ADVERTISEMENT

ಲೈಂಗಿಕ ದೌರ್ಜನ್ಯ ಆರೋಪದ ವಿಡಿಯೊ ಸೃಷ್ಟಿ: ಗ್ರಾಪಂ ಸದಸ್ಯ ಬಂಧನ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 15:27 IST
Last Updated 25 ಜೂನ್ 2024, 15:27 IST
ಶಬರೀಶ್ 
ಶಬರೀಶ್    

ಶೃಂಗೇರಿ (ಚಿಕ್ಕಮಗಳೂರು) : ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ವಿಚಾರವಾಗಿ ಬಾಲಕರಿಂದ ಸುಳ್ಳು ವಿಡಿಯೊ ಸೃಷ್ಟಿಸಿದ ಆರೋಪದ ಮೇಲೆ ತಾಲ್ಲೂಕಿನ ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಸದಸ್ಯ ಶಬರೀಶ್ ಮತ್ತು ಸೂರ್ಯ ಎಂಬುವರ ವಿರುದ್ಧ ತಾಲ್ಲೂಕು ಶಿಶು ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಎನ್.ಜಿ. ಶೃಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ಶಬರೀಶ್‌ನನ್ನು ಸೋಮವಾರ ರಾತ್ರಿ ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಸೂರ್ಯ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಬಾಲಕರ ಹೇಳಿಕೆ ಇರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ  ಹರಿದಾಡಿತ್ತು. ಈ ವಿಡಿಯೊ ಗಮನಿಸಿದ್ದ ಶೃಂಗೇರಿ ಠಾಣೆಯ ಸಬ್‌ ಇನ್‌ಸ್ಪೆಕ್ಟರ್‌, ಬಾಲಕರೊಂದಿಗೆ ಸಮಾಲೋಚನೆ ನಡೆಸಿ ಅವರ ಹೇಳಿಕೆ ಪಡೆದು ದೂರು ನೀಡುವಂತೆ ಶಿಶು ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದ್ದರು. ಆರೋಪಿಗಳು ತಮ್ಮನ್ನು ಬೆದರಿಸಿ, ಮದ್ಯ ಕುಡಿಸಿ, ಒತ್ತಾಯಪೂರ್ವಕವಾಗಿ ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದಾರೆ ಎಂದು ಬಾಲಕರು ಸಮಾಲೋಚನೆಯಲ್ಲಿ ಹೇಳಿದ್ದಾರೆ ಎಂದು ಶಿಶು ಅಭಿವೃದ್ಧಿ ಅಧಿಕಾರಿ ವಿವರಿಸಿದ್ದಾರೆ.

ADVERTISEMENT

ಶೃಂಗೇರಿ ಮಹಿಳಾ ಸಾಂತ್ವನ ಕೇಂದ್ರ ಆಪ್ತ ಸಮಾಲೋಚಕರೊಂದಿಗೆ ಈ ಇಬ್ಬರು ಬಾಲಕರನ್ನು ಸಮಾಲೋಚನೆಗೆ ಒಳಪಡಿಸಿ ಹೇಳಿಕೆಗಳನ್ನು ಲಿಖಿತವಾಗಿ ಪಡೆದುಕೊಂಡರು. ಇಬ್ಬರು ಬಾಲಕರನ್ನು ಸೂರ್ಯ ಎಂಬ ವ್ಯಕ್ತಿ ಭಾನುವಾರ ಸಂಜೆ 7 ಗಂಟೆಗೆ ಒತ್ತಾಯ ಪೂರ್ವಕವಾಗಿ ತನ್ನ ಆಟೋರಿಕ್ಷಾದಲ್ಲಿ ಶೃಂಗೇರಿಯ ಸ್ವಾಗತ ಮಂಟಪದ ಬಳಿ ಇರುವ ಶಬರೀಶ ಎಂಬುವರ ಜೆರಾಕ್ಸ್ ಅಂಗಡಿಗೆ ಕರೆದುಕೊಂಡು ಹೋಗಿದ್ದಾರೆ. ಶಬರೀಶರವರ ಅಂಗಡಿಯಲ್ಲಿ ಈ ಇಬ್ಬರು ಬಾಲಕರಿಗೆ ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್ ಶೆಟ್ಟಿ ಎಂಬ ವ್ಯಕ್ತಿಯು ನಮಗೆ (ಬಾಲಕರಿಗೆ) ಸಿಗರೇಟ್ ಸೇದಿಸುತ್ತಾರೆ ಎಣ್ಣೆ ಕುಡಿಸುತ್ತಾರೆ ಗಾಂಜಾ ಸೇದುತ್ತೀಯಾ ಗಾಂಜಾ ತರಿಸಿ ಕೊಡುತ್ತೇನೆ ಎಂದು ಹೇಳುತ್ತಾರೆ ಮತ್ತು ಅಶ್ಲೀಲ ವೀಡಿಯೊ ತೋರಿಸಿ ಮೈ ಕೈಗೆ ಲೈಂಗಿಕವಾಗಿ ಸ್ಪರ್ಷಿಸುತ್ತಾರೆ ಎಂದು ಹರೀಶ್ ಶೆಟ್ಟಿಯವರ ವಿರುದ್ಧ ಹೇಳಿಕೆ ನೀಡಬೇಕು ಮತ್ತು ಹೀಗೆ ಹೇಳಿಕೆ ನೀಡಿದರೆ ಹಣ ನೀಡುತ್ತೇನೆ ಹಾಗೂ ಹೇಳದಿದ್ದರೆ ತೊಂದರೆ ಕೊಡುವುದಾಗಿ ಶಬರೀಶ ಅವರು ಹೆದರಿಸಿರುತ್ತಾರೆ. ಹೀಗೆ ಬಾಲಕರಿಂದ ಹೇಳಿಸಿ ಅದನ್ನು ಶಬರೀಶ್ ವೀಡಿಯೋ ಮಾಡಿಕೊಂಡಿದ್ದಾರೆ. ನಂತರ ಶಬರೀಶ್ ಕಡೆಯವರು ನಮ್ಮನ್ನು ಹೋಟೆಲ್‍ಗೆ ಕರೆದುಕೊಂಡು ಹೋಗಿ ಊಟವನ್ನು ಮಾಡಿಸಿ ನಿಮ್ಮ ಕೆಲಸ ಆಯಿತು ಎಂದು ಹೇಳಿ ಕಳುಹಿಸಿದ್ದಾರೆ. ಈ ಬಾಲಕರನ್ನು ಒತ್ತಾಯ ಪೂರ್ವಕವಾಗಿ ಆಟೋರಿಕ್ಷಾದಲ್ಲಿ ಕರೆದುಕೊಂಡು ಹೋದ ಸೂರ್ಯ ಎಂಬ ವ್ಯಕ್ತಿ ಹಾಗೂ ಬಾಲಕರಿಂದ ಒತ್ತಾಯ ಪೂರ್ವಕವಾಗಿ ಹೇಳಿಕೆಗಳನ್ನು ಹೇಳಿಸಿ ವೀಡಿಯೋ ಮಾಡಿಕೊಂಡ ಶಬರೀಶ ಎಂಬ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕೈಗೊಳ್ಳಬೇಕಾಗಿ ಎಂದು ಶಿಶು ಅಭಿವೃದ್ದಿ ಅಧಿಕಾರಿ ರಾಘವೇಂದ್ರ ಎನ್.ಜಿ ದೂರು ದಾಖಲಿಸಿದ್ದಾರೆ. ಕೂಡಲೇ ಶಬರೀಶರವರನ್ನು ಪೊಲೀಸರು ಸೋಮವಾರ ರಾತ್ರಿ ಬಂಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.