ಶೃಂಗೇರಿ: ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ಎಲ್ಲ ಸೌಕರ್ಯಗಳಿದ್ದರೂ, ಕೆಲಸ ಮಾಡಲು ಸಿಬ್ಬಂದಿ ಇಲ್ಲ. ಪಟ್ಟಣ ಪಂಚಾಯಿತಿಗೆ ಸುಸಜ್ಜಿತ ಕಟ್ಟಡವಿದೆ. ಪ್ರತಿಯೊಂದು ಆಡಳಿತ ವಿಭಾಗದ ಅಧಿಕಾರಿಗಳ ಕೊಠಡಿಗಳಿವೆ. ಆದರೆ ಅಧಿಕಾರಿಗಳಿಲ್ಲದೆ ಕೊಠಡಿಗಳು ಬಣಗುಡುತ್ತಿವೆ. ಸಾರ್ವಜನಿಕರಿಗೆ ಅಗತ್ಯ ಕೆಲಸಗಳು ಆಗದೆ ತೊಂದರೆಯಾಗಿದೆ.
ಪಟ್ಟಣದ ತ್ಯಾಜ್ಯ ವಿಲೇವಾರಿ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರು ಪೂರೈಕೆ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಿಸಿದ ಅಧಿಕಾರಿಗಳು ಇಲ್ಲ. ಸಿಬ್ಬಂದಿ ಕೊರತೆಯಿಂದಾಗಿ ಕಡತಗಳು ವಿಲೇವಾರಿ ಆಗದೆ ಜನರು ಹೈರಾಣಾಗಿದ್ದಾರೆ. ಕಂದಾಯ ಅಧಿಕಾರಿ, ಪ್ರಥಮ ದರ್ಜೆ ಸಹಾಯಕರು, ಎಂಜಿನಿಯರ್ ಸೇರಿದಂತೆ ಹಲವು ಹುದ್ದೆಗಳಿಗೆ ಕಾಯಂ ಅಧಿಕಾರಿಗಳಿಲ್ಲದೆ ಸಮಸ್ಯೆಯಾಗಿದೆ.
ಮೂರು ವರ್ಷಗಳಿಂದ ಆರೋಗ್ಯ ನಿರೀಕ್ಷಕ ಹುದ್ದೆ ಖಾಲಿ ಇದೆ. ಒಬ್ಬರು ಪ್ರಥಮ ದರ್ಜೆ ನೌಕರರಿದ್ದು ಅವರು ಡಿ.30 ರಂದು ನಿವೃತ್ತಿ ಹೊಂದಿದ್ದಾರೆ. ದ್ವಿತೀಯ ದರ್ಜೆ ಸಹಾಯಕರ 3 ಹುದ್ದೆ ಖಾಲಿ ಇವೆ. ಇಬ್ಬರು ಸಮುದಾಯ ಸಂಘಟನಾ ಅಧಿಕಾರಿ ಇದ್ದಾರೆ. ಅವರು ಮೇ ತಿಂಗಳಿನಲ್ಲಿ ನಿವೃತ್ತಿಯಾಗಲಿದ್ದಾರೆ.
ಎಂಜಿನಿಯರ್ ಹುದ್ದೆಗೂ ಕಾಯಂ ಅಧಿಕಾರಿ ಇಲ್ಲದೆ ಕಟ್ಟಡ ಪರವಾನಗಿ, ಕಾಮಗಾರಿ ಮುಂತಾದ ಕೆಲಸ ಕಾರ್ಯಗಳಿಗೆ ಹಿನ್ನಡೆಯಾಗಿದೆ. ತಾತ್ಕಾಲಿಕ ನೆಲೆಯಲ್ಲಿ ಅಧಿಕಾರಿಗ ಳನ್ನು ನೇಮಿಸಿದರೂ ಆದೇಶ ನೀಡದಿರುವುದರಿಂದ ಕಾರ್ಯ ನಿರ್ವಹಣೆ ಅಸಾಧ್ಯವಾಗಿದೆ.
ಬಿಲ್ ಕಲೆಕ್ಟರ್ ಹುದ್ದೆ ಖಾಲಿ ಇದೆ, ದಾಖಲೆ ರೂಂನಲ್ಲೂ ಸಿಬ್ಬಂದಿ ನೇಮಕವಾಗಿಲ್ಲ. ‘ಬೆರಳೆಣಿಕೆಯಷ್ಟು ಸಿಬ್ಬಂದಿ ಇದ್ದರೆ ಅವರು ಏನು ಮಾಡಲು ಸಾಧ್ಯ. ಸಭೆಗಳಿಗೆ, ಕೆಲವೊಮ್ಮೆ ಸ್ಥಳ ಪರಿಶೀಲನೆಗೆ ಹೋಗಬೇಕು. ಇದರ ನಡುವೆ ಕಚೇರಿಯಲ್ಲಿ ಕೆಲಸ ಮಾಡಬೇಕು. ಒಟ್ಟಾರೆಯಾಗಿ ಪಟ್ಟಣ ಪಂಚಾಯಿತಿಯಲ್ಲಿ ಸಿಬ್ಬಂದಿ ಇಲ್ಲದೆ ಜನರು ಪರದಾಡುವ ಸ್ಥಿತಿ ಇದೆ’ ಎನ್ನುತ್ತಾರೆ ಜನರು.
ಪಟ್ಟಣ ಪಂಚಾಯಿತಿಯಲ್ಲಿ 15 ಜನ ಪೌರ ಕಾರ್ಮಿಕರ ಹುದ್ದೆ ಮಂಜೂರಾಗಿದ್ದು ಕೇವಲ ಇಬ್ಬರು ಕಾಯಂ ನೌಕರರಿದ್ದಾರೆ. ಒಟ್ಟು ಮಂಜೂರಾದ ಹುದ್ದೆ 20 ಇದ್ದು ಇದರಲ್ಲಿ ನೇರ ಪಾವತಿ 12 ಜನ ಹಾಗೂ 9 ಮಂದಿ ಹೊರ ಗುತ್ತಿಗೆಯಲ್ಲಿದ್ದಾರೆ. ನೀರು ಪೂರೈಕೆ ವಿಭಾಗದಲ್ಲಿ 3 ಹುದ್ದೆ ಖಾಲಿ ಇವೆ. ಟ್ರ್ಯಾಕ್ಟರ್ ಲೋಡು ಮಾಡುವ ಹುದ್ದೆ 4 ಖಾಲಿ ಇವೆ. ಇದರಿಂದಾಗಿ ಸ್ವಚ್ಛತಾ ಕಾರ್ಯಕ್ಕೆ ತೊಂದರೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.