚ್ಚಾದಂತೆ ತಾಲ್ಲೂಕಿನಲ್ಲಿ ರಬ್ಬರ್‌ ಬೆಳೆಯುವ ಪ್ರದೇಶವೂ ವಿಸ್ತರಣೆಗೊಂಡಿತ್ತು. ಸದ್ಯ 2,799 ಹೆಕ್ಟೇರ್ ಪ್ರದೇಶದಲ್ಲಿ ರಬ್ಬರ್ ಬೆಳೆಯಲಾಗುತ್ತಿದೆ.

ಐದಾರು ವರ್ಷಗಳ ಹಿಂದೆ ರಬ್ಬರ್ ಧಾರಣೆ ಕೆಜಿಗೆ ₹100ರ ಅಸುಪಾಸಿಗೆ ಕುಸಿದಿತ್ತು. ಕೂಲಿ ದರ ಹೆಚ್ಚಳ ಮತ್ತು ಬೆಲೆ ಕುಸಿತದಿಂದ ಕಂಗೆಟ್ಟ ಬೆಳೆಗಾರರು ರಬ್ಬರ್ ಟ್ಯಾಪಿಂಗ್ ಮಾಡುವುದನ್ನೇ ನಿಲ್ಲಿಸಿದ್ದರು. ಅನೇಕರು ರಬ್ಬರ್ ಮರಗಳನ್ನು ಕಡಿದು, ಆ ಜಾಗದಲ್ಲಿ ಅಡಿಕೆ ತೋಟ ಅಭಿವೃದ್ಧಿಪಡಿಸಿದ್ದರು. ಈಗ ಮತ್ತೆ ರಬ್ಬರ್‌ ಬೆಲೆ ಕೆ.ಜಿಗೆ ₹160ರಿಂದ ₹180ರ ಆಸುಪಾಸಿಗೆ ಏರಿಕೆಯಾಗಿರುವುದು ರಬ್ಬರ್‌ ತೋಟ ಹೊಂದಿರುವ ರೈತರಲ್ಲಿ ಭರವಸೆ ಮೂಡಿಸಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸದ್ಯ 1ಕೆ.ಜಿ ರಬ್ಬರ್‌ಗೆ ₹230ದರ ಇದೆ.  ಈ ರಬ್ಬರ್‌ ಆಮದು ಮಾಡಿಕೊಂಡರೆ ಕೆ.ಜಿಗೆ ₹275 ದರ ತಗುಲುತ್ತದೆ. ಜತೆಗೆ ಥಾಯ್ಲೆಂಡ್‌ನಲ್ಲಿ ರಬ್ಬರ್ ಉತ್ಪಾದನೆ ಕಡಿಮೆಯಾಗಿರುವುದರಿಂದ ಸ್ಥಳೀಯ ರಬ್ಬರ್‌ಗೆ ಬೇಡಿಕೆ ಹೆಚ್ಚುತ್ತಿದೆ. ಟಯರ್‌ ತಯಾರಿಕಾ ಕಂಪನಿಗಳು ರಬ್ಬರ್‌ ಬೆಲೆ ಕಡಿಮೆ ಇದ್ದಾಗ ಹೆಚ್ಚು ಖರೀದಿಸಿ ದಾಸ್ತಾನು ಮಾಡಿಕೊಂಡಿವೆ. ಈ ಸಂಗ್ರಹ ಕರಗಿದರೆ ಬೆಲೆಯಲ್ಲಿ ಮತ್ತೆ ಏರಿಕೆಯಾಗಬಹುದು. ಬರುವ ದಿನಗಳಲ್ಲಿ ರಬ್ಬರ್‌ ಕೆ.ಜಿಗೆ ₹200ರ ಅಸುಪಾಸಿನಲ್ಲಿ ನಿಗದಿಯಾಗುವ ಸಾಧ್ಯತೆಯಿದೆ ಎಂದು ತಾಲ್ಲೂಕು ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ ಟಿ.ವಿ.ವಿಜಯ ಹೇಳಿದರು.

ADVERTISEMENT

‘ಈಗಾಗಲೇ ಸಾಕಷ್ಟು ರೈತರು ರಬ್ಬರ್ ತೋಟ ತೆರವುಗೊಳಿಸಿ ಅಡಿಕೆ ಬೆಳೆಯಲು ಪ್ರಾರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ರಬ್ಬರ್‌ ಬೆಲೆ ಹೆಚ್ಚಲಿದೆ ಎಂದು ರಬ್ಬರ್ ಮಂಡಳಿಯ ತಾಲ್ಲೂಕು ಕ್ಷೇತ್ರಾಧಿಕಾರಿ ಟೋನಿ ಜಾನ್ ಹೇಳಿದರು. ರಬ್ಬರ್ ಮಂಡಳಿಯ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಾದೇಶಿಕ ಅಧಿಕಾರಿ ಡಿ.ಸುರೇಶ್ ಅವರ ಅಭಿಪ್ರಾಯವೂ ಇದೇ ಆಗಿದ್ದು, ರಬ್ಬರ್‌  ಬೆಲೆಯಲ್ಲಿ ಏರಿಕೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರಬ್ಬರ್ ಧಾರಣೆ 1ಕೆಜಿಗೆ ₹180ರ ಅಸುಪಾಸಿನಲ್ಲಿ ನಿಗದಿಯಾಗಿರುವುದು ಸಂತಸ ತಂದಿದೆ. ಇದೇ ಬೆಲೆ ಇದ್ದರೂ ಬೆಳೆಗಾರರಿಗೆ ಲಾಭವಾಗಲಿದೆ.
-ಕೆ.ಕೆ.ಸುನಿ, ರಬ್ಬರ್ ಬೆಳೆಗಾರ ಬಾಳೆಕೊಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.