ಶೃಂಗೇರಿ: ತಾಲ್ಲೂಕಿನಾದ್ಯಂತ ಒಂದು ವಾರಗಳಿಂದ ಸುರಿಯುತ್ತಿದ್ದ ಮಳೆಯು ಶನಿವಾರ ಸ್ವಲ್ಪ ಮಟ್ಟಿಗೆ ಬಿಡುವು ನೀಡಿದೆ.
ಶೃಂಗೇರಿಯಲ್ಲಿ 9.1 ಸೆಂ.ಮೀ, ಕಿಗ್ಗಾದಲ್ಲಿ 13.5 ಸೆಂ.ಮೀ, ಕೆರೆಕಟ್ಟೆಯಲ್ಲಿ 12.4 ಸೆಂ.ಮೀ ಮಳೆಯಾಗಿದೆ. ಮಳೆಯಿಂದ ಬೇಗಾರ್‌ನ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಕಟ್ಟಡದ ಹಿಂದೆ ಮತ್ತು ಇಂತಿಯಾಜ್ ಎಂಬುವವರ ಮನೆ ಹಿಂದೆ ಧರೆ ಕುಸಿದಿದೆ. ಸಿರಿಮನೆ ಜಲಪಾತಕ್ಕೆ ಹೋಗುವ ಸಿಂದೋಡಿ ರಸ್ತೆಯಲ್ಲಿ ಮರ ಬಿದ್ದಿದೆ. ಗಿಣಿಕಲ್ ಗ್ರಾಮದ ಮಹೇಂದ್ರ ಅವರ ದನದ ಕೊಟ್ಟಿಗೆ ಮೇಲೆ ಮರ ಬಿದ್ದು, ಹಾನಿಯಾಗಿದೆ.
ಮಳೆ ಇಳಿಮುಖವಾಗಿರುವುದರಿಂದ ನೆಮ್ಮಾರ್, ಕೆರೆಕಟ್ಟೆ, ಕುರಬಕೇರಿ, ಭಾರತೀತೀರ್ಥ ರಸ್ತೆ, ಗಾಂಧೀ ಮೈದಾನ, ಕೆರೆಕಟ್ಟೆಯ ಗುಲುಗುಂಜಿ ಮನೆ ರಸ್ತೆಯಲ್ಲಿ ವಾಹನ ಸಂಚಾರ ಸುಗಮಗೊಂಡಿತು.
ಹಾಲಂದೂರು, ಕುಂಚೇಬೈಲ್, ಮುಂಡುಗೋಡು, ಬೆಟ್ಟಗೇರೆ, ಗುಂಡ್ರೇ, ಹುಲುಗಾರುಬೈಲು, ಯಡದಳ್ಳಿ, ಸಿರಿಮನೆ, ಹಾಮ್ಟೆ, ಮೀಗಾ, ಉಳುವೆ, ಬೇಗಾನೆ, ಹೊನ್ನವಳ್ಳಿ, ಕೈಮನೆ ಅಜ್ಜೋಳ್ಳಿಯಲ್ಲಿ ವಿದ್ಯುತ್ ಕಂಬಗಳು ದುರಸ್ತಿ ಕಾರ್ಯ ನಡೆಯುತ್ತಿದ್ದು, ಕೆಲವು ಸಮಯ ವಿದ್ಯುತ್ ಸ್ಥಗಿತಗೊಂಡಿದೆ.
ತಾಲ್ಲೂಕಿನ ಜಲಪಾತಗಳಾದ ನರಸಿಂಹ ಪರ್ವತದ ಎರಡು ಕೊಳಗಳು, ಬರ್ಕಣ, ಸಿರಿಮನೆ, ಸೂತನಬ್ಬಿ ಮುಂತಾದ ಜಲಪಾತಗಳು ತುಂಬಿ ಉಕ್ಕಿ ಹರಿಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.