ADVERTISEMENT

ಶೋಭಾಯಾತ್ರೆ ಕೈಬಿಟ್ಟು ಮೌನ ಮೆರವಣಿಗೆ

ಮೆರವಣಿಗೆಯಲ್ಲಿ ಶಿಲಾ ವಿಗ್ರಹ ಒಯ್ಯಲು ಅನುಮತಿ ನೀಡದಿದ್ದಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 15:32 IST
Last Updated 13 ಅಕ್ಟೋಬರ್ 2019, 15:32 IST
ಶ್ರೀರಾಮಸೇನೆಯವರು ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಚಿಕ್ಕಮಗಳೂರಿನ ಎಂ.ಜಿ.ರಸ್ತೆಯಲ್ಲಿ ಮೌನಮೆರವಣಿಗೆಯಲ್ಲಿ ಸಾಗಿದರು.
ಶ್ರೀರಾಮಸೇನೆಯವರು ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಚಿಕ್ಕಮಗಳೂರಿನ ಎಂ.ಜಿ.ರಸ್ತೆಯಲ್ಲಿ ಮೌನಮೆರವಣಿಗೆಯಲ್ಲಿ ಸಾಗಿದರು.   

ಚಿಕ್ಕಮಗಳೂರು: ಗುರುದತ್ತಾತ್ರೇಯ ಶಿಲಾವಿಗ್ರಹವನ್ನು ಮೆರವಣಿಗೆಯಲ್ಲಿ ಒಯ್ಯಲು ಅವಕಾಶ ನೀಡದಿದ್ದಕ್ಕೆ ಶ್ರೀರಾಮಸೇನೆಯವರು ಭಾನುವಾರ ಶೋಭಾಯಾತ್ರೆ ಕೈಬಿಟ್ಟು ನಗರದಲ್ಲಿ ಮೌನಮೆರವಣಿಗೆ ನಡೆಸಿ ಪ್ರತಿಭಟನೆ ಮಾಡಿದರು. ನಂತರ ಬಾಬಾಬುಡನ್‌ಗಿರಿಗೆ ತೆರಳಿ ದತ್ತಪೀಠದಲ್ಲಿ ಪಾದುಕೆ ದರ್ಶನ ಮಾಡಿದರು.

ಉತ್ತರ ಕನ್ನಡ ಜಿಲ್ಲೆ ಶ್ರೀರಾಮಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಜಯಂತ್‌ ನಾಯಕ ಅವರು 130 ಕೆ.ಜಿ ತೂಕದ ದತ್ತಾತ್ರೇಯ ಶಿಲಾವಿಗ್ರಹ ನೀಡಿದ್ದು, ಅದನ್ನು ಶೋಭಾಯಾತ್ರೆಯಲ್ಲಿ ಒಯ್ಯಲು ಅನುಮತಿ ನೀಡುವಂತೆ ಜಿಲ್ಲಾಡಳಿತಕ್ಕೆ ಕೋರಲಾಗಿತ್ತು. ಹೊಸ ಆಚರಣೆಗೆ ಅವಕಾಶ ಇಲ್ಲ ಎಂಬ ಕಾರಣನೀಡಿ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ‌

ಬಸವನಹಳ್ಳಿ ಮುಖ್ಯರಸ್ತೆಯ ಶಂಕರಮಠದ ಬಳಿ ಭಾನುವಾರ ಬೆಳಿಗ್ಗೆ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಜಿಲ್ಲಾಡಳಿತದ ನಿರ್ಧಾರ ಖಂಡಿಸಿ ಭಜನೆ ಮಾಡಿ ಸುಮಾರು ಒಂದು ಗಂಟೆ ಪ್ರತಿಭಟನೆ ಮಾಡಿದರು. ದತ್ತಮಾಲಾ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಶೋಭಾಯತ್ರೆಯನ್ನು ಕೈಬಿಟ್ಟು, ಬಾಯಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ಎಂ.ಜಿ.ರಸ್ತೆ ಮಾರ್ಗವಾಗಿ ಆಜಾದ್‌ಪಾರ್ಕ್‌ ವೃತ್ತದವರಿಗೆ ಮೌನ ಮೆರವಣಿಗೆ ಮಾಡಿದರು.

ADVERTISEMENT

ಮಾಲಾಧಾರಿಗಳು, ದತ್ತಭಕ್ತರು ವಾಹನಗಳಲ್ಲಿ ಗಿರಿಗೆ ತೆರಳಿದರು. ಶ್ರೀಗುರುದತ್ತಾತ್ರೇಯ ಬಾಬಾಬುಡನ್‌ಸ್ವಾಮಿ ದರ್ಗಾದಲ್ಲಿ ದತ್ತಾತ್ರೇಯಸ್ವಾಮಿ ಪಾದುಕೆ ದರ್ಶನ ಮಾಡಿ ಭಕ್ತಿ ಸಮರ್ಪಿಸಿದರು.
ದತ್ತಪೀಠದ ಬಳಿಯ ಸಭಾಮಂಟಪದಲ್ಲಿ ಮಹಾಗಣಪತಿಹೋಮ, ದತ್ತಮೂಲಮಂತ್ರ, ಅನಸೂಯಾ ಹೋಮ, ಪೂರ್ಣಾಹುತಿ ಕೈಂಕರ್ಯ ನೇರವೇರಿದವು. ಅಭಿಯಾನದ ನಿಮಿತ್ತ ಗಿರಿಶ್ರೇಣಿ ತಾಣಗಳಿಗೆ ಪ್ರವಾಸಿ ವಾಹನಗಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. ಪೊಲೀಸ್‌ ಬಿಗಿ ಬಂದೋಬಸ್ತ್‌ ನಿಯೋಜಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.