ADVERTISEMENT

ಚಿಕ್ಕಮಗಳೂರು: ಹಾವು ಕಚ್ಚಿ ಸ್ನೇಕ್‌ ನರೇಶ್‌ ಸಾವು

​ಪ್ರಜಾವಾಣಿ ವಾರ್ತೆ
Published 30 ಮೇ 2023, 14:23 IST
Last Updated 30 ಮೇ 2023, 14:23 IST
   

ಚಿಕ್ಕಮಗಳೂರು: ಸೆರೆ ಹಿಡಿದಿದ್ದ ಹಾವು ಕಚ್ಚಿ ಉರಗಪ್ರೇಮಿ ಸ್ನೇಕ್‌ ನರೇಶ್‌ಕುಮಾರ್‌(55) ಅವರು ಮಂಗಳವಾರ ಮೃತಪಟ್ಟಿದ್ದಾರೆ.

‘ಹೊಸಮನೆ ಬಡಾವಣೆಯ ಮನೆ ಆವರಣದಲ್ಲಿ ಬೈಕಿನ ಬಾಕ್ಸ್‌ನೊಳಗಿನ ಚೀಲದಲ್ಲಿದ್ದ ಹಾವು ಬಲಗೈ ಬೆರಳಿಗೆ ಕುಕ್ಕಿದೆ. ಮಧ್ಯಾಹ್ನ 2.40ರ ಹೊತ್ತಿಗೆ ಅವಘಡ ಸಂಭವಿಸಿದೆ. ಅವರನ್ನು ಆಸ್ಪತ್ರೆಗೆ ಕರೆ ತಂದರು, ಅಷ್ಟರೊಳಗೆ ಅವರು ಮೃತಪಟ್ಟಿದ್ದರು’ ಎಂದು ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿ.ಮೋಹನಕುಮಾರ್‌ ಪ್ರಜಾವಾಣಿಗೆ ತಿಳಿಸಿದರು.

ನರೇಶ್‌ ಅವರು ಮಂಗಳವಾರ ಬೆಳಿಗ್ಗೆ ಹಾವೊಂದನ್ನು ಸೆರೆ ಹಿಡಿದು ಚೀಲಕ್ಕೆ ಹಾಕಿ ಚೀಲವನ್ನು ಬೈಕಿನ ಬಾಕ್ಸ್‌ನಲ್ಲಿ ಇಟ್ಟಿದ್ದಾರೆ. ಮತ್ತೊಂದು ಕಡೆ ಹಾವು ಹಿಡಿಯಲು ಪೋನ್‌ ಕರೆ ಬಂದ ನಿಮಿತ್ತ ಅಲ್ಲಿಗೆ ತೆರಳಲು ಹೊರಟ ಅವರ ಬೈಕ್‌ ಬಾಕ್ಸ್‌ ತೆರೆದಾಗ ಚೀಲದೊಳಗಿನಿಂದಲೇ ಹಾವು ಕಚ್ಚಿದೆ ಎಂದು ಸ್ಥಳೀಯರೊಬ್ಬರು ತಿಳಿಸಿದರು.

ADVERTISEMENT

ಹಾವು ಸೆರೆ ಹಿಡಿದು ಕಾಡಿಗೆ ಬಿಡುವ ಪರಿಪಾಟ ರೂಢಿಸಿಕೊಂಡಿದ್ದ ಸ್ನೇಕ್‌ ನರೇಶ್‌ ಅವರು ನಗರ ಮತ್ತು ಸುತ್ತಮುತ್ತಲಿನ ಗ್ರಾಮದಲ್ಲಿ ಉರಗ ಪ್ರೇಮಿ ಎಂದೇ ಚಿರಪರಿಚಿತರಾಗಿದ್ದರು. ಹಾವು ಸೆರೆ ಹಿಡಿಯುವುದರಲ್ಲಿ ನಿಷ್ಣಾತರಾಗಿದ್ದರು. ಸುಮಾರು 25 ವರ್ಷಗಳಿಂದ ಈ ಹವ್ಯಾಸ ರೂಢಿಸಿಕೊಂಡಿದ್ದರು. ಈವರೆಗೆ ಸಹಸ್ರಾರು ಹಾವುಗಳನ್ನು ಹಿಡಿದು ಜನರಿಂದ ಸೈ ಎನಿಸಿಕೊಂಡಿದ್ದರು. ಸೆರೆ ಹಿಡಿದ ಹಾವುಗಳನ್ನು ಅರಣ್ಯಕ್ಕೆ ಬಿಡುತ್ತಿದ್ದರು. ಉರಗಗಳ ವೈಶಿಷ್ಟ್ಯಗಳ ಕುರಿತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡುತ್ತಿದ್ದರು.

ನರೇಶ್‌ ಅವರು 2013ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಿದ್ದರು. ಸೋತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.