ADVERTISEMENT

ಆದಿವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆಯೂ ಗಗನ ಕುಸುಮ

ವಿಜಯಕುಮಾರ್ ಎಸ್.ಕೆ.
Published 26 ನವೆಂಬರ್ 2024, 0:22 IST
Last Updated 26 ನವೆಂಬರ್ 2024, 0:22 IST
<div class="paragraphs"><p>ಅರಣ್ಯವಾಸಿಗಳು</p></div>

ಅರಣ್ಯವಾಸಿಗಳು

   

ಚಿಕ್ಕಮಗಳೂರು: ಆದಿವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆ ಗಗನ ಕುಸುಮವಾಗಿದೆ. ಗೋಮಾಳ, ಡೀಮ್ಡ್(ಪರಿಭಾವಿತ) ಅರಣ್ಯ ಗೊಂದಲದಲ್ಲಿ ಆದಿವಾಸಿಗಳು ಅತಂತ್ರರಾಗಿದ್ದಾರೆ. ಸಾವಿರಾರು ಎಕರೆ ಹೊಂದಿದವರು ಭೂ ಮಾಲೀಕರು ಒಂದೆಡೆಯಿದ್ದರೆ, ತಾವಿರುವ ಮನೆಯ ತಳಪಾಯವೇ ಅವರ ಹೆಸರಿನಲ್ಲಿ ಇಲ್ಲದ ಕುಟುಂಬಗಳು ಮತ್ತೊಂದೆಡೆ ಇವೆ.

ಕಾಫಿ ಬೆಳೆಯನ್ನು ಕಡಿಮೆ ವಿಸ್ತೀರ್ಣದಲ್ಲಿ ಸಾಗುವಳಿ ಮಾಡುವುದು ಆರ್ಥಿಕವಾಗಿ ಲಾಭದಾಯಕವಲ್ಲ ಎಂಬ ಕಾರಣಕ್ಕೆ ಭೂಸುಧಾರಣಾ ಕಾಯ್ದೆಯಿಂದ ಪ್ಲಾಂಟೇಷನ್‌ ಬೆಳೆಗಳಿಗೆ ವಿನಾಯಿತಿ ನೀಡಲಾಗಿದೆ. ಕಾಫಿ ಕಾಯ್ದೆ ಪ್ರಕಾರ ಕಾಫಿ ತೋಟಗಳನ್ನು ಕೈಗಾರಿಕೆ ಎಂದು ಪರಿಗಣಿಸಲಾಗಿದೆ. ಒಬ್ಬ ವ್ಯಕ್ತಿ (ಎಸ್ಟೇಟ್‌ ಕಂಪನಿ) 4 ಸಾವಿರ ಎಕರೆ ತನಕ ಭೂಮಿ ಹೊಂದಿದ್ದರೆ, ಉಳಿದ ಮಲೆನಾಡಿನ ಜನ ಭೂರಹಿತರಾಗಿದ್ದಾರೆ. 

ADVERTISEMENT

ನಕ್ಸಲ್ ಚಳವಳಿ ಮಲೆನಾಡಿನಲ್ಲಿ ತೀವ್ರಗೊಳ್ಳಲು ಭೂಮಿಯ ಅಸಮಾನ ಹಂಚಿಕೆಯೂ ಕಾರಣವಾಗಿತ್ತು. ಸಾವಿರಾರು ಎಕರೆ ಜಮೀನು ಹೊಂದಿದವರು ಒಂದೆಡೆಯಾದರೆ, ಒಂದು ಗುಂಟೆ ಜಮೀನು ಕೂಡ ತಮ್ಮ ಹೆಸರಿನಲ್ಲಿ ಇಲ್ಲದ ಲಕ್ಷಾಂತರ ಕುಟುಂಬಗಳಿವೆ. ಸಮಾನವಾಗಿ ಭೂಮಿ ಹಂಚಿಕೆಯಾಗಬೇಕು, ಭೂಸುಧಾರಣೆ ಕಾಯ್ದೆಯನ್ನು ಮಲೆನಾಡಿಗೂ ಅನ್ವಯ ಮಾಡಬೇಕು ಎಂಬುದು ನಕ್ಸಲ್ ಚಳವಳಿಯ ಪ್ರಮುಖ ಬೇಡಿಕೆಯಾಗಿತ್ತು.

ಆ ನಂತರ ಪಾರಂಪರಿಕ ಅರಣ್ಯವಾಸಿಗಳನ್ನು ಕಾಡಿನಲ್ಲೇ ಉಳಿಸಲು 2006ರಲ್ಲಿ ಪರಿಶಿಷ್ಟ ಬುಡಕಟ್ಟಗಳು ಮತ್ತು ಪಾರಂಪರಿಕ ಅರಣ್ಯವಾಸಿಗಳ ಕಾಯ್ದೆಯನ್ನು ಜಾರಿಗೆ ತರಲಾಯಿತು. ಇದರ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಆದಿವಾಸಿಗಳಲ್ಲಿ ಶೇ 75ರಷ್ಟು ಜನರಿಗೆ ಹಕ್ಕು ದೊರೆತಿಲ್ಲ. 

ಅರಣ್ಯ ಹಕ್ಕು ಕಾಯ್ದೆಯಡಿ 10 ಎಕರೆ ತನಕ ಹಕ್ಕು ಪಡೆಯಲು ಕಾಯ್ದೆಯಲ್ಲಿ ಅವಕಾಶ ಇದೆ. ಆದರೆ, ಬಹುತೇಕರಿಗೆ 5 ಗುಂಟೆಯಿಂದ 10 ಗುಂಟೆಯಷ್ಟೇ ದೊರೆತಿದೆ. ಶ್ರೀಮಂತರಿಗೆ ಸಾವಿರ ಸಾವಿರ ಎಕರೆ ತನಕ ಜಮೀನು ನೀಡುವಾಗ ಇಲ್ಲದ ಕಾನೂನುಗಳು, ಆದಿವಾಸಿಗಳಿಗೆ ಭೂಮಿ ನೀಡುವಾಗ ಬರುತ್ತವೆ ಎಂಬುದು ಅವರ ಅಳಲು.

‘ಕಂದಾಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಆದಿವಾಸಿಗಳು ನಮೂನೆ 53, 57ರಲ್ಲಿ ಅರ್ಜಿ ಸಲ್ಲಿಸಿ ಮಂಜೂರಾತಿ ಕೋರಿದರೆ, ಡೀಮ್ಡ್‌ ಅರಣ್ಯ, ಅರಣ್ಯ ಇಲಾಖೆ ಸೆಕ್ಷನ್ 4 ಜಾರಿಗೊಳಿಸಿದೆ ಎಂದು ಉತ್ತರ ನೀಡಿ ತಿರಸ್ಕಾರ ಮಾಡುತ್ತಿದ್ದಾರೆ. ಅರಣ್ಯ ಹಕ್ಕು ಕಾಯ್ದೆಯಲ್ಲಿ ಅರ್ಜಿ ಸಲ್ಲಿಸಿದರೆ ಕಂದಾಯ ಇಲಾಖೆಯ ಗೋಮಾಳ ಆಗಿರುವುದರಿಂದ ಮಂಜೂರು ಮಾಡಲಾಗದು ಎಂದು ತಿರಸ್ಕಾರ ಮಾಡಲಾಗುತ್ತಿದೆ. ಈ ಜಾಗ ಸಂಪೂರ್ಣ ಅರಣ್ಯವೂ ಆಗಿಲ್ಲ, ಕಂದಾಯ ಭೂಮಿಯಾಗಿಯೂ ಉಳಿದಿಲ್ಲ. ಅರಣ್ಯ ಹಕ್ಕು ಕಾಯ್ದೆಯ ಲಾಭ ನಮಗೆ ದೊರಕುವುದು ಹೇಗೆ’ ಎಂದು ಆದಿವಾಸಿಗಳ ಪರ ಹೋರಾಟಗಾರ ಮರಿಯಪ್ಪ ಪ್ರಶ್ನಿಸುತ್ತಾರೆ.

‘ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ ಮತ್ತು ಕಳಸ ತಾಲ್ಲೂಕಿನಲ್ಲಿ ಅರಣ್ಯ ಹಕ್ಕು ಕೋರಿ ಅರ್ಜಿ ಸಲ್ಲಿಸಿದ 4 ಸಾವಿರಕ್ಕೂ ಹೆಚ್ಚು ಜನ ಭೂಮಿಗಾಗಿ ಕಾದಿದ್ದಾರೆ. ಬಹುತೇಕರಿಗೆ ತಾವಿರುವ ಮನೆಗಳ ಜಾಗದ ಹಕ್ಕುಪತ್ರವೂ ಇಲ್ಲ. ಹಕ್ಕುಪತ್ರ ಪಡೆದವರಿಗೂ ಜಮೀನಿನ ಮೇಲೆ ಸಾಲ ಪಡೆಯುವ, ಅಭಿವೃದ್ಧಿಪಡಿಸುವ ಯಾವ ಹಕ್ಕೂ ಇಲ್ಲ. ಅದು ತಮ್ಮ ನಂತರ ಬೇರೆಯವರಿಗೆ ವರ್ಗಾವಣೆಯೂ ಆಗುವುದಿಲ್ಲ. ದುಡಿದು ತಿನ್ನಲು ಮಾತ್ರ ಅವಕಾಶ ಇದೆ. ಇದು ಅರಣ್ಯ ಹಕ್ಕು ಕಾಯ್ದೆಯಲ್ಲೇ ಇದೆ’ ಎಂದು ಹೇಳಿದರು.

ಇತರ ಜಮೀನಿಗೆ ನೀಡುವಂತೆ ಎಲ್ಲಾ ರೀತಿಯ ಸೌಕರ್ಯ ದೊರಕುವಂತೆ ಸರ್ಕಾರ ಮಾಡಬೇಕು. ಕಿರುಅರಣ್ಯ ಉತ್ಪನ್ನಕ್ಕೆ ಬೆಂಬಲ ಬೆಲೆ ನೀಡಬೇಕು ಎಂಬ ಬೇಡಿಕೆಗಳನ್ನು ಸರ್ಕಾರ ಪರಿಗಣಿಸುತ್ತಿಲ್ಲ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.