ಚಿಕ್ಕಮಗಳೂರು: ಒಕ್ಕಲಿಗರ ಬೆಳ್ಳಿ ಭವನ ಉದ್ಘಾಟನಾ ಸಮಾರಂಭದಲ್ಲಿ ಗ್ಯಾರಂಟಿ ಯೋಜನೆಗಳನ್ನು ಪ್ರಸ್ತಾಪಿಸಿದ ಸಚಿವ ಕೆ.ಜೆ.ಜಾರ್ಜ್ ಅವರ ಭಾಷಣಕ್ಕೆ ಕೆಲವರು ಅಡ್ಡಿಪಡಿಸಿದರು.
ಎಐಟಿ ವೃತ್ತದ ಬಳಿ ಜಿಲ್ಲಾ ಒಕ್ಕಲಿಗರ ಸಂಘದಿಂದ ನಿರ್ಮಿಸಿರುವ ಬೆಳ್ಳಿ ಭವನ ಉದ್ಘಾಟನೆ ನೆರವೇರಿಸಿ ಭಾಷಣ ಆರಂಭಿಸಿದರು. ಮಾತಿನ ನಡುವೆ ಗ್ಯಾರಂಟಿ ಯೋಜನೆ ಪ್ರಸ್ತಾಪಿಸಿದಾಗ ಕೆಲವರು ವೇದಿಕೆಯ ಮುಂದೆ ಬಂದು ಆಕ್ಷೇಪ ವ್ಯಕ್ತಪಡಿಸಿದರು.
'ಇದು ರಾಜಕೀಯ ವೇದಿಕೆಯಲ್ಲ, ರಾಜಕೀಯ ಮಾತನಾಡುವುದಾದರೆ ಕೆಳಗೆ ಇಳಿಯಿರಿ' ಎಂದು ಆಕ್ರೋಶ ವ್ಯಕ್ತವಾಯಿತು.
ಈ ವೇಳೆ ಮುಜುಗರಕ್ಕೆ ಒಳಗಾದ ಸಚಿವರು, 'ಭಾಷಣಕ್ಕೆ ಅಡ್ಡಿಪಡಿಸಿ ರಾಜಕೀಯ ಮಾಡಬೇಡಿ, ನನಗೂ ರಾಜಕೀಯ ಬರುತ್ತದೆ' ಎಂದು ಸಿಟ್ಟಾದರು. ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಮತ್ತೆ ಮೈಕ್ ಬಳಿ ಬಂದ ಸಚಿವರು, 'ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.