ADVERTISEMENT

ಹೂತಿದ್ದ ಶವ ಹೊರತೆಗೆದು ಸುಟ್ಟರು!

ಶಿವನಿ ಹೋಬಳಿಗೆ ಜಲ ಕಂಟಕ: ಅಡಿಕೆ ತೋಟ ಉಳಿಸಲು ರೈತರ ಪರದಾಟ

​ಪ್ರಜಾವಾಣಿ ವಾರ್ತೆ
Published 17 ಮೇ 2024, 19:10 IST
Last Updated 17 ಮೇ 2024, 19:10 IST
ಶಿವನಿ ಗ್ರಾಮದ ಹೊರ ವಲಯದಲ್ಲಿ ಹೂತಿದ್ದ ಶವ ಮೇಲೆತ್ತಿ ಸುಡಲಾಗಿದೆ
ಶಿವನಿ ಗ್ರಾಮದ ಹೊರ ವಲಯದಲ್ಲಿ ಹೂತಿದ್ದ ಶವ ಮೇಲೆತ್ತಿ ಸುಡಲಾಗಿದೆ   

ಚಿಕ್ಕಮಗಳೂರು: ಅಜ್ಜಂಪುರ ತಾಲ್ಲೂಕಿನ ಶಿವನಿ ಹೋಬಳಿಯಲ್ಲಿ ಮಳೆ ಬಾರದೆ ಅಡಿಕೆ ಬೆಳೆ ಹಾಳಾಗುತ್ತಿದ್ದು, ಅಡಿಕೆ ತೋಟ ಉಳಿಸಿಕೊಳ್ಳಲು ರೈತರು ಶತ ಪ್ರಯತ್ನ ನಡೆಸುತ್ತಿದ್ದಾರೆ. ದೇವರ ಪೂಜೆ, ಪರಿಷೆಗಳನ್ನು ಮಾಡಿದರೂ ಮಳೆ ಬಾರದಿರುವುದರಿಂದ ಸ್ಮಶಾನದಲ್ಲಿ ಹೂತಿದ್ದ ಶವಗಳನ್ನು ಗುಂಡಿಯಿಂದ ಹೊರತೆಗೆದು ಸುಟ್ಟಿದ್ದಾರೆ.

‘ಸೀಮೆ ಕೆಟ್ಟರೂ ಶಿವನಿ ಕೆಡದು’ ಎಂಬ ಮಾತು ಈ ಭಾಗದಲ್ಲಿ ಜನಜನಿತ ವಾಗಿದೆ. ಇದೇ ಮೊದಲ ಬಾರಿಗೆ ಹೋಬಳಿಗೆ ಬರಗಾಲ ಅಪ್ಪಳಿಸಿದೆ.

ಹೊಲ ಗದ್ದೆಗಳೆಲ್ಲವೂ ಅಡಿಕೆ ತೋಟವಾಗಿ ಪರಿವರ್ತನೆಗೊಂಡಿದ್ದು, ಪ್ರತಿ ಜಮೀನಿಗೆ ಎರಡು–ಮೂರರಂತೆ ಕೊಳವೆ ಬಾವಿಗಳಿವೆ. ಸುತ್ತಮುತ್ತ ಇರುವ ಕೆರೆ–ಕಟ್ಟೆಗಳು ಬರಿದಾದ ಬಳಿಕ ಕೊಳವೆ ಬಾವಿಗಳೂ ಬರಿದಾದವು. ಮಾರ್ಚ್‌ ಮತ್ತು ಏಪ್ರಿಲ್ ತಿಂಗಳಿನಲ್ಲಿ ಸಂಪೂರ್ಣ ಬಿಸಿಲು ಮತ್ತು ಬಿಸಿಗಾಳಿಯಿಂದ ಜನ ಕಂಗೆಟ್ಟಿದ್ದರು. ಅಡಿಕೆ ತೋಟಗಳು ಕಂದು ಬಣ್ಣಕ್ಕೆ ತಿರುಗಿವೆ.

ADVERTISEMENT

ಕೊಳವೆ ಬಾವಿಗಳನ್ನು ಕೊರೆಸಿ ಹೈರಾಣಾದ ಬಳಿಕ ತೋಟಗಳಿಗೆ ಟ್ಯಾಂಕರ್ ಮೂಲಕ ನೀರು ಹರಿಸಲು ಮುಂದಾದರು. ಅಲ್ಪ–ಸ್ವಲ್ಪ ನೀರಿರುವ ಕೊಳವೆ ಬಾವಿಗಳನ್ನು ತಡಕಿ ತೋಟಗಳಿಗೆ ನೀರುಣಿಸಿದರು. ಬಿರು ಬೇಸಿಗೆಗೆ ಟ್ಯಾಂಕರ್ ನೀರು ಯಾವುದಕ್ಕೂ ಸಾಲದಾಯಿತು.

ಮೇ ತಿಂಗಳಲ್ಲಿ ವಿವಿಧೆಡೆ ಪೂರ್ವ ಮುಂಗಾರು ಆರಂಭವಾದರೂ ಈ ಹೋಬಳಿಗೆ ಮಳೆ ಹನಿಯಲಿಲ್ಲ. ಶಿವನಿ, ಚೀರನಹಳ್ಳಿ, ದಂದೂರು, ಜಲದೀಹಳ್ಳಿ, ಚಿಕ್ಕಾನವಂಗಲ, ಕಲ್ಲೇನಹಳ್ಳಿ, ಬುಕ್ಕಾಂಬುದಿ ಸುತ್ತಮತ್ತ ಮೇ 15 ಕಳೆದರೂ ಮಳೆ ಬರಲಿಲ್ಲ. ಇದರಿಂದ ಕಂಗೆಟ್ಟ ರೈತರು ಸುತ್ತಮುತ್ತಲ ದೇವರುಗಳ ಮೊರೆ ಹೋದರು. ಪೂಜೆ, ಪುನಸ್ಕಾರಗಳು ನಡೆಸಿ ಮಳೆಗಾಗಿ ಕೋರಿದರು.

ಅಂತಿಮವಾಗಿ ಗ್ರಾಮದ ದೇವಸ್ಥಾನಗಳಲ್ಲಿ ಅಪ್ಪಣೆ ಕೇಳಿ ಪಂಚಾಯಿತಿ ನಡೆಸಿ, ತೊನ್ನು ಇರುವ ಶವಗಳನ್ನು ಹೊರ ತೆಗೆದು ಸುಡುತ್ತಿದ್ದಾರೆ. ಜಲದಿನ ಹಳ್ಳಿಯ ಸ್ಮಶಾನದಲ್ಲಿ ರಾತ್ರೋರಾತ್ರಿ ಐದಾರು ಶವಗಳನ್ನು ಮೇಲೆತ್ತಿ ಅಗ್ನಿಸ್ಪರ್ಶ ಮಾಡಿದ್ದಾರೆ. ಶಿವನಿ ಗ್ರಾಮದ ಹೊರ ವಲಯದಲ್ಲಿ ಹೂತಿದ್ದ ಮಹಿಳೆಯ ಶವವನ್ನು  ಗುರುವಾರ ಹೊರ ತೆಗೆದು ಪಕ್ಕದಲ್ಲೆ ಅಗ್ನಿ ಸ್ಪರ್ಶ ಮಾಡಿದ್ದಾರೆ.

‘ತೊನ್ನಿರುವ ವ್ಯಕ್ತಿಯ ಶವ ಹೂತಿದ್ದರೆ ಮಳೆ ಬರುವುದಿಲ್ಲವೆಂಬ ನಂಬಿಕೆ ಬೇರೂರಿದೆ. ಅಂತಹ ಶವ ಹೊರ ತೆಗೆದು ಸುಟ್ಟ ಬಳಿಕ ಮಳೆ ಬಂದಿದೆ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಸ್ಥಳೀಯರು ಹೇಳುತ್ತಾರೆ.

ಕಾಕತಾಳೀಯ ಎಂಬಂತೆ, ತೊನ್ನಿದ್ದ ಶವ ಹೊರತೆಗೆದು ಸುಟ್ಟ ಬಳಿಕ ಮಳೆಯಾಗಿದೆ. ಶಿವನಿಯಲ್ಲಿ ಗುರುವಾರ ಸಂಜೆ ವೇಳೆಗೆ ಮಳೆ ಬಂದಿದೆ.

‘ತನಿಖೆ ವೇಳೆ ಮಾತ್ರ ನ್ಯಾಯಾಲಯಗಳ ಅನುಮತಿ ಪಡೆದು ಶವವನ್ನು ಗುಂಡಿಯಿಂದ ಹೊರ ತೆಗೆಯಲು ಅವಕಾಶ ಇದೆ. ಬೇಕೆಂದಾಗ ಶವ ಮೇಲೆತ್ತುವುದು ಅಪರಾಧ’ ಎನ್ನುತ್ತಾರೆ ಕಾನೂನು ಪರಿಣತರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.