ನರಸಿಂಹರಾಜಪುರ: ಮಲೆನಾಡಿನ ಭಾಗದಲ್ಲಿ ಮಳೆಗಾಲದಲ್ಲಿ ನಡೆಯುವ ಶಾಲಾ ಮತ್ತು ಕಾಲೇಜುಗಳ ಕ್ರೀಡಾಕೂಟಗಳು ವಿದ್ಯಾರ್ಥಿಗಳ ಕ್ರೀಡಾ ಸಾಮರ್ಥ್ಯ ಪ್ರದರ್ಶನಕ್ಕೆ ಅಡ್ಡಿಯಾಗುತ್ತಿವೆ ಎಂಬುದು ಪೋಷಕರು ಹಾಗೂ ಕ್ರೀಡಾಪಟುಗಳ ಅಳಲು.
ಬಹುತೇಕ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳುಗಳಲ್ಲಿ ನಡೆಯುವುದರಿಂದ ಅಥ್ಲೆಟಿಕ್ಸ್ ಸೇರಿದಂತೆ ಯಾವುದೇ ಕ್ರೀಡೆಯಲ್ಲೂ ಪೂರ್ಣ ಪ್ರಮಾಣದ ಪ್ರದರ್ಶನ ಸಾಧ್ಯವಾಗುತ್ತಿಲ್ಲ. ಜಿಲ್ಲಾ ಕೇಂದ್ರ ಹೊರತುಪಡಿಸಿ ಬಹುತೇಕ ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲಿರುವ ಕ್ರೀಡಾಂಗಣಗಳು ಸುಸಜ್ಜಿತವಾಗಿಲ್ಲ. ಮಳೆಗಾಲದಲ್ಲಿ ಕ್ರೀಡಾಂಗಣಗಳು ಕೆಸರು ಗದ್ದೆಯಾಗಿರುತ್ತವೆ. ಕ್ರೀಡಾಪಟುಗಳು ಓಡುವಾಗ ಜಾರಿ ಬೀಳುವ, ವಾಲಿಬಾಲ್, ಥ್ರೋಬಾಲ್ ಆಟದ ನಡುವೆ ಚೆಂಡು ಕೈಯಿಂದ ಜಾರಿಹೋಗುವ ಸಾಧ್ಯತೆಗಳೇ ಹೆಚ್ಚು. ಮಲೆನಾಡಿನಲ್ಲಿ ಅಕ್ಟೋಬರ್, ನವೆಂಬರ್ ತಿಂಗಳುಗಳಲ್ಲಿ ಕ್ರೀಡಾಕೂಟ ಆಯೋಜಿಸಿದರೆ ಅನುಕೂಲ ಎಂಬುದು ಕ್ರೀಡಾಸಕ್ತರ ಅಭಿಪ್ರಾಯವಾಗಿದೆ.
ಹೆಚ್ಚು ಮಳೆಯಾಗುವ ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಇದು ಸಮಸ್ಯೆ. ಉಳಿದ ಜಿಲ್ಲೆಗಳಲ್ಲಿ ಮಳೆಗಾಲದಲ್ಲೇ ಕ್ರೀಡಾಕೂಟಗಳು ತೊಂದರೆ ಇಲ್ಲದೆ ನಡೆಯುತ್ತವೆ. ಮಲೆನಾಡಿನಲ್ಲಿ ಮಳೆಗಾಲದಲ್ಲಿ ಕ್ರೀಡಾಕೂಟ ನಡೆಸುವುದರಿಂದ ಆಗುವ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.
ವಲಯ ಮಟ್ಟದ ಕ್ರೀಡಾಕೂಟಕ್ಕೆ ₹7,500, ತಾಲ್ಲೂಕು ಮಟ್ಟಕ್ಕೆ ₹25 ಸಾವಿರ, ಪದವಿಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟಕ್ಕೆ ₹10 ಸಾವಿರ ಅನುದಾನ ದೊರೆಯುತ್ತದೆ. ಸ್ಪರ್ಧೆ ವಿಜೇತರಿಗೆ ಬಹುಮಾನ, ಮಕ್ಕಳ ಊಟ, ಉಪಾಹಾರಕ್ಕೆ ಈ ಮೊತ್ತ ಸಾಲುವುದಿಲ್ಲ. ಸರ್ಕಾರ ನೀಡುವ ಅನುದಾನ ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಕಾಲಕಾಲಕ್ಕೆ ಅನುದಾನದ ಮೊತ್ತ ಪರಿಷ್ಕರಣೆ ಆಗಬೇಕು. ಇಲ್ಲವಾದಲ್ಲಿ ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷಕರಿಗೆ ಕ್ರೀಡೆ ಆಯೋಜಿಸುವುದೇ ಕಷ್ಟವಾಗುತ್ತದೆ ಎಂದು ಆಯೋಜಕರೊಬ್ಬರು ತಿಳಿಸಿದರು.
ಮಲೆನಾಡಿನ ಭಾಗದಲ್ಲಿ ಮಳೆಗಾಲದಲ್ಲಿ ಕ್ರೀಡೆ ನಡೆಸುವುದರಿಂದ ಮಕ್ಕಳಿಗೆ ಸಮರ್ಪಕವಾಗಿ ಆಟವಾಡಲು ಸಾಧ್ಯವಾಗುವುದಿಲ್ಲ. ಸರ್ಕಾರ ಈ ಬಗ್ಗೆ ಯೋಚಿಸಿ, ವೇಳಾಪಟ್ಟಿ ಬದಲಿಸಬೇಕು ಎಂದು ನಾಗಲಾಪುರ ಗ್ರಾಮದ ದೇವೇಂದ್ರ ಒತ್ತಾಯಿಸಿದರು.
ಕೆಸರುಗದ್ದೆಯಂತಾಗುವ ಕ್ರೀಡಾಂಗಣಗಳು ವೇಳಾಪಟ್ಟಿ ಪರಿಷ್ಕರಣೆಗೆ ಒತ್ತಾಯ ಕ್ರೀಡಾಕೂಟದ ಅನುದಾನ ಹೆಚ್ಚಳಕ್ಕೆ ಆಗ್ರಹ
ಮಲೆನಾಡಿಯಲ್ಲಿ ಮಳೆಗಾಲದಲ್ಲಿ ಕ್ರೀಡಾಕೂಟದಿಂದ ಆಗುವ ಸಮಸ್ಯೆ ಮತ್ತು ಅನುದಾನ ಹೆಚ್ಚಳದ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು.ಟಿ.ಡಿ.ರಾಜೇಗೌಡ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.