ADVERTISEMENT

ಶೃಂಗೇರಿ ಮಾತೆಗೆ ವೀಣಾಶಾರದಾ ಅಲಂಕಾರ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2024, 5:54 IST
Last Updated 10 ಅಕ್ಟೋಬರ್ 2024, 5:54 IST
   

ಶೃಂಗೇರಿ: ಶರನ್ನವರಾತ್ರಿಯ 8ನೇ ದಿನವಾದ ಬುಧವಾರ ಇಲ್ಲಿನ ಶಾರದಾ ಮಠದಲ್ಲಿ ಶಾರದಾ ದೇವಿಗೆ ಜ್ಞಾನಮುದ್ರೆ, ಅಮೃತಕಳಶ ಮತ್ತು ಪುಸ್ತಕಗಳನ್ನು ಕೈಗಳಲ್ಲಿ ಧರಿಸಿ, ವೀಣೆಯನ್ನು ಹಿಡಿದುಕೊಂಡಿರುವ ವೀಣಾಶಾರದಾಲಂಕಾರ ಮಾಡಲಾಗಿತ್ತು.

ಗುರುಗಳಾದ ಭಾರತೀತೀರ್ಥ ಸ್ವಾಮೀಜಿ, ವಿಧುಶೇಖರಭಾರತೀ ಸ್ವಾಮೀಜಿಯವರು ಶಾರದೆಗೆ ವಿಶೇಷ ಪೂಜೆ ಸಲ್ಲಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಂಗಳೂರಿನ ಆರ್.ಕೆ. ಶಂಕರನ್ ಮತ್ತು ವೃಂದದಿಂದ ವೀಣಾವಾದನ ನಡೆಸಿದರು.

ಸಂಜೆ ನಡೆದ ಬೀದಿ ಉತ್ಸವದಲ್ಲಿ ನೆಮ್ಮಾರ್ ಗ್ರಾಮ ಪಂಚಾಯಿತಿಯ ಭಕ್ತರ ಜೊತೆಗೆ ಶ್ರೀರಾಮ ಸೇವಾ ಸಮಿತಿ ನೆಮ್ಮಾರು, ಶ್ರೀವಿದ್ಯಾವಿನಾಯಕ ಗೆಳೆಯರ ಬಳಗ ಬುಕ್ಕಡಿಬೈಲು, ವನದುರ್ಗಾ ಸೇವಾ ಸಮಿತಿ ಹರೂರು, ಶ್ರೀವಿನಾಯಕ ಸೇವಾ ಸಮಿತಿ ಅಳಲೆಗುಡ್ಡ, ಮಲ್ಲಿಕಾರ್ಜುನ ಸೇವಾ ಸಮಿತಿ ಮಲ್ನಾಡು, ಹರೂರು ಗ್ರಾಮ ಹಾಗೂ ನೆಮ್ಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ದೇವಸ್ಥಾನ ಸಮಿತಿಗಳು, ವಿಶ್ವ ಹಿಂದೂ ಪರಿಷತ್‌, ಬಜರಂಗದಳ, ಎ.ಬಿ.ವಿ.ಪಿ, ಶ್ರೀರಾಮ ಸೇನೆ, ವಿಶ್ವಕರ್ಮ ಸೇವಾ ಸಮಾಜ ಮತ್ತು ವಿಶ್ವಕರ್ಮ ಮಹಿಳಾ ಮಂಡಳಿ ಶೃಂಗೇರಿ, ಶ್ರೀಪ್ರಬೋಧಿನಿ ಭಜನಾ ಮಂಡಳಿ ಶೃಂಗೇರಿ, ನೆಮ್ಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲಾ– ಕಾಲೇಜುಗಳು ಮತ್ತು ಸಂಘ– ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ADVERTISEMENT

ನಂತರ ನಡೆದ ದರ್ಬಾರ್‌ನಲ್ಲಿ ವಿಧುಶೇಖರಭಾರತೀ ಸ್ವಾಮೀಜಿಯವರು ಗುಂಟೂರಿನ ಪೋಲಿಶೆಟ್ಟಿ ಶ್ಯಾಮ್ ಸುಂದರ್‌ಗೆ ‘ಗುರು ಭಕ್ತ ಚೂಡಮಣಿ’ ಬಿರುದು ನೀಡಿ ಗೌರವಿಸಿದರು.

ವಿಧುಶೇಖರಭಾರತೀ ಸ್ವಾಮೀಜಿ ದರ್ಬಾರ್‌ ನಡೆಸಿದರು. ಬಳಿಕ ವ್ಯಾಖ್ಯಾನ ಸಿಂಹಾಸನದಲ್ಲಿರುವ ಶಾರದಾಂಬೆಯ ಉತ್ಸವ ಮೂರ್ತಿಯನ್ನು ಬಂಗಾರದ ರಥದಲ್ಲಿ ಇಡಲಾಯಿತು.

ವೇದ, ವಾದ್ಯ ಪೋಷಗಳೊಂದಿಗೆ, ಛತ್ರ ಚಾಮರಗಳೊಂದಿಗೆ ದೇವಾಲಯದ ಒಳ ಪ್ರಾಂಗಳದಲ್ಲಿ ಮೂರು ಸುತ್ತು ರಥೋತ್ಸವ ನಡೆಯಿತು. ಪ್ರಸಾದ ವಿನಿಯೋಗದ ಬಳಿಕ ಉತ್ತರನೀರಾಜನದೊಂದಿಗೆ ದರ್ಬಾರು ಮುಕ್ತಾಯಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.