ADVERTISEMENT

ಆದಿಶಂಕರಚಾರ್ಯರ ಭವ್ಯ ಶಿಲಾಮೂರ್ತಿಯನ್ನು ಲೋಕಾರ್ಪಣೆಗೆ ಭರದ ಸಿದ್ಧತೆ

ಮಾರುತಿ ಬೆಟ್ಟದಲ್ಲಿ ತಲೆಎತ್ತಲಿದೆ ಶಂಕರಚಾರ್ಯರ ಶಿಲಾಮೂರ್ತಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2019, 6:53 IST
Last Updated 27 ಅಕ್ಟೋಬರ್ 2019, 6:53 IST
ಮೂರ್ತಿ ಸ್ಥಾಪನಾ ಕಾರ್ಯವನ್ನು ಉಭಯ ಗುರುಗಳು ವೀಕ್ಷಿಸಿದರು.
ಮೂರ್ತಿ ಸ್ಥಾಪನಾ ಕಾರ್ಯವನ್ನು ಉಭಯ ಗುರುಗಳು ವೀಕ್ಷಿಸಿದರು.   

ಶೃಂಗೇರಿ: ಪಟ್ಟಣದ ಹೊರವಲಯದ ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿಯ ಮಾರುತಿ ಬೆಟ್ಟದಲ್ಲಿ ಆದಿಶಂಕರಚಾರ್ಯರ ಭವ್ಯ ಶಿಲಾಮೂರ್ತಿಯ ಪ್ರತಿಷ್ಠಾಪನಾ ಕಾರ್ಯ ಭರದಿಂದ ಸಾಗಿದ್ದು, 2020ರಲ್ಲಿ ಉದ್ಘಾಟನೆಗೆ ಸಿದ್ಧತೆ ನಡೆಯುತ್ತಿದೆ.

ಅದ್ವೈತಾ ಸಿದ್ಧಾಂತವನ್ನು ಎತ್ತಿ ಹಿಡಿದು, ಹಿಂದೂ ಧರ್ಮದ ಉಳಿವಿಗೆ ದೇಶದಾದ್ಯಾಂತ ಸಂಚರಿಸಿ ಧರ್ಮ ಪ್ರಚಾರ ನಡೆಸಿದ್ದ ಶಂಕರಚಾರ್ಯರ 36 ಅಡಿಯ ಶಿಲಾಮಯ ಮೂರ್ತಿಯ ಸ್ಥಾಪನಾ ಕಾರ್ಯ ಭರದಿಂದ ಸಾಗಿದೆ. ಪಟ್ಟಣದ ಎತ್ತರದ ಪ್ರದೇಶದಲ್ಲಿರುವ ಮಾರುತಿ ಬೆಟ್ಟದಲ್ಲಿ ಮೂರ್ತಿ ಸ್ಥಾಪಿಸಲು 7,485 ಮೀಟರ್ ಪ್ರದೇಶವನ್ನು ಬಳಸಲಾಗುತ್ತಿದೆ. ಕೃಷಿ ಇಲಾಖೆ ಪಕ್ಕದಲ್ಲಿನ ಸುಂದರ ಪರಿಸರದ ಗುಡ್ಡದಲ್ಲಿ ಈ ಹಿಂದೆ ಆಂಜನೇಯನ ಮೂರ್ತಿಯನ್ನು ಸ್ಥಾಪಿಸಲಾಗಿತ್ತು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರು ಇಲ್ಲಿನ ಬೆಟ್ಟಕ್ಕೆ ಮಣ್ಣಿನ ಮೆಟ್ಟಿಲುಗಳನ್ನು ನಿರ್ಮಿಸಿದ್ದರು. ಬೆಟ್ಟಕ್ಕೆ ಮಾರುತಿ ಬೆಟ್ಟವೆಂದು ನಾಮಕರಣ ಮಾಡಲಾಗಿತ್ತು. ಪ್ರತೀ ವರ್ಷ ಕಾರ್ತೀಕ ಮಾಸದಲ್ಲಿ ದೀಪೋತ್ಸವ ನಡೆಸಿಕೊಂಡು ಬರಲಾಗುತ್ತಿತ್ತು. ಒಮ್ಮೆ ಶಾರದಾ ಪೀಠದ ಗುರುಗಳಾದ ಭಾರತೀತೀರ್ಥ ಸ್ವಾಮೀಜಿಗಳು ಇಲ್ಲಿಗೆ ಬಂದು ಬೆಟ್ಟದ ನಯನ ಮನೋಹರ ವಾತಾವರಣ ಕಂಡು ಆದಿಶಂಕರಾಚಾರ್ಯರ ಭವ್ಯ ಮೂರ್ತಿಯನ್ನು ಬೆಟ್ಟದಲ್ಲಿ ಸ್ಥಾಪಿಸುವಂತೆ ಅಪ್ಪಣೆ ನೀಡಿದ್ದರು. ಅವರ ಆಶಯದಂತೆ ಮಠದ ಆಡಳಿತಾ ಧಿಕಾರಿ ಡಾ.ವಿ.ಆರ್. ಗೌರೀಶಂಕರ್ ಅವರು ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಬೆಟ್ಟದ ಮೇಲೆ ನಿರ್ಮಿಸಲು ಮುಂದಾಗಿದ್ದಾರೆ.

ADVERTISEMENT

ಗುರುಗಳ ಆಶಯದಂತೆ 1993ರಲ್ಲಿ ಈ ಸ್ಥಳವನ್ನು ಗುರುತಿಸಿ ಏಕಶಿಲೆಯ ಮೂರ್ತಿಯನ್ನು ಸ್ಥಾಪನೆ ಉದ್ದೇಶ ಹೊಂದಲಾಗಿತ್ತು. ಇದಕ್ಕಾಗಿ ತಾಲ್ಲೂಕಿನ ಅಡ್ಡಗದ್ದೆ ಸಮೀಪದಲ್ಲಿ ಬೃಹತ್ ಶಿಲೆಯನ್ನು ಗುರುತಿಸಲಾಗಿತ್ತು. ಆದರೆ, ಮೂರ್ತಿ ನಿರ್ಮಾಣದ ನಂತರ ಸಾಗಾಟದ ಅಡಚಣೆಯನ್ನು ಗಮನಿಸಿ ಆ ಯೋಜನೆಯನ್ನು ಕೈ ಬಿಡಲಾಗಿತ್ತು. ತಾಂತ್ರಿಕ ಕಾರಣಗಳಿಂದ ಮೂರ್ತಿಯ ಸ್ಥಾಪನಾ ಕಾರ್ಯಕ್ಕೆ ಹಿನ್ನಡೆಯಾಗಿತ್ತು. ಅಂದಿನ ಪರಿಕಲ್ಪನೆ ಇರಿಸಿಕೊಂಡು ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ನಿರ್ಮಾಣ ಕಾರ್ಯ ಇದೀಗ ಪೂರ್ಣಗೊಳ್ಳುವ ಸ್ಥಿತಿ ತಲುಪಿದೆ.

2013ರ ಜೂನ್‌ನಲ್ಲಿ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಅವರು ಶಂಕರಾಚಾರ್ಯರ ಪ್ರತಿಮೆಯ ಸ್ಥಾಪನಾ ಕಾರ್ಯ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಪ್ರಸ್ತುತ ಬೆಟ್ಟದ ನೆಲವನ್ನು ಸಮತಟ್ಟು ಮಾಡಿ, ಅಷ್ಟ ಪಟ್ಟಿ ಆಕಾರದ ತಳಪಾಯವನ್ನು ಹಾಕಿ ಮೂರ್ತಿ ಕುಳ್ಳಿರಿಸುವ ಪೀಠಕ್ಕೆ ಕಾಂಕ್ರೀಟ್ ಕಂಬಗಳನ್ನು ಈಗಾಗಲೇ ನಿಲ್ಲಿಸಿ ಬಹುತೇಕ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಜೊತೆ ಜೊತೆಗೆ ಆಂಜನೇಯನ ಶಿಲಾಮೂರ್ತಿ, ಸುಂದರ ಉದ್ಯಾನ, ವಸ್ತು ಸಂಗ್ರಹಾಲಯ, ಭವ್ಯವಾದ ಸಭಾಭವನ, ನಯನ ಮನೋಹರ ಕಾರಂಜಿ, ಸರಾಗವಾಗಿ ಬೆಟ್ಟವನ್ನು ಏರಿಳಿಯಲು ಸ್ವಯಂಚಾಲಿತ ಮೆಟ್ಟಿಲು ಮುಂತಾದ ಕಾಮಗಾರಿಗಳು ನಿರ್ಮಾಣಗೊಳ್ಳುತ್ತಿದೆ. ಈಗಾಗಲೇ ಮೂರ್ತಿಯ ನಿರ್ಮಾಣದ ಶಿಲೆಯನ್ನು ಬೆಂಗಳೂರಿನಿಂದ ತಂದು ಸಿದ್ಧ ಪಡಿಸಲಾಗುತ್ತಿದೆ. ಈ ಹಿಂದೆ ₹ 5 ಕೋಟಿ ವೆಚ್ಚದಲ್ಲಿ ಉದ್ದೇಶಿತ ಕಾರ್ಯವನ್ನು ಪೂರ್ಣಗೊಳಿಸಲು ಅಂದಾಜಿಸಲಾಗಿತ್ತು. ಇದೀಗ ಇದರ ನಾಲ್ಕು ಪಟ್ಟು ಹೆಚ್ಚು ವೆಚ್ಚವಾಗುತ್ತದೆ. ಇದರ ಮುಖ್ಯ ದಾನಿ ಬೆಂಗಳೂರಿನ ಅನಸೂಯ ಎಂಬುವವರು ಎಂದು ಮೂಲಗಳಿಂದ ತಿಳಿದು ಬಂದಿದೆ. 2020ರಲ್ಲಿ ಭಾರತೀತೀರ್ಥ ಸ್ವಾಮೀಜಿಗಳ ವರ್ಧಂತಿ ಉತ್ಸವದ ಸಂದರ್ಭದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ನವರಾತ್ರಿ ಸಂದರ್ಭದಲ್ಲಿ ಉಭಯ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರಭಾರತೀ ಸ್ವಾಮೀಜಿ ಇಲ್ಲಿಗೆ ಭೇಟಿ ನೀಡಿದ್ದರು. ಉಭಯ ಗುರುಗಳ ಉಪಸ್ಥಿತಿಯಲ್ಲಿ 36 ಅಡಿಯ ಶಂಕರರ ವಿಗ್ರಹದ ಮುಖಶಿಲೆಯ ಸ್ಥಾಪನೆಯನ್ನು ಮಾಡಲಾಯಿತು. ಇನ್ನುಳಿದ ಶಿಲಾಜೋಡಣೆ ಕೆಲಸ ಪ್ರಗತಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.