ADVERTISEMENT

ಕೊಟ್ಟಿಗೆಹಾರ: ತೇಜಸ್ವಿ ಪ್ರತಿಷ್ಠಾನದಲ್ಲಿ ಆರು ದಿನ ಜ್ಞಾನದ ಹಬ್ಬ

ಅನಿಲ್ ಮೊಂತೆರೊ
Published 20 ನವೆಂಬರ್ 2023, 8:17 IST
Last Updated 20 ನವೆಂಬರ್ 2023, 8:17 IST
ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನದಲ್ಲಿ ವಸ್ತು ಪ್ರದರ್ಶನಕ್ಕೆ ತಯಾರಿ ನಡೆಯುತ್ತಿರುವುದು
ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನದಲ್ಲಿ ವಸ್ತು ಪ್ರದರ್ಶನಕ್ಕೆ ತಯಾರಿ ನಡೆಯುತ್ತಿರುವುದು   

ಕೊಟ್ಟಿಗೆಹಾರ: ಇಲ್ಲಿನ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ  ವಸ್ತು ಪ್ರದರ್ಶನ ಪ್ರಾರಂಭವಾಗಿದ್ದು, ನ.20ರಿಂದ 26ರವರೆಗೆ ಪ್ರದರ್ಶನ ನಡೆಯಲಿದೆ.


ಪಶ್ಚಿಮ ಘಟ್ಟಗಳಲ್ಲಿ ಕಾಣಸಿಗುವ ನೂರಕ್ಕೂ ಹೆಚ್ಚು ಕೀಟಗಳು, ಚಿಟ್ಟೆ, ಮಿಡತೆ, ದುಂಬಿ, ತಿಗಣೆ, ಕಳಸ, ಶೃಂಗೇರಿ ಭಾಗಗಳಲ್ಲಿ ಮಾತ್ರ ಕಂಡು ಬರುವ ಕೆಲ ಕೀಟಗಳು, ಅಪರೂಪದ ಪರಾಗಸ್ಪರ್ಶಿ, ಕೀಟಗಳು, ಬಣ್ಣಬಣ್ಣದ ಚಿಟ್ಟೆಗಳು, ದುಂಬಿಗಳು ವಸ್ತು ಪ್ರದರ್ಶನದಲ್ಲಿ ಗಮನ ಸೆಳೆಯಲಿವೆ.

2 ಸಾವಿರಕ್ಕೂ ಹೆಚ್ಚು ನಾಣ್ಯ ಸಂಗ್ರಹ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ. ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಪುಸ್ತಕಗಳು, ಭಾರತೀಯ ಆಂಗ್ಲಭಾಷಾ ಲೇಖಕರ ಪುಸ್ತಕಗಳು, ಒಂದು ಲಕ್ಷ ಶ್ಲೋಕಗಳಿರುವ ಮಹಾಭಾರತದ 100ಕ್ಕೂ ಹೆಚ್ಚು ಕನ್ನಡ ಮತ್ತು ಇಂಗ್ಲೀಷ್ ಪುಸ್ತಕಗಳು, ಭಾರತದ ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂಧಿಸಿದ 100ಕ್ಕೂ ಹೆಚ್ಚು ಪುಸ್ತಕಗಳು, ರಾಷ್ಟ್ರೀಯ ಅಂತರರಾಷ್ಟ್ರೀಯ  ಲೇಖಕರ ಸಾವಿರಾರು ಪುಸ್ತಕಗಳು ಇರಲಿವೆ.

ADVERTISEMENT

ಮಲೆನಾಡು ಭಾಗದಲ್ಲಿ ಹಿಂದೆ ಬಳಕೆಯಲ್ಲಿದ್ದ ಬೀಸುವ ಕಲ್ಲು, ಮರಿಗೆ, ಕೂರಿಗೆ, ಸೇರು ಪಾವು ಮುಂತಾದ ನೂರಾರು ವಸ್ತುಗಳು ಪ್ರದರ್ಶನದಲ್ಲಿದ್ದು, ಹಿಂದಿನ ಜನಜೀವನವನ್ನು ಕಟ್ಟಿಕೊಡುತ್ತವೆ. ಮೈಸೂರು ಶೈಲಿಯ, ತಂಜಾವೂರು ಶೈಲಿಯ ಕಲಾಕೃತಿಗಳು, ನೂರಾರು ಹಿತ್ತಾಳೆ, ತಾಮ್ರದ ವಸ್ತುಗಳು ಇರಲಿವೆ. ಶಕಗಳ ಹಿಂದಿನ ಅಂಚೆ ಚೀಟಿ ಹಾಗೂ ಲಕೋಟೆಗಳ ಸಂಗ್ರಹ ಗಮನ ಸೆಳೆಯಲಿವೆ.

ವಸ್ತು ಪ್ರದರ್ಶನ ವೀಕ್ಷಣೆಗೆ ಜಿಲ್ಲೆಯ ಶಾಲಾ ಕಾಲೇಜುಗಳಿಂದ ವಿದ್ಯಾರ್ಥಿಗಳನ್ನು ಕಳುಹಿಸುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿದೇರ್ಶಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಜ್ಞಾಪನಾ ಪತ್ರವನ್ನು ಕಳಿಸಿದ್ದಾರೆ. ಆರು ದಿನಗಳ ಕಾಲ ನಡೆಯುವ ಜ್ಞಾನದ ಹಬ್ಬಕ್ಕೆ ತೇಜಸ್ವಿ ಪ್ರತಿಷ್ಠಾನದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದ.

ಕೊಟ್ಟಿಗೆಹಾರದ ತೇಜಸ್ವಿ ಪ್ರತಿಷ್ಠಾನದಲ್ಲಿ ವಸ್ತು ಪ್ರದರ್ಶನಕ್ಕೆ ಸಜ್ಜುಗೊಂಡಿರುವುದು
ವಸ್ತು ಪ್ರದರ್ಶನಕ್ಕೆ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಲು ಶಾಲೆಗಳಿಗೆ ಸೂಛನೆ ನೀಡಲಾಗಿದೆ. ಒಂದು ವಾರ ಕಾಲ ನಡೆಯುವ ವಸ್ತು ಪ್ರದರ್ಶನದಲ್ಲಿ ಒಂದು ದಿನ ಮಾತ್ರ ಶಾಲಾ ಮಕ್ಕಳು ಭೇಟಿ ನೀಡಿ ವಸ್ತುಗಳನ್ನು ವೀಕ್ಷಿಸಬಹುದಾಗಿದೆ
ಹೇಮಂತ್ ರಾಜ್ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೂಡಿಗೆರೆ
‘ತೇಜಸ್ವಿ ಅವರ ಚಿಂತನೆ ಮತ್ತು ಆಸಕ್ತಿಗೆ ಪೂರಕವಾದ ಕಾರ್ಯಕ್ರಮಗಳನ್ನು ತೇಜಸ್ವಿ ಪ್ರತಿಷ್ಠಾನವೂ ಆಯೋಜಿಸುತ್ತಾ ಬಂದಿದೆ. ಈ ಪ್ರದರ್ಶನ ವಿದ್ಯಾರ್ಥಿಗಳ ಜ್ಞಾನಾಸಕ್ತರಿಗೆ ಉಪಯುಕ್ತವಾಗಿದೆ'
-ಡಾ.ಸಿ.ರಮೇಶ್ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.