ADVERTISEMENT

ಸರ್ವರ್ ಸಮಸ್ಯೆ: ಪಡಿತರ ಪಡೆಯಲು ಪರದಾಟ

ಜೋಸೆಫ್ ಎಂ.ಆಲ್ದೂರು
Published 25 ಅಕ್ಟೋಬರ್ 2024, 7:49 IST
Last Updated 25 ಅಕ್ಟೋಬರ್ 2024, 7:49 IST
ಪಡಿತರಕ್ಕಾಗಿ ನ್ಯಾಯಬೆಲೆ ಅಂಗಡಿ ಎದುರು ಕುಳಿತಿರುವ ಜನ
ಪಡಿತರಕ್ಕಾಗಿ ನ್ಯಾಯಬೆಲೆ ಅಂಗಡಿ ಎದುರು ಕುಳಿತಿರುವ ಜನ   

ಆಲ್ದೂರು: ಪಡಿತರ ಪಡೆಯಲು ಸರ್ವರ್ ಸಮಸ್ಯೆ ಸವಾಲಾಗಿ ಪರಿಣಮಿಸಿದ್ದು, ಆವತಿ ಹೋಬಳಿ ಜನ ಪರದಾಡುತ್ತಿದ್ದಾರೆ.

ಆವತಿ ಪ್ರಾಥಮಿಕ ಕೃಷಿ ಪತ್ತಿನ ನ್ಯಾಯಬೆಲೆ ಅಂಗಡಿಯ ವ್ಯಾಪ್ತಿಯಲ್ಲಿ ನರಿಗುಡ್ಡೆ, ಕೆರೆಮಕ್ಕಿ, ಹೊಸಳ್ಳಿ, ಬೆಟ್ಟದ ಮಳಲಿ, ಬೆರಣಗೋಡು, ಮಸಗಲಿ, ಕುಂಬಾರಳ್ಳಿ, ಬಸರವಳ್ಳಿ, ಬೈಗೂರು ಸೇರಿ 15ಕ್ಕೂ ಹೆಚ್ಚು ಗ್ರಾಮಗಳಿವೆ. ಎಲ್ಲರೂ ಈ ನ್ಯಾಯಬೆಲೆ ಅಂಗಡಿಯನ್ನೇ ಅವಲಂಬಿಸಿದ್ದಾರೆ. ಪಡಿತರ ಪಡೆಯಲು ದಿನವಿಡೀ ಕಾಯುವ ಸ್ಥಿತಿ ಇದ್ದು, ಆಹಾರ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಈ ವ್ಯಾಪ್ತಿಯಲ್ಲಿ ಬಹುತೇಕ ಕಾರ್ಮಿಕ ಕುಟುಂಬಗಳೇ ಇದ್ದು, ಪಡಿತರ ಪಡೆಯಲು ಕೆಲಸಕ್ಕೆ ರಜೆ ಮಾಡಿ ಬಂದರೂ ಸಾಧ್ಯವಾಗುತ್ತಿಲ್ಲ. ಒಂದು ದಿನದ ಕೂಲಿ ತೊರೆದು ಕಾದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ಬಡ ಜನರು ಅನುಭವಿಸುತ್ತಿರುವ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಸ್ಥಳೀಯರಾದ ಸಂದೀಪ್, ಸತೀಶ್, ಹೊನ್ನೇಶ್, ಬಸವಯ್ಯ ಒತ್ತಾಯಿಸಿದರು.

ADVERTISEMENT

‘ಗುಣಮಟ್ಟದ ನೆಟ್‌ವರ್ಕ್ ಒದಗಿಸಬೇಕು. ಕೂಲಿ ಕಾರ್ಮಿಕರು ಮತ್ತು ಪಡಿತರದಾರರನ್ನು ಸಮಸ್ಯೆಯಿಂದ ಮುಕ್ತಗೊಳಿಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತರಾದ ಅರೆನೂರು ಸುಪ್ರೀತ್ ಆಗ್ರಹಿಸಿದರು.

‘ಮನೆಯಲ್ಲಿರುವ ಎಲ್ಲಾ ಕೆಲಸ ಬಾಕಿ ಉಳಿಸಿ, ತೋಟದ ಕೆಲಸಕ್ಕೆ ರಜೆ ಹಾಕಿ ಪಡಿತರ ಪಡೆಯಲು ಬಂದರೆ ದಿನವಿಡಿ ಕಾದು ವಾಪಸ್ ಹೋಗುತ್ತಿದ್ದೇವೆ. ವಯೋವೃದ್ಧರು, ಅಂಗವಿಕಲರೂ ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಗೃಹಿಣಿಯರಾದ ಆಶಾ, ಲಕ್ಷ್ಮಮ್ಮ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.