ADVERTISEMENT

ಆನೆಯ ಮೃತದೇಹ ನೋಡಲು ಬಂದ ಗಜಪಡೆ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 18:42 IST
Last Updated 28 ಅಕ್ಟೋಬರ್ 2024, 18:42 IST
ಆನೆಯ ಮೃತದೇಹದ ಮುಂದೆ ನಿಂತಿರುವ ಕಾಡಾನೆಗಳ ಹಿಂಡು
ಆನೆಯ ಮೃತದೇಹದ ಮುಂದೆ ನಿಂತಿರುವ ಕಾಡಾನೆಗಳ ಹಿಂಡು   

ಚಿಕ್ಕಮಗಳೂರು: ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮೃತಪಟ್ಟಿದ್ದ ಆನೆಯ ಮೃತದೇಹ ನೋಡಲು ಗಜಪಡೆಯೇ ನೆರೆದಿದ್ದ ಮನಕಲಕುವ ದೃಶ್ಯ ಅರಣ್ಯ ಇಲಾಖೆ ಇರಿಸಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇತ್ತೀಚೆಗೆ ಆನೆಯೊಂದು ಸಹಜವಾಗಿ ಮೃತಪಟ್ಟಿತ್ತು. ಅದರ ಮೃತದೇಹ ಹೇಗೆ ಕೊಳೆಯಲಿದೆ, ಯಾವ ಯಾವ ಪ್ರಾಣಿ, ಪಕ್ಷಿಗಳು ಭಕ್ಷಣೆ ಮಾಡಲಿವೆ ಎಂಬುದನ್ನು ತಿಳಿಯಲು ಅಧ್ಯಯನದ ದೃಷ್ಟಿಯಿಂದ ವನ್ಯಜೀವಿ ವಿಭಾಗದ ಅಧಿಕಾರಿಗಳು ಕ್ಯಾಮೆರಾ ಅಳವಡಿಕೆ ಮಾಡಿದ್ದರು.

17 ಆನೆಗಳ ಹಿಂಡು ಬಂದು ಮೃತದೇಹದ ಬಳಿ ಸಂತಾಪ ಸೂಚಿಸುವ ರೀತಿಯಲ್ಲಿ ನಿಂತಿರುವುದು ಸೆರೆಯಾಗಿದೆ. ಬಳಿಕ ಚಿರತೆ, ಕಾಡುಹಂದಿ ಕೂಡ ಆನೆಯ ಮೃತದೇಹ ತಿಂದಿರುವುದು ಸೆರೆಯಾಗಿದೆ.

ADVERTISEMENT

ಈ ರೀತಿಯ ಹಲವು ವೈಜ್ಞಾನಿಕ ಅಧ್ಯಯನಗಳನ್ನು ಭದ್ರಾ ವನ್ಯಜೀವಿ ವಿಭಾಗದಲ್ಲಿ ಮಾಡಲಾಗುತ್ತಿದೆ. ಭದ್ರಾ ಅರಣ್ಯದಲ್ಲಿ ಮುತ್ತುಗದ  ಮರಗಳು ಸಾಮಾನ್ಯವಾಗಿ ಜನವರಿ, ಫೆಬ್ರುವರಿ ಮತ್ತು ಮಾರ್ಚ್‌ನಲ್ಲಿ ಹೂವು ಬಿಡುತ್ತವೆ. ಆದರೆ, ಕಳೆದ ವರ್ಷ ನವೆಂಬರ್‌ನಲ್ಲೇ ಹೂವು ಅರಳಿರುವುದು ಗೊತ್ತಾಗಿದೆ.  ಹವಾಮಾನ ಬದಲಾವಣೆ ಆಗುತ್ತಿರುವುದಕ್ಕೆ ಇದು ಸಾಕ್ಷಿಯಾಗಿದೆ. ಈ ರೀತಿಯ ಹಲವು ವೈಜ್ಞಾನಿಕ ಅಧ್ಯಯನಗಳು ವನ್ಯಜೀವಿ ವಿಭಾಗದಲ್ಲಿ ನಡೆಯುತ್ತಿದೆ ಎಂದು ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಕ್ಷೇತ್ರ ನಿರ್ದೇಶಕ ಯಶಪಾಲ್ ಕ್ಷೀರಸಾಗರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.