ಕಳಸ: ತಾಲ್ಲೂಕಿನ ಇಡಕಿಣಿ ಗ್ರಾಮದ ಕೋಟೆಮಕ್ಕಿಯ ಹೊಸಮನೆ ಸಮೀಪ ಶಿಲಾಯುಗದ ಮಾನವ ನಿರ್ಮಿತ ಕಲ್ಗುಳಿಗಳು ಮತ್ತು ಅರೆಯುವ ಕಲ್ಲುಗಳು ಹಾಗೂ ನಿಲಿಸುಗಲ್ಲು ವಾರೆ ಗುಡ್ಡದ ಮೇಲೆ ನಿಲಿಸುಗಲ್ಲುಗಳನ್ನು ಸಂಶೋಧಕ ಎಚ್.ಆರ್.ಪಾಂಡುರಂಗ ಪತ್ತೆ ಹಚ್ಚಿದ್ದಾರೆ.
ಇಡಕಿಣಿ ಗ್ರಾಮದ ಬೇಟೆರಾಯನ ಹಳ್ಳದ ಬಲದಂಡೆಯಲ್ಲಿ ಹೊಸಮನೆ ಚಂದ್ರರಾಜಯ್ಯ ಹಾಗೂ ನಾಗೇಂದ್ರಯ್ಯ ಅವರ ಪಾಳುಗದ್ದೆಯಲ್ಲಿರುವ ಬಂಡೆಯ ಮೇಲೆ ಕಬ್ಬಿಣಯುಗದ ಬೃಹತ್ ಶಿಲಾಸಂಸ್ಕೃತಿಯ ಮಾನವರು ನಿರ್ಮಿಸಿದ ವೃತ್ತಾಕಾರ, ಅಂಡಾಕಾರದ 32 ಕಲ್ಗುಳಿಗಳು ಕಂಡು ಬಂದಿವೆ. ಶಿಲಾಯುಧಗಳನ್ನು ಹರಿತಗೊಳಿಸುವ ಸಮಯದಲ್ಲಿ ರಚನೆಯಾಗಿರಬಹುದು. ಧಾರ್ಮಿಕ ಕಾರ್ಯಕ್ರಮ, ಪಿತೃಗಳ ಪೂಜೆ ಸಮಯದಲ್ಲಿ ದೀಪ ಹಚ್ಚಲು, ಆಹಾರ ತಯಾರಿಕೆ, ಔಷಧಿ ತಯಾರಿಕೆ, ಬಣ್ಣಗಳ ತಯಾರಿಕೆಗಾಗಿಯೂ ಬಳಕೆಯಾಗುತ್ತಿದ್ದ ಸಾಧ್ಯತೆಗಳಿವೆ. ಸ್ಥಳೀಯರು ಈ ಕಲ್ಗುಳಿಗಳ ಬಂಡೆಯನ್ನು ಚನ್ನೇಕಲ್ಲು ಎಂದು ಕರೆಯುತ್ತಿದ್ದು, ಸ್ಥಳೀಯ ಚನ್ನೆಮಣೆ (ಅಳಗುಳಿಮಣೆ) ಆಗಿರಬಹುದು ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇದರ ಹಿಂದೆ ಇರುವ ಹಾಸುಬಂಡೆಯ ಮೇಲೆ ಎರಡು ಬಟ್ಟಲಾಕಾರದ ಕಲ್ಗುಳಿಗಳು ಕಂಡುಬಂದಿದ್ದು, ಸ್ಥಳೀಯರು ಇವುಗಳನ್ನು ‘ಕುಟ್ಟುವ ಕಲ್ಲುಗಳು’ ಎಂದು ಕರೆಯುತ್ತಾರೆ. ಇದು ಶಿಲಾಯುಗ ಸಂಸ್ಕೃತಿಯ ಮಾನವರು ಆಹಾರ ಮತ್ತು ಔಷಧಿ ತಯಾರಿಕೆ ಸಮಯದಲ್ಲಿ ಕುಟ್ಟಲು ಅಥವಾ ಅರೆಯಲು ಬಳಸುತ್ತಿದ್ದ ‘ಅರೆಯುವ ಕಲ್ಲುಗಳು’ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.
ಇಡಕಿಣಿ ಕೋಟೆಮಕ್ಕಿಯ ನಿಲಿಸುಗಲ್ಲು ವಾರೆ ಗುಡ್ಡದ ಮೇಲೆ ಎರಡು ಜೋಡಿ ನಿಲಿಸುಗಲ್ಲುಗಳು ಕಂಡುಬಂದಿವೆ. ಈ ಜೋಡಿ ನಿಲಿಸುಗಲ್ಲುಗಳು ಕಬ್ಬಿಣಯುಗದ ಶಿಲಾ ಸಂಸ್ಕೃತಿಯ ಕಾಲದ ಇಬ್ಬರು ಮುಖಂಡರು ಅಥವಾ ದಂಪತಿಯ ಮರಣದ ಸ್ಮಾರಕವಾಗಿರಬಹುದು ಎನ್ನುತ್ತಾರೆ ಸಂಶೋಧಕ ಪಾಂಡುರಂಗ.
ಇಡಕಿಣಿ ಪರಿಸರ ಸುಮಾರು ಮೂರು ಸಾವಿರ ವರ್ಷಗಳ ಹಿಂದಿನ ಕಬ್ಬಿಣ ಯುಗದ ಬೃಹತ್ ಶಿಲಾಸಂಸ್ಕೃತಿಯ ಕ್ರಿ.ಪೂ.1200ರಿಂದ 200 ನೇ ಕಾಲಾವಧಿಯಲ್ಲಿ ನೆಲೆಯಾಗಿತ್ತು ಎನ್ನುತ್ತಾರೆ ಸಂಶೋಧಕರಾದ ಪಾಂಡುರಂಗ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.