ಶೃಂಗೇರಿ: ಶಾರದಾ ಮಠದಲ್ಲಿ ಶರನ್ನವರಾತ್ರಿ ಪ್ರಯುಕ್ತ ಗುರುವಾರ ಪೀಠದ ಗುರುಗಳಾದ ಭಾರತಿ ತೀರ್ಥ ಸ್ವಾಮೀಜಿ ಶಾರದೆ ಪ್ರತಿಷ್ಠೆ ನೇರವೆರಿಸಿದರು.
ಶಾರದಾ ದೇವಿಯು ಕೈಯಲ್ಲಿ ಕಮಂಡಲು, ಅಕ್ಷರಮಾಲೆ, ಪುಸ್ತಕ, ಪಾಶ ಮತ್ತು ಚಿನ್ನದ ಮುದ್ರೆಗಳನ್ನು ಧರಿಸಿ ಹಂಸವಾಹನಾರೂಢಳಾಗಿ ಕಂಗೊಳಿಸಿದಳು. ಶಾರದಾ ಮಠದಲ್ಲಿ ಶ್ರೀಸೂಕ್ತಜಪ, ಭುವನೇಶ್ವರಿ ಜಪ, ದುರ್ಗಾ ಜಪಗಳ ಬಳಿಕ ಶ್ರೀಚಕ್ರಕ್ಕೆ ನವಾಹರಣ ಪೂಜೆ, ಮಧ್ಯಾಹ್ನ 12 ಗಂಟೆಗೆ ಕುಮಾರಿ ಪೂಜೆ, ಸುವಾಸಿನಿ ಪೂಜೆ, ಭಕ್ತರಿಂದ ವಿಶೇಷ ಪೂಜೆ ನಡೆದವು.
ಸಂಜೆ 6ಗಂಟೆಗೆ ನಡೆದ ಬೀದಿ ಉತ್ಸವದಲ್ಲಿ ಶೃಂಗೇರಿ ತಾಲ್ಲೂಕಿನ ಅಡ್ಡಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಕ್ತರು ಉತ್ಸಾಹದಿಂದ ಭಾಗವಹಿಸಿದರು. ಎನ್.ಆರ್ ಪುರ, ಕೊಪ್ಪ ಮತ್ತು ಶೃಂಗೇರಿ ತಾಲ್ಲೂಕು ಬ್ರಾಹ್ಮಣ ಮಹಾಸಭಾ, ಯುವವಿಪ್ರ ವೇದಿಕೆ, ಕಾವಡಿ ಅಗ್ರಹಾರದ ಉಮಾಮಹೇಶ್ವರ ಸೇವಾ ಸಮಿತಿ, ಹೆಗ್ಗದ್ದೆ ಅನಂತ ಪದ್ಮನಾಭ ಸೇವಾ ಸಮಿತಿ, ನೇತ್ರವಳ್ಳಿ ದುರ್ಗಾಪರಮೇಶ್ವರಿ ಭಕ್ತ ಮಂಡಳಿ, ಉಳುವೆಬೈಲು ಜೈಶಂಕರ್ ಯುವಕ ಸಂಘ, ಅಡ್ಡಗದ್ದೆ ವಿನಾಯಕ ಯುವಕ ಸಂಘ, ಕೆಳಕೊಪ್ಪ ವಿನಾಯಕ ಸೇವಾ ಸಮಿತಿ, ಕೊಪ್ಪ ಶ್ರೀನಿಕೇತನ ಭಜನಾ ಮಂಡಳಿ, ಹಿಂದೂ ಜಾಗರಣ ವೇದಿಕೆ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘಗಳ ಒಕ್ಕೂಟ, ಪ್ರಕೃತಿ ರೈತ ಮಿತ್ರಕೂಟ, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಬೀದಿ ಉತ್ಸವದಲ್ಲಿ ಉತ್ಸಾಹದಿಂದ ಭಾಗವಹಿಸಿದರು.
ಮಠದ ಚಂದ್ರಶೇಖರ ಭಾರತಿ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ಶೃಂಗೇರಿ ಸಹೋದರಿಯರು ಮತ್ತು ವೃಂದದಿಂದ ಹಾಡುಗಾರಿಕೆ ನಡೆಯಿತು. ಶಾರದಾ ಮಠದ ಕಿರಿಯ ಸ್ವಾಮೀಜಿ ವಿಧುಶೇಖರಭಾರತಿ ಶ್ರೀಗಳು ಶಾರದಾ ಮಠದ ಸಂಪ್ರದಾಯಕ್ಕೆ ಅನುಸಾರವಾಗಿ ಕಿರೀಟ, ಆಭರಣಗಳನ್ನು ಧರಿಸಿ ಚಂದ್ರಮೌಳೇಶ್ವರ ತೊಟ್ಟಿಯಿಂದ ಶಾರದಾಮ್ಮನವರ ದೇವಾಲಯಕ್ಕೆ ಉತ್ಸವಕ್ಕೆ ಬಂದರು. ಸಿಂಹಾಸನದಲ್ಲಿರುವ ಶಾರದೆಯ ಉತ್ಸವ ಮೂರ್ತಿಯನ್ನು ಬಂಗಾರದ ರಥದಲ್ಲಿ ಇಡಲಾಯಿತು. ವೇದ, ವಾದ್ಯ ಫೋಷಗಳೊಂದಿಗೆ, ಛತ್ರಿ-ಛಾಮರಗಳೊಂದಿಗೆ ಶಾರದಾ ದೇವಸ್ಥಾನದ ಒಳಪ್ರಾಂಗಣದಲ್ಲಿ ದೇವಾಲಯಕ್ಕೆ ಮೂರು ಸುತ್ತು ಉತ್ಸವ ನೇರವೇರಿತು.
ಉತ್ಸವದ ಬಳಿಕ ಕಿರಿಯ ಸ್ವಾಮೀಜಿ ಶಾರದೆಗೆ ಅಭಿಮುಖವಾಗಿ ಇರಿಸಿದ ಸಿಂಹಾಸನದಲ್ಲಿ ಆಸೀನರಾದರು. ಸಪ್ತಶತೀ ಪಾರಯಣದ ಅಧ್ಯಯನ, ಅಮ್ಮನವರಿಗೆ ಮಂಗಳಾರತಿ, ನಾಲ್ಕು ವೇದಗಳ ಪಾರಾಯಣ, ಪಂಚಾಂಗ ಶ್ರವಣ, ಸಂಗೀತ ಸೇವೆ ನಡೆಯಿತು. ಪ್ರಸಾದ ವಿನಿಯೋಗದ ಬಳಿಕ ಉತ್ತರ ನೀರಾಜನದೊಂದಿಗೆ ದರ್ಬಾರು ಮುಕ್ತಾಯಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.