ಶೃಂಗೇರಿ: 'ಮಲೆನಾಡಿನಲ್ಲಿ ಶಿಕ್ಷಣ ಸಂಸ್ಥೆ ನಡೆಸುವುದು ಸುಲಭದ ಮಾತಲ್ಲ. ಇಂತಹ ಸನ್ನಿವೇಶದಲ್ಲಿ ಗುಡ್ಡದ ಹೈಸ್ಕೂಲ್ ಎಂದು ಕರೆಯಲ್ಪಡುವ ಪಟ್ಟಣದ ಸರ್ಕಾರಿ ಪ್ರೌಢ ಶಾಲೆ ಅಮೃತ ಮಹೋತ್ಸವ ಆಚರಿಸುವುದು ಶೃಂಗೇರಿ ಕ್ಷೇತ್ರಕ್ಕೆ ಮಾದರಿ' ಎಂದು ಶಾರದಾ ಮಠದ ಆಡಳಿತಾಧಿಕಾರಿ ವಿ.ಆರ್ ಗೌರೀಶಂಕರ್ ತಿಳಿಸಿದರು.
ಗುಡ್ಡದ ಹೈಸ್ಕೂಲ್ ಸಭಾಂಗಣದಲ್ಲಿ ಹಳೇ ವಿದ್ಯಾರ್ಥಿ ಸಂಘ ಆಯೋಜಿಸಿದ ಅಮೃತ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
`ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ ನೀಡಿದರೆ ಅವರು ಸಮಾಜಕ್ಕೆ ಉನ್ನತ ಕೊಡುಗೆ ನೀಡಲು ಸಾಧ್ಯ' ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ,`ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡ ಬೇಕು. ತಂತ್ರಜ್ಞಾನದ ಅರಿವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಅವಶ್ಯಕತೆ ಇದೆ. ಕನ್ನಡ ನಮ್ಮ ಮಾತೃಭಾಷೆ. ಅದರ ಜೊತೆ ಅಂಗ್ಲಬಾಷೆ ಕಲಿಯುವುದು ಅನಿವಾರ್ಯವಾಗಿದೆ. ಮಲೆನಾಡಿನ ಸರ್ಕಾರಿ ಶಾಲೆಗಳು ಉತ್ತಮ ಶಿಕ್ಷಣ ನೀಡುತ್ತಿವೆ' ಎಂದರು.
ಹಳೆನಾಣ್ಯಗಳ ಸಂಗ್ರಹ, ಮಲೆ ನಾಡಿನ ಪಾರಂಪರಿಕ ವಸ್ತುಗಳ ವಸ್ತು ಪ್ರದರ್ಶನ ಅನಾವರಣಗೊಳಿಸಿದ ರಾಘವೇಂದ್ರ ಮತ್ತು ದಿನೇಶ್ ಶರಾವತಿ ದಂಪತಿಯನ್ನು ವೇದಿಕೆಯ ಗಣ್ಯರು ಗೌರವಿಸಿದರು. ಅಮೃತಧಾರಾ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಲಾಯಿತು. ಹಳೆಯ ವಿದ್ಯಾರ್ಥಿಗಳು ಶಾಲೆಗೆ
₹ 65 ಸಾವಿರ ಮೌಲ್ಯದ ಮೈಕ್ ಸೆಟ್ ಕೊಡುಗೆಯಾಗಿ ನೀಡಿದರು. ವಿ.ಆರ್ ಗೌರೀಶಂಕರ್ ಸಭಾಂಗಣದಿಂದ ಶಾಲೆ ತನಕ ಮೆರವಣಿಗೆಯಲ್ಲಿ ಡೊಳ್ಳುಕುಣಿತ, ವೀರಾಗಾಸೆ, ನಾಸಿಕ್ ಬ್ಯಾಂಡ್ ಮೇಳವಿತ್ತು.
ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿ.ಶಿವಶಂಕರ್, ಉಪಾಧ್ಯಕ್ಷ ಹೆಚ್.ಎ ಶ್ರೀನಿವಾಸ್, ಕೆ.ಎಂ ಗೋಪಾಲ್, ಸೋಮಿ, ಬೇಗಾನೆ ಧರ್ಮಪ್ಪಗೌಡ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಸುಧಾಕರ್, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಅರುಣ್ ಕುಮಾರ್, ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನೀತಾ
ವಾಸು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.