ಚಿಕ್ಕಮಗಳೂರು: ಇಸ್ರೇಲ್‌ನ ಟೆಲ್ ಅವಿವ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಂಡವು ಸಂಸ್ಕೃತ ಅಧ್ಯಯನ ಕಾರ್ಯಕ್ರಮಕ್ಕೆ ಇದೇ 25ರಂದು ಹಿರೇಮಗಳೂರಿಗೆ ಬರಲಿದೆ. ಇತಿಹಾಸ ಪ್ರಸಿದ್ಧ ಕೋದಂಡರಾಮಚಂದ್ರ ಸ್ವಾಮಿ ದೇಗುಲದಲ್ಲಿ ಪಂಡಿತರಿಂದ ಬೋಧನೆ ಕೈಂಕರ್ಯ ನಡೆಯಲಿದೆ.
ಟೆಲ್ ಅವಿವ್ ವಿಶ್ವವಿದ್ಯಾಲಯದ ಏಷ್ಯಾ ಸಂಸ್ಕೃತಿ ಶಾಖೆಯ ಸಂಸ್ಕೃತ ಭಾಷಾ ಅಧ್ಯಯನ ವಿಭಾಗದ ಮುಖ್ಯಸ್ಥ ರೆಫೆಲ್ ಪೆಲೆಡ್ ಅವರು ಮಾರ್ಗದರ್ಶನದಲ್ಲಿ ತಂಡವು ಕಲಿಕೆಯಲ್ಲಿ ತೊಡಗಿಕೊಳ್ಳಲಿದೆ. ಸಂಸ್ಕೃತ ಭಾಷಾ ವೈಶಿಷ್ಟ್ಯ, ಸಂಸ್ಕೃತಿ ವಿಚಾರಗಳನ್ನು ಮನದಟ್ಟು ಮಾಡಿಸುವುದು ಇದರ ಉದ್ದೇಶವಾಗಿದೆ.
ರಫೆಲ್ ಪೆಲೆಡ್ ಅವರು ಪ್ರಜವಾಣಿಯೊಂದಿಗೆ ಮಾತನಾಡಿ, ‘ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಅವರ ಸಹೋದರ ಪಂಡಿತ ಪೆರುಮಾಳ್ ಅವರು ವಿದ್ಯಾರ್ಥಿಗಳಿಗೆ ಸಂಸ್ಕೃತ ಬೋಧನೆ ಮಾಡುವರು. ಸಂಸ್ಕೃತ ಭಾಷೆಯ ಸೊಬಗನ್ನು ವಿಸ್ತೃತವಾಗಿ ತಿಳಿಸುವರು’ ಎಂದು ಹೇಳಿದರು.
‘ಪದವಿ (ಸಂಸ್ಕೃತ ವಿಭಾಗ) ಪ್ರಥಮ ವರ್ಷ ಪೂರೈಸಿದ ವಿದ್ಯಾರ್ಥಿಗಳು ರಜಾ ಅವಧಿಯಲ್ಲಿ ಇಲ್ಲಿಗೆ ಬರುತ್ತಾರೆ. 2016ರಿಂದ ಈ ಕೈಂಕರ್ಯ ಶುರುವಾಗಿದೆ. ಈ ಬಾರಿ ಇಲ್ಲಿಗೆ ಬರುತ್ತಿರುವುದು ಮೂರನೇ ತಂಡ’ ಎಂದು ಹೇಳಿದರು.
ವಿದ್ಯಾರ್ಥಿಗಳು ಎರಡು ವಾರಗಳ ಕಾಲ ವಾಸ್ತವ್ಯ ಹೂಡಲಿದ್ದಾರೆ. ಬೆಳಿಗ್ಗೆ ಎರಡು ಗಂಟೆ ಮತ್ತು ಸಂಜೆ ಎರಡು ಗಂಟೆ ಸಂಸ್ಕೃತ ಕಲಿಯಲ್ಲಿದ್ದಾರೆ. ಈ ನಿಟ್ಟಿನಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಕಲಿಕೆ ಜತೆಗೆ ಗ್ರಾಮೀಣ ಸೊಗಡು, ಆಚಾರವಿಚಾರಗಳನ್ನು ತಿಳಿದುಕೊಳ್ಳಲಿದ್ದಾರೆ.
2012ರಲ್ಲಿ ಇಸ್ರೇಲಿನ ಯೋಗಾಭ್ಯಾಸ ಸ್ನೇಹಿತರೊಂದಿಗೆ ಈ ಭಾಗಕ್ಕೆ ಪ್ರವಾಸ ಬಂದಿದ್ದೆ. ಇಲ್ಲಿನ ಪ್ರವಾಸಿ ಮಾರ್ಗದರ್ಶಿ ರಾಮಚಂದ್ರ ಹೆಗ್ಡೆ ಅವರು ಹಿರೇಮಗಳೂರು ಕಣ್ಣನ್ ಅವರು ಪರಿಚಯಿಸಿದರು. ಕಣ್ಣನ್ ಅವರು ಸಂಪನ್ನರು. ಅವರ ಭಾಷಾ ಪಾಂಡಿತ್ಯ, ಸಂಸ್ಕೃತಿ ಸೊಬಗುಗಳಿಗೆ ಮಾರು ಹೋದೆ. ಆಗಿನಿಂದಲೂ ಹಿರೇಮಗಳೂರು ಮೆಚ್ಚಿನ ತಾಣ. ಈವರೆಗೆ ಏಳು ಬಾರಿ ಈ ಊರಿಗೆ ಬಂದಿದ್ದೇನೆ’ ಎಂದು ರಫೆಲ್ ತಿಳಿಸಿದರು.
‘ಹಿರೇಮಗಳೂರಿನ ದೇಗುಲದ ಕೋದಂಡರಾಮಚಂದ್ರಸ್ವಾಮಿ ಮೂರ್ತಿ ಅದ್ಭುತವಾಗಿದೆ. ಕಣ್ಣನ್ ಮತ್ತು ಪೆರುಮಾಳ್ ಅವರಿಂದ ಬಹಳಷ್ಟು ಕಲಿತಿದ್ದೇನೆ. ಮಾತೃಭಾಷೆಯ ಮಹತ್ವ ಗೊತ್ತು ಮಾಡಿಸಿದ್ದಾರೆ. ಸ್ತೋತ್ರಗಳನ್ನು ನಿರರ್ಗಳವಾಗಿ ಪಠಿಸುವುದನ್ನು ಕರಗತ ಮಾಡಿಕೊಂಡಿದ್ದೇನೆ. ಇಲ್ಲಿನ ಆಚಾರ–ವಿಚಾರಗಳಿಗೆ ಮನಸೋಲದವರೇ ಇಲ್ಲ. ಸೌಹಾರ್ದ, ಸಹಬಾಳ್ವೆ, ಅತಿಥಿ ಸತ್ಕಾರ ಈ ನಾಡಿನ ವೈಶಿಷ್ಟ್ಯ’ ಎಂದು ಹೇಳಿದರು.
‘ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಸಂಸ್ಕೃತವನ್ನು ಅಧ್ಯಯನ ಮಾಡಿದೆ. ಪ್ರೊ.ಎ.ವಿಷ್ಣು ಭಟ್ ಅವರು ಸಂಸ್ಕೃತವನ್ನು ಕಲಿಸಿದರು. ಸಂಸ್ಕೃತ ಇಷ್ಟದ ವಿಷಯ. ಟೆಲ್ ಅವಿವ್ ವಿಶ್ವವಿದ್ಯಾಲಯದಲ್ಲಿ 20 ವರ್ಷಗಳಿಂದ ಸಂಸ್ಕೃತ ಬೋಧಕನಾಗಿದ್ದೇನೆ’ ಎಂದು ಸಂಸ್ಕತದೊಂದಿಗಿನ ಬೆಸುಗೆಯನ್ನು ಹಂಚಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.