ADVERTISEMENT

ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ವಿತರಣೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2024, 15:50 IST
Last Updated 9 ಜುಲೈ 2024, 15:50 IST
ಕಡೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಸಕ ಕೆ.ಎಸ್.ಆನಂದ್ ಮೊಬೈಲ್ ಫೋನ್‌ಗಳನ್ನು ವಿತರಿಸಿದರು
ಕಡೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಸಕ ಕೆ.ಎಸ್.ಆನಂದ್ ಮೊಬೈಲ್ ಫೋನ್‌ಗಳನ್ನು ವಿತರಿಸಿದರು   

ಕಡೂರು: ಮಕ್ಕಳಿಗೆ ಎರಡನೇ ತಾಯಿಯಾಗಿ ಪೂರ್ವ ಪ್ರಾಥಮಿಕ ಶಿಕ್ಷಣ ನೀಡುವ ಅಂಗನವಾಡಿ ಕಾರ್ಯಕರ್ತೆಯರ ಶ್ರಮಕ್ಕೆ ಬೆಲೆ ಕಟ್ಟಲಾಗದು ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಪೋಷಣ್ ಅಭಿಯಾನದಡಿ ಮಂಗಳವಾರ ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಫೋನ್ ಮತ್ತು ಗ್ರೋತ್ ಮಾನಿಟರಿಂಗ್ ಯಂತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ನೀಡಿದೆ. ಇತ್ತೀಚೆಗೆ ಗ್ರಾಚ್ಯುಟಿ ಸೌಲಭ್ಯವನ್ನು ನೀಡಿರುವುದು ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ ಎಂದರು.

ADVERTISEMENT

ಬಡವರಿಗೆ ಸೌಲಭ್ಯಗಳನ್ನು ನೀಡಿದ ಮಾತ್ರಕ್ಕೆ ಇತರೆ ಅಭಿವೃದ್ದಿಗೆ ಹಣವಿಲ್ಲದೆ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ವಿರೋಧ ಪಕ್ಷದವರು ಹುರುಳಿಲ್ಲದ ಆರೋಪ ಮಾಡುತ್ತಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ನೀಡುವುದಕ್ಕೂ ಆಕ್ಷೇಪಿಸುವ ಅವರು ತಮ್ಮ ಅವಧಿಯಲ್ಲಿ ಯಾವುದೇ ಗ್ಯಾರಂಟಿಗಳಿಲ್ಲದೆ ಉಳಿತಾಯವಾಗುತ್ತಿದ್ದ ಹಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ ಮತ್ತಿತರ ಸೌಲಭ್ಯ ನೀಡಲು ಯೋಗ್ಯತೆ ಇರಲಿಲ್ಲವೇ? ನಮ್ಮ ಸರ್ಕಾರ ಗ್ರಾಚ್ಯುಟಿ ನೀಡಿದ್ದು, ಅವರ ಇನ್ನುಳಿದ ಬೇಡಿಕೆಗಳ ಬಗ್ಗೆಯೂ ಗಮನ ಹರಿಸಲಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಮಾತನಾಡಿ, ಹೆಣ್ಣುಮಕ್ಕಳ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಸಬಲೀಕರಣಕ್ಕಾಗಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿದೆ. ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ಸ್ಮಾರ್ಟ್ ಫೋನ್‌ಗಳು ಮತ್ತು ಕಾರ್ಯಕ್ರಮಗಳ ಪ್ರಗತಿ ಗಮನಿಸಲು ಯಂತ್ರಗಳನ್ನು ವಿತರಿಸಲಾಗಿದೆ ಎಂದರು.

ನಿವೃತ್ತಿ ಹೊಂದಿದ ಇಲಾಖೆಯ ಪ್ರಥಮ ದರ್ಜೆ ಸಹಾಯಕಿ ಹೇಮಾವತಿ ಅವರನ್ನು ಗೌರವಿಸಿ, ಬೀಳ್ಕೊಡಲಾಯಿತು. ಉತ್ತಮವಾಗಿ ಕಾರ್ಯ ನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು. 462 ಅಂಗನವಾಡಿ ಕಾರ್ಯಕರ್ತೆಯರಿಗೆ ತಲಾ ₹12 ಸಾವಿರ ವೆಚ್ಚದ ಮೊಬೈಲ್ ಫೋನ್ ನೀಡಲಾಯಿತು.

ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಸಿಡಿಪಿಒ ಶಿವಪ್ರಕಾಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.