ADVERTISEMENT

ಮೂಡಿಗೆರೆ: ಕಾಡಾನೆಗೆ ಹೆದರಿ ಭತ್ತ ಬೆಳೆಯುವುದನ್ನೇ ಬಿಟ್ಟರು!

ವಿಜಯಕುಮಾರ್ ಎಸ್.ಕೆ.
Published 22 ಡಿಸೆಂಬರ್ 2023, 5:48 IST
Last Updated 22 ಡಿಸೆಂಬರ್ 2023, 5:48 IST
ಭೈರಾಪುರದ ಬಳಿ ಭತ್ತದ ಗದ್ದೆಗಳು ಈಗ ಪಾಳು ಬಿದ್ದಿರುವುದು
ಭೈರಾಪುರದ ಬಳಿ ಭತ್ತದ ಗದ್ದೆಗಳು ಈಗ ಪಾಳು ಬಿದ್ದಿರುವುದು   

ಚಿಕ್ಕಮಗಳೂರು: ಕಾಡಾನೆಗಳ ಭಯ ಮೂಡಿಗೆರೆ ತಾಲ್ಲೂಕಿನ ಸುತ್ತಮುತ್ತಲ ರೈತರನ್ನು ಕೃಷಿಯಿಂದಲೇ ವಿಮುಖವಾಗುವಂತೆ ಮಾಡಿದೆ. ಊರಬಗೆ, ಬೈರಾಪುರ ಸುತ್ತಮತ್ತಲ ಭತ್ತದ ಗದ್ದೆಗಳನ್ನೇ ರೈತರು ಪಾಳು ಬಿಟ್ಟಿದ್ದಾರೆ.

ಸಾಂಪ್ರದಾಯಿಕವಾಗಿ ಭತ್ತ ಬೆಳೆಯತ್ತಿದ್ದ ಪ್ರದೇಶಗಳಲ್ಲಿ ಕ್ರಮೇಣವಾಗಿ ಕಾಫಿ, ಶುಂಠಿ ರೀತಿಯ ವಾಣಿಜ್ಯ ಬೆಳೆ ಆವರಿಸಿಕೊಂಡಿವೆ. ಕಳೆದ 15  ವರ್ಷಗಳಲ್ಲಿ ಜಿಲ್ಲೆಯಲ್ಲಿ 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಕಣ್ಮರೆಯಾಗಿದೆ. 

15 ವರ್ಷಗಳ ಹಿಂದೆ 43 ಸಾವಿರ ಹೆಕ್ಟೇರ್‌ನಲ್ಲಿ ಇದ್ದ ಭತ್ತದ ಬೆಳೆ ಈಗ 13 ಸಾವಿರ ಹೆಕ್ಟೇರ್‌ಗೆ ಇಳಿಕೆಯಾಗಿದೆ. ಮುಡಿಗೆರೆ ತಾಲ್ಲೂಕಿನಲ್ಲಿ ಅತೀ ಹೆಚ್ಚು 10 ಸಾವಿರ ಹೆಕ್ಟೆರ್‌ನಲ್ಲಿ ಇದ್ದ ಭತ್ತ, ಈಗ ಎರಡು ಸಾವಿರ ಹೆಕ್ಟೇರ್‌ಗೆ ಇಳಿಕೆಯಾಗಿದೆ. ವಾಣಿಜ್ಯ ಬೆಳೆಯತ್ತ ರೈತರು ಮುಖ ಮಾಡಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಕಾಡು ಪ್ರಾಣಿಗಳ ಕಾಟವೂ ಜನರನ್ನು ಕಾಡುತ್ತಿದೆ.

ADVERTISEMENT

ಬೇರೆ ತಾಲ್ಲೂಕಿನಲ್ಲಿ ಭತ್ತದ ಬೆಳೆಯಿಂದ ವಿಮುಖವಾದ ರೈತರು ಬೇರೆ ಬೆಳೆ ಬೆಳೆಯುತ್ತಿದ್ದಾರೆ. ಆದರೆ, ಮೂಡಿಗೆರೆ ತಾಲ್ಲೂಕಿನ ಭೈರಾಪುರ ಸುತ್ತಮುತ್ತಲ ರೈತರು ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗದ ಸ್ಥಿತಿಗೆ ಬಂದಿದ್ದಾರೆ. ನೂರಾರು ಎಕರೆ ಭತ್ತದ ಬಯಲುಗಳಲ್ಲಿ ಕಾಡು ಜಾತಿಯ ಗಿಡಗಳು ಬೆಳೆದಿವೆ. 

ಮೂಡಿಗೆರೆಯಿಂದ ಎತ್ತಿನಭುಜ ಪ್ರವಾಸಿ ತಾಣಕ್ಕೆ ಹೋಗುವ ದಾರಿಯಲ್ಲಿ ಉದ್ದಕ್ಕು ಭತ್ತದ ಗದ್ದೆ ಬಯಲುಗಳು ಪಾಳು ಬಿದ್ದಿರುವುದು ಗೋಚರಿಸುತ್ತವೆ. ಊರಬಗೆ, ಸತ್ತಿಗನಹಳ್ಳಿ, ಭೈರಾಪುರ, ಕುಂಬರಡಿ, ಗೌಡಹಳ್ಳಿ ಸುತ್ತಮುತ್ತ ನೂರಾರು ಎಕರೆ ಭತ್ತದ ಗದ್ದೆಗಳಲ್ಲಿ ಖಾಲಿ ಉಳಿದಿವೆ.

ಕಾರ್ಮಿಕರ ಕೊರತೆಯ ನಡುವೆ ಹಣ ಖರ್ಚು ಮಾಡಿ ಭತ್ತದ ಗದ್ದೆಗಳನ್ನು ನಾಟಿ ಮಾಡಿದರೆ ಕಾಡಾನೆಗಳ ಹಿಂಡು ಒಂದು ಬಾರಿ ಗದ್ದೆಗಳಲ್ಲಿ ಓಡಾಡಿದರೆ ಇಡೀ ಭತ್ತದ ಪೈರು ಮಣ್ಣು ಪಾಲಾಗುತ್ತದೆ. ನಾಲ್ಕೈದು ವರ್ಷಗಳಿಂದ ಈ ತೊಂದರೆ ಅನುಭವಿಸಿ ಈಗ ಗದ್ದೆ ನಾಟಿ ಗೋಜಿಗೇ ಹೊಗಿಲ್ಲ ಎನ್ನುತ್ತಾರೆ ರೈತರು.

ಕಾಡಾನೆ ಹಾವಳಿಯಿಂದ ಭತ್ತದ ಗದ್ದೆಗಳು ಹಾಳಾದರೆ ಅರಣ್ಯ ಇಲಾಖೆ ಪರಿಹಾರ ನೀಡುತ್ತದೆ. ಆದರೆ, ರೈತರು ಖರ್ಚು ಮಾಡಿದ್ದ ಹಣ ಮತ್ತು ಶ್ರಮಕ್ಕೆ ಹೋಲಿಸಿದರೆ ಪರಿಹಾರ ಮೊತ್ತ ಯಾವುದಕ್ಕೂ ಸಾಕಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

‘ಶ್ರಮ ಮತ್ತು ಹಣ ಖರ್ಚು ಮಾಡಿ ಬೆಳೆ ಹಾನಿ ಮಾಡಿಕೊಳ್ಳುವ ಬದಲು ನಾಟಿ ಮಾಡದಿರುವದೇ ಲೇಸು ಎಂಬ ನಿರ್ಧಾರಕ್ಕೆ ಬಂದಿದ್ದೇವೆ’ ಎಂದು ರೈತರು ಹೇಳುತ್ತಾರೆ. 

ಪ್ರಭಾಕರ್
ನಾಟಿ ಮಾಡಿದ ಭತ್ತದ ಪೈರು ಸಂಪೂರ್ಣವಾಗಿ ಆನೆಗಳ ಪಾಲಾಗುತ್ತಿತ್ತು. ಅರಣ್ಯ ಇಲಾಖೆ ನೀಡುತ್ತಿದ್ದ ಪರಿಹಾರ ಯಾವುದಕ್ಕೂ ಸಾಕಾಗುತ್ತಿರಲಿಲ್ಲ. ಆದ್ದರಿಂದ ಗದ್ದೆಗಳನ್ನು ಪಾಳು ಬಿಟ್ಟಿದ್ದೇವೆ.
–ಸತೀಶ್‌ ಭೈರಾಪುರದ ರೈತ
ಕಾಡಾನೆಗೆ ದಾಳಿಗೆ ಸಿಲುಕಿ ಒಮ್ಮೆ ಹೇಗೋ ಜೀವ ಉಳಿದಿದೆ. ಆದ್ದರಿಂದ ಗುಡ್ಡದ ತೋಟಗಳಿಗೆ ಹೋಗುವುದನ್ನೇ ಬಿಟ್ಟಿದ್ದೇವೆ. ತೋಟಗಳು ಪಾಳು ಬಿದ್ದಿವೆ.
–ಪ್ರಭಾಕರ್ ಗೌಡಹಳ್ಳಿ

ಗುಡ್ಡದ ತೋಟಗಳು ಪಾಳು ಕಾಡಾನೆ ಹಾವಳಿ

ಈ ಭಾಗದ ರೈತರಲ್ಲಿ ಕಾಫಿ ತೋಟಗಳನ್ನೂ ಪಾಳು ಬಿಡುವಂತೆ ಮಾಡಿದೆ. ರಸ್ತೆ ಬಿದಿಯಲ್ಲಿ ಇರುವ ತೋಟಗಳನ್ನಷ್ಟೇ ನಿರ್ವಹಣೆ ಮಾಡುತ್ತಿದ್ದಾರೆ. ಈ ಭಾಗದಲ್ಲಿ ಇತ್ತೀಚೆಗೆ ಕಾಡಾನೆ ಹಾವಳಿ ಹೆಚ್ಚಾಗಿದ್ದು ರಸ್ತೆ ಬದಿಯಲ್ಲೇ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ತಿಕ್ ಅವರ ಮೇಲೆ ಆನೆ ದಾಳಿ ಮಾಡಿ ಪ್ರಾಣ ಬಲಿ ಪಡೆಯಿತು. ರಸ್ತೆಯಲ್ಲೇ ಹಲವರು ಕೂದಲೆಳೆ ಅಂತರದಲ್ಲಿ ಹಲವು ಬಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ಇದೆಲ್ಲದರಿಂದ ಹೆದರಿರುವ ರೈತರು ರಸ್ತೆಯಿಂದ ದೂರ ಇರುವ ಗುಡ್ಡಗಳ ಬದಿಯ ತೋಟಗಳನ್ನು ಪಾಳು ಬಿಟ್ಟಿದ್ದಾರೆ. ‘ಆನೆಗಳನ್ನು ಕಾಡಿನತ್ತ ಹಿಮ್ಮೆಟ್ಟಿಸುವಾಗ ಬಳಸುವ ಪಟಾಕಿ ಸದ್ದಿಗೆ ಆನೆಗಳು ದಿಕ್ಕಾಪಾಲಾಗಿ ಓಡುತ್ತವೆ. ಆಗ ತೋಟಗಳಲ್ಲಿ ಎದುರಿಗೆ ಸಿಕ್ಕರೆ ಜೀವ ಉಳಿಯುವುದಿಲ್ಲ. ಆದ್ದರಿಂದ ತೋಟಗಳನ್ನು ಪಾಳು ಬಿಟ್ಟಿದ್ದೇವೆ’ ಎನ್ನುತ್ತಾರೆ ಗೌಡಹಳ್ಳಿಯ ರೈತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.