ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್. ಪುರ ಪಟ್ಟಣ ಪಂಚಾಯಿತಿ ಸದಸ್ಯೆ ಜುಬೇದಾ ಅವರು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಜುಬೇದಾ ಅವರ ವಾಟ್ಸಪ್ ಸ್ಟೇಟಸ್ ನಲ್ಲಿ ‘ನನ್ನ ಸಾವಿಗೆ ನನ್ನ ಪಕ್ಷದ ಮುಖಂಡರು ಕಾರಣ’ ಎಂಬ ಸಾಲು ಇದೆ.
ಜುಬೇದಾ ಅವರಿಗೆ ಎನ್.ಆರ್. ಪುರ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ನಂಜಪ್ಪ ಆಸ್ಪತ್ರೆಗೆ ಒಯ್ಯಲಾಗಿದೆ.
‘ಶುಕ್ರವಾರ ರಾತ್ರಿ 9. 30ರ ಹೊತ್ತಿಗೆ ಜುಬೇದಾ ಅವರನ್ನು ಆಸ್ಪತ್ರೆಗೆ ಕರೆ ತಂದಿದ್ದರು. ಅವರು ಮಾತ್ರೆಗಳನ್ನು ಸೇವಿಸಿದ್ದರು. ಪ್ರಥಮ ಚಿಕಿತ್ಸೆ ನೀಡಿ, ಶಿವಮೊಗ್ಗದ ಆಸ್ಪತ್ರೆಗೆ ಕಳಿಸಲಾಗಿದೆ’ ಎಂದು ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ವೀರಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ವಾಟ್ಸಪ್ ಸ್ಟೇಟಸ್ ನೋಡಿದಾಗ ಏನೋ ಅನಾಹುತ ಮಾಡಿಕೊಂಡಿದ್ದಾರೆ ಎಂದು ತಿಳಿಯಿತು. ತಕ್ಷಣ ಆಸ್ಪತ್ರೆಗೆ ಕರೆದೊಯ್ದೆವು. ನಿದ್ರೆ, ಇತರ ಮಾತ್ರೆಗಳನ್ನು ಸೇವಿಸಿದ್ದಾರೆ ಎಂದು ವೈದ್ಯರು ತಿಳಿಸಿದರು. ನಂಜಪ್ಪ ಆಸ್ಪತ್ರೆಯ ತೀವ್ರ ನಿಗಾ ಘಟಕದ (ಐಸಿಯು) ವಾರ್ಡ್ ನಲ್ಲಿ ಇದ್ದಾರೆ‘’ ಎಂದು ಜುಬೇದಾ ಅಳಿಯ ರಿಯಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
ಎನ್.ಆರ್.ಪುರ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ಆಡಳಿತದ ಚುಕ್ಕಾಣಿ ಹಿಡಿದಿದೆ. ಅಧ್ಯಕ್ಷರ ಅವಧಿಗೆ ಸಂಬಂಧಿಸಿದಂತೆ ಪಕ್ಷದಲ್ಲಿ ‘ಹಂಚಿಕೆ ಸೂತ್ರ’ದ ಒಳಒಪ್ಪಂದ ಆಗಿತ್ತು. ಪಕ್ಷದ ಹಂಚಿಕೆ ಸೂತ್ರ ಪ್ರಕಾರ ಹಾಲಿ ಅಧ್ಯಕ್ಷರು (ಸುರಯ್ಯ ಬಾನು) ಅವಧಿ ಮುಗಿದರೂ ರಾಜೀನಾಮೆ ನೀಡಿಲ್ಲ ಎಂದು ‘ಒಳ ಜಟಾಪಟಿ’ ಶುರುವಾಗಿತ್ತು. ಒಳ ಒಪ್ಪಂದದಂತೆ ತನಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಜುಬೇದಾ ಪಟ್ಟು ಹಿಡಿದಿದ್ದರು ಎಂದು ತಿಳಿದುಬಂದಿದೆ. ಹಾಲಿ ಅಧ್ಯಕ್ಷೆ ಸುರಯ್ಯಾ ಮತ್ತು ಜುಬೇದಾ ಸಂಬಂಧಿಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.