ADVERTISEMENT

ಕಡೂರು: ಪಾಳುಬಿದ್ದ ತಹಶೀಲ್ದಾರ್ ವಸತಿಗೃಹ

ಹಳೆ ತಾಲ್ಲೂಕು ಕಚೇರಿ ಶಿಥಿಲ, ಕೊಠಡಿಗಳ ಕಮಟು ವಾಸನೆಗೆ ಸಿಬ್ಬಂದಿ ಹೈರಾಣ

ಬಾಲು ಮಚ್ಚೇರಿ
Published 14 ಆಗಸ್ಟ್ 2024, 6:36 IST
Last Updated 14 ಆಗಸ್ಟ್ 2024, 6:36 IST
ಶಿಥಿಲವಾಗಿರುವ ಹಳೆ ತಾಲ್ಲೂಕು ಕಚೇರಿ ಕಟ್ಟಡ
ಶಿಥಿಲವಾಗಿರುವ ಹಳೆ ತಾಲ್ಲೂಕು ಕಚೇರಿ ಕಟ್ಟಡ   

ಕಡೂರು: ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಪಟ್ಟಣದ ಹಳೆ ತಾಲ್ಲೂಕು ಕಚೇರಿ ಸಂಪೂರ್ಣ ಶಿಥಿಲವಾಗಿದ್ದು ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಚೇರಿಗಳಲ್ಲಿ ಕಮಟು ವಾಸನೆಯಿಂದ ಸಿಬ್ಬಂದಿ ಕೆಲಸ ಮಾಡಲು ಕಷ್ಟಪಡುತ್ತಿದ್ದಾರೆ.

ಆಹಾರ, ಚುನಾವಣೆ ಮುಂತಾದ ಹಲವಾರು ವಿಭಾಗಗಳು ಕೆಲಸ ನಿರ್ವಹಿಸುತ್ತಿರುವ ಹಳೆ ತಾಲ್ಲೂಕು ಕಚೇರಿ 1897ರಲ್ಲಿ ನಿರ್ಮಾಣವಾದ ಕಟ್ಟಡ. ಈ ಕಟ್ಟಡದ ಮೇಲೆ ಗಿಡಗಂಟಿಗಳು ಬೆಳೆದಿವೆ. ಗಿಡಗಳ ಬೇರು ಗೋಡೆಯ ಒಳಗೆಲ್ಲ ಹರಡಿ ಒಂದು ರೀತಿಯ ಕಮಟು ವಾಸನೆ ಹರಡಿದೆ. ‌ಮಳೆ ಬಂದರಂತೂ ಕಟ್ಟಡದ ಮೇಲೆ ನೀರು ನಿಂತು ಕೆಟ್ಟ ವಾಸನೆ ಮತ್ತಷ್ಟು ಹೆಚ್ಚಾಗುತ್ತದೆ.

ಶತಮಾನ ಕಂಡ ಈ ಹಳೆ ತಾಲ್ಲೂಕು ಕಚೇರಿ ಕಟ್ಟಡವನ್ನು ದುರಸ್ತಿಗೊಳಿಸುವ ಅಥವಾ ಇದನ್ನು ನೆಲಸಮಗೊಳಿಸಿ ಹೊಸ ಕಟ್ಟಡ ಕಟ್ಟುವ ಕಾರ್ಯವಾಗಬೇಕು ಎಂಬ ಆಗ್ರಹ ವ್ಯಕ್ತವಾಗಿತ್ತು.  ಶಾಸಕ ಕೆ.ಎಸ್.ಆನಂದ್ ಈ ವಿಚಾರವಾಗಿ ಹಿಂದೊಮ್ಮೆ ಆಸಕ್ತಿ ತೋರಿದ್ದರು. ಆದರೆ, ಪರಿಸ್ಥಿತಿ ಬದಲಾಗಿಲ್ಲ.

ADVERTISEMENT

ಹಳೆ ಕಚೇರಿಯ ಪರಿಸ್ಥಿತಿ ಹೀಗಿದ್ದರೆ ತಾಲ್ಲೂಕು ದಂಡಾಧಿಕಾರಿ ಅಧಿಕೃತ ನಿವಾಸ ಆರು ವರ್ಷಗಳಿಂದ ಪಾಳುಬಿದ್ದುಕೊಂಡಿದೆ.

ತಾಲ್ಲೂಕು ಕಚೇರಿಗೆ ಹೊಂದಿಕೊಂಡಂತೆ ಹಿಂಭಾಗದಲ್ಲಿ ತಹಶೀಲ್ದಾರರ ಅಧಿಕೃತ ನಿವಾಸವಿದೆ. ಹಿಂದೆ ತಹಶೀಲ್ದಾರರಾಗಿದ್ದ ಚಿನ್ನರಾಜು ಇದೇ ನಿವಾಸದಲ್ಲಿದ್ದರು. ನಂತರದಲ್ಲಿ ನಿರ್ವಹಣೆಯಿಲ್ಲದೆ ಈ ನಿವಾಸ ಪಾಳುಬಿತ್ತು. ಇಲ್ಲಿಗೆ ಬಂದ ತಹಶೀಲ್ದಾರರು ಬಾಡಿಗೆ ಮನೆಯಲ್ಲಿರುವ ಅನಿವಾರ್ಯತೆ. ಹಿಂದೆ ಇದ್ದ ತಹಶೀಲ್ದಾರರೊಬ್ಬರು ಸುಮಾರು ಎರಡೂವರೆ ವರ್ಷಗಳ ತನಕ ಪ್ರವಾಸಿ ಮಂದಿರದಲ್ಲಿ ತಂಗಿದ್ದರು. ಈ ನಿವಾಸದ ನವೀಕರಣಕ್ಕೆ ಲೋಕೋಪಯೋಗಿ ಇಲಾಖೆ ಸರ್ಕಾರಕ್ಕೆ ಪತ್ರ ಬರೆಯುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಸ್ತುತ ಈ ನಿವಾಸದ ಆವರಣ ಮೂತ್ರಾಲಯವಾಗಿ ಉಪಯೋಗವಾಗುತ್ತಿದೆ ಎಂದು ಸಿಬ್ಬಂದಿಯೊಬ್ಬರು ಬೇಸರಿಸಿದರು.

ಕಚೇರಿಯೊಳಗೆ ಕೆಟ್ಟ ವಾಸನೆಯಿಂದ ಕೆಲಸ ಮಾಡುವುದು ಕಷ್ಟವಾಗುತ್ತಿದೆ. ಹಿರಿಯ ಅಧಿಕಾರಿಗಳು ಇದರತ್ತ ಗಮನ ಹರಿಸಬೇಕಿದೆ ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿಯೊಬ್ಬರು ಹೇಳಿದರು.

ಪಾಳುಬಿದ್ದಿರುವ ತಹಶೀಲ್ದಾರರ ವಸತಿಗೃಹ

1897ರಲ್ಲಿ ನಿರ್ಮಾಣವಾದ ಕಟ್ಟಡ ಮಳೆ ಬಂದರೆ ಕಟ್ಟಡದಲ್ಲಿ ಅಸಹನೀಯ ವಾಸನೆ ಮೂತ್ರಾಲಯವಾದ ತಹಶೀಲ್ದಾರ್ ವಸತಿ ಗೃಹ

‘ಜಿಲ್ಲಾಧಿಕಾರಿಗೆ ವರದಿ’

ತಹಶೀಲ್ದಾರ್ ನಿವಾಸ ಶಿಥಿಲವಾಗಿದ್ದು ಅದನ್ನು ನೆಲಸಮಗೊಳಿಸಲು ಅನುಮತಿ‌ಕೋರಿ ಪತ್ರ ಬರೆಯಲು ಸೂಚಿಸಲಾಗಿದೆ. ಹೊಸ ಕಟ್ಟಡಕ್ಕಾಗಿ ಪ್ರಸ್ತಾವ ಸಲ್ಲಿಸಲು ಸಹ ಸೂಚನೆ ನೀಡಲಾಗಿದೆ. ಹಳೆ ತಾಲ್ಲೂಕು ಕಚೇರಿಯ ದುರಸ್ತಿ ಬಗ್ಗೆ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ತಹಶೀಲ್ದಾರ್ ಪೂರ್ಣಿಮಾ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.