ಚಿಕ್ಕಮಗಳೂರು: ಭದ್ರಾ ಅಭಯಾರಣ್ಯದ ಲಕ್ಕವಳ್ಳಿ ವಲಯದಲ್ಲಿ ಕಾಡುಹಂದಿಗಳು ಸರಣಿಯಾಗಿ ಸಾವಿಗೀಡಾಗಿವೆ. 15 ದಿನಗಳಲ್ಲಿ 10ಕ್ಕೂ ಹೆಚ್ಚು ಹಂದಿಗಳು, ಒಂದು ಕಾಡುಕೋಣ ಮೃತಪಟ್ಟಿವೆ.
ಭದ್ರಾ ಹಿನ್ನೀರು ಭಾಗದ ಮತ್ತಿಕೆರೆ ಪ್ರದೇಶದಲ್ಲಿ ಇದೇ 1ರಂದು ಐದು ಹಂದಿಗಳ ಮೃತದೇಹಗಳು ಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದವು. 2ರಂದು ಅದೇ ಪ್ರದೇಶದಲ್ಲಿ ಅದಾಗ ತಾನೇ ಮೃತಪಟ್ಟಿದ್ದ ಒಂದು ಹಂದಿ ಕಳೇಬರ ಪತ್ತೆಯಾಗಿತ್ತು. ದೇಹದಿಂದ ಮಾದರಿ ಸಂಗ್ರಹಿಸಿ ಬೆಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥಗೆ ಪರೀಕ್ಷೆಗೆ ರವಾನಿಸಲಾಗಿದೆ.
ಹಿನ್ನೀರು ಪ್ರದೇಶದಲ್ಲಿ ಸತ್ತು ಬಿದ್ದಿದ್ದ ಹಂದಿಯೊಂದನ್ನು ಮೊಸಳೆಯೊಂದು ತಿಂದಿರುವುದು, ಮತ್ತೊಂದು ಕಳೇಬರವನ್ನು ಹಂದಿಯೇ ತಿಂದಿರುವುದನ್ನು ಅರಣ್ಯ ಸಿಬ್ಬಂದಿ ನೋಡಿದ್ದಾರೆ.
ಇದೇ 10ರಂದು ಹೊಸಹಳ್ಳಿ ಭಾಗದಲ್ಲಿ ಒಂದು, 12ರಂದು ಕೋಳಿಗೂಡು ಪ್ರದೇಶದಲ್ಲಿ ಎರಡು, 14ರಂದು ಮಾವಿನಹಳ್ಳ ಭಾಗದಲ್ಲಿ ಒಂದು ಕಾಡುಹಂದಿ ಕಳೇಬರ ಪತ್ತೆಯಾಗಿವೆ. ಅಲ್ಲದೆ, 13ರಂದು ಜೇನುಹಳ್ಳ ಪ್ರದೇಶದಲ್ಲಿ ಕಾಡುಕೋಣದ ಮೃತದೇಹ ಸಿಕ್ಕಿದೆ.
ಮರಣೋತ್ತರ ಪರೀಕ್ಷೆ ನಡೆಸಿದ ಶಿವಮೊಗ್ಗ ವನ್ಯಜೀವಿ ವಿಭಾಗದ ಹಿರಿಯ ಪಶುವೈದ್ಯಾಧಿಕಾರಿ ಎಸ್. ವಿನಯ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಮೊದಲ ಐದು ಹಂದಿಗಳ ಕಳೇಬರ ಪೂರ್ಣ ಕೊಳೆತ್ತಿತ್ತು. ಅದಾಗ ಮೃತಪಟ್ಟಿದ್ದ ಹಂದಿಯ ಕಳೇಬರದ ಮಾದರಿ ಸಂಗ್ರಹಿಸಿದೆವು. ಕಾಡುಕೋಣದ ಕಳೇಬರವು ಬಹುತೇಕ ಕೊಳೆತ್ತಿತ್ತು. ಪ್ರಾಣಿಗಳ ಸಾವಿನ ಕಾರಣದ ಶೋಧದಲ್ಲಿ ತೊಡಗಿದ್ದೇವೆ’ ಎಂದು ತಿಳಿಸಿದರು.
ಹಿನ್ನೀರು ಪ್ರದೇಶದಲ್ಲಿ ಹಂದಿಗಳು ಸತ್ತು ಕೊಳೆಯುವವರೆಗೆ ಅರಣ್ಯ ಸಿಬ್ಬಂದಿಗೆ ಗೊತ್ತಾಗಿಲ್ಲ. ಗಸ್ತಿನಲ್ಲಿರುವ ಸಿಬ್ಬಂದಿ ನಿಗಾ ವಹಿಸಿಲ್ಲ. ಅರಣ್ಯದೊಳಗೆ ಇನ್ನಷ್ಟು ಕಾಡುಹಂದಿಗಳು ಸತ್ತಿರಬಹುದು ಎಂಬುದು ಪರಿಸರಾಸಕ್ತರ ಶಂಕೆ.
‘ಹಿಂದೊಮ್ಮೆ ‘ರೆಂಡರ್ ಪೆಸ್ಟ್’ ಕಾಯಿಲೆ ಕಾಣಿಸಿಕೊಂಡು ಹಲವಾರು ಕಾಡುಕೋಣಗಳು ಈ ಅರಣ್ಯದಲ್ಲಿ ಮೃತಪಟ್ಟಿದ್ದವು. ಕಾಡುಹಂದಿಗಳ ಸಾವಿಗೆ ಕಾರಣ ಏನು ಎಂಬುದನ್ನು ಪತ್ತೆ ಹಚ್ಚಬೇಕು. ಮುಂಜಾಗ್ರತೆ ವಹಿಸಬೇಕು. ಅರಣ್ಯಾಧಿಕಾರಿಗಳು ವಿಷಯ ಮುಚ್ಚಿಡಲು ಪ್ರಯತ್ನಿಸಬಾರದು’ ಎಂದು ವನ್ಯಜೀವಿ ಪರಿಪಾಲಕ ಜಿ.ವೀರೇಶ್ ಹೇಳಿದರು.
4 ಹಂದಿ ಕಳೇಬರ ಪತ್ತೆ?
ಭದ್ರಾ ಅಭಯಾರಣ್ಯದ ಲಕ್ಕವಳ್ಳಿ ವಲಯದಲ್ಲಿ ಗುರುವಾರ ಮತ್ತೆ ನಾಲ್ಕು ಹಂದಿಗಳ ಕಳೇಬರ ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಗುರುವಾರ ಹಂದಿಗಳ ಕಳೇಬರ ಸಿಕ್ಕಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಭದ್ರಾ ಹುಲಿ ಯೋಜನೆ ನಿರ್ದೇಶಕ ಎಸ್.ಧನಂಜಯ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.