ಕಡೂರು: ಬಿಸಿಲಿನ ಆರ್ಭಟ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ತಾಲ್ಲೂಕಿನಾದ್ಯಂತ ರೈತರು ತೆಂಗು, ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಕಡೂರಿನಲ್ಲಿ ಉಷ್ಣಾಂಶ 40 ಡಿಗ್ರಿ ಸಮೀಪದಲ್ಲಿದ್ದು, ಬಿಸಿಲಿನ ಝಳಕ್ಕೆ ಜನರು ಹೈರಾಣಾಗಿದ್ದಾರೆ.
ರೈತರಿಗೆ ತೋಟಗಾರಿಕೆ ಬೆಳೆಗಳಿಂದ ಫಸಲು ಬಾರದಿದ್ದರೂ ಬೇಡ, ಗಿಡವಾದರೂ ಉಳಿದುಕೊಳ್ಳಲಿ ಎಂಬ ಚಿಂತೆ ಕಾಡುತ್ತಿದೆ. ಮಳೆ ಬಾರದಿದ್ದರೆ ಮುಂದಿನ 15 - 20 ದಿನಗಳಲ್ಲಿ ಹೊಸದಾಗಿ ನಾಟಿ ಮಾಡಿದ ಅಡಿಕೆ ಗಿಡಗಳು ಒಣಗಿ ಸಾಯುತ್ತವೆ. ತಾಲ್ಲೂಕಿನಾದ್ಯಂತ 3,500 ಎಕರೆ ಪ್ರದೇಶದಲ್ಲಿ ಸುಮಾರು 18 ಲಕ್ಷಕ್ಕೂ ಹೆಚ್ಚು ಹೆಚ್ಚು ಅಡಿಕೆ ಗಿಡಗಳನ್ನು ಹೊಸದಾಗಿ ನಾಟಿ ಮಾಡಲಾಗಿದೆ. ರೈತರು ಅಡಿಕೆ- ತೆಂಗು ಉಳಿಸಲು ಶ್ರಮ ಪಡುತ್ತಿದ್ದರೆ, ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಹೆಚ್ಚುತ್ತಿದೆ.
ಗ್ರಾಮೀಣ ಭಾಗದಲ್ಲಿ ವಾಡಿಕೆಯಂತೆ ರೈತರು ನೋಡುವುದು ಮಳೆ ನಕ್ಷತ್ರಗಳನ್ನು. ಏಪ್ರಿಲ್ 14 ರಿಂದ ಆರಂಭವಾದ ವರ್ಷದ ಮೊದಲ ಮಳೆ ಅಶ್ವಿನಿ ಪೂರ ಕೈಕೊಟ್ಟಿತು. ಏಪ್ರಿಲ್ 28 ರಿಂದ ಭರಣಿ ಮಳೆ ಆರಂಭವಾಗಿದೆ. ಭರಣಿ ಮಳೆ ಬಂದರೆ ಧರಣಿ ಹಸಿರಾಗುತ್ತದೆ ಎಂಬದು ನಾಣ್ಣುಡಿ.
ಎರಡು ವರ್ಷಗಳ ಹಿಂದಷ್ಟೇ ಎರಡು ಎಕರೆ ಅಡಿಕೆ ಹಾಕಿದ್ದು ಚೆನ್ನಾಗಿ ಬೆಳೆದಿವೆ. ಈಗ ನೀರಿನ ಕೊರತೆಯಾಗಿದೆ. ಮಳೆ ಬಾರದಿದ್ದರೆ ಅಡಿಕೆ ಉಳಿಯುವುದಿಲ್ಲ.ಶಂಕರಾನಾಯ್ಕ.ಎಂ.ಕೋಡಿಹಳ್ಳಿ.
ಆದಷ್ಟು ಬೇಗ ಮಳೆ ಬಾರದಿದ್ದರೆ ಅಡಿಕೆ ಸೇರಿದಂತೆ ತೋಟಗಾರಿಕೆ ಬಳೆಗಳಿಗೆ ತೊಂದರೆ ಖಚಿತ.ಕೆ.ಪಿ. ಜಯದೇವ್ ಹಿರಿಯ ಸಹಾಯಕ ನಿರ್ದೇಶಕರು. ತೋಟಗಾರಿಕೆ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.