ತರೀಕೆರೆ: ‘ನಾವು ವೈಜ್ಞಾನಿಕ ಯುಗದಲ್ಲಿ ಬದುಕುತ್ತಿದ್ದೇವೆ. ಭೂಮಿಯಿಂದ ದೂರವಿರುವ ಅನ್ಯಗ್ರಹಗಳಿಗೂ ಮನುಷ್ಯ ಪ್ರವೇಶಿಸುತ್ತಿರುವ ಈ ಕಾಲಘಟ್ಟದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತವಾಗಿರುವುದು ನಾಚಿಕೆಗೇಡಿನ ಸಂಗತಿ. ಗೇರಮರಡಿ ಗ್ರಾಮದಲ್ಲಿ ನಡೆದಿರುವ ಘಟನೆ ಮಾನವ ಕುಲಕ್ಕೆ ಅವಮಾನ ಮತ್ತು ಖಂಡನೀಯ’ ಎಂದು ದಲಿತ ಸಂಘಟನೆಗಳ ಸ್ವಾಭಿಮಾನಿ ಒಕ್ಕೂಟದ ಮುಖಂಡ ಪ್ರೊ.ಹರಿರಾಮ್ ಹೇಳಿದರು.
ಪಟ್ಟಣದ ಹೋಟೆಲ್ ಅರಮನೆ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು
‘ಜಾತಿ ದುರಹಂಕಾರದಿಂದ ಇಂತಹ ಘಟನೆಗಳು ನಡೆಯುತ್ತಿವೆ. ಇದು ಜಾತಿಯತೆಯ ಭಯೋತ್ಪಾದನೆ ಆಗಿದೆ. ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ತನ್ನ ಕರ್ತವ್ಯದಲ್ಲಿ ಬೇಜವ್ದಾರಿಯಿಂದ ವರ್ತಿಸಿದೆ. ತಾಲ್ಲೂಕು ಆಡಳಿತ ತನ್ನ ಹೊಣೆಗಾರಿಕೆ ಮರೆತಿದೆ. ಪೊಲೀಸರು ಆರೋಪಿಗಳನ್ನು ಬಂಧಿಸದೆ ಕರ್ತವ್ಯ ಲೋಪ ಮಾಡಿದ್ದಾರೆ. ಸಮಾಜದಲ್ಲಿರುವ ಇಂತಹ ನ್ಯೂನತೆಗಳ ಬಗ್ಗೆ ಕಾನೂನಿನ ಅರಿವು ಮೂಡಿಸಬೇಕಾದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಆರೋಪಿಸಿದರು.
ಘಟನೆ ನಡೆದ ನಂತರ ಪೊಲೀಸರು ಪರಿಶೀಲನೆ ನಡೆಸಿ ಆರೋಪಿಗಳನ್ನು ಬಂಧಿಸಬೇಕಾಗಿತ್ತು. 15 ಆರೋಪಿಗಳಲ್ಲಿ ಕೇವಲ 4 ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳನ್ನು ಬಂಧಿಸದೆ ಇರುವುದು ಅಸ್ಪೃಶ್ಯತೆಯನ್ನು ಪ್ರಚೋದಿಸಿದಂತಾಗಿದೆ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೊಣೆಗಾರಿಗೆ ಮರೆತಂತೆ ಇದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು.
ಮುಖಂಡ ಕೋದಂಡರಾಮ್ ಮಾತನಾಡಿ, ‘ಜೆಸಿಬಿ ಚಾಲಕ ಮಾರುತಿ ಮೇಲೆ ನಡೆದಿರುವ ಹಲ್ಲೆ ಅಮಾನವೀಯ. ಇಂತಹ ಕಾಲಘಟ್ಟದಲ್ಲೂ ಅಸ್ಪೃಶ್ಯತೆ ಜೀವಂತವಾಗಿರುವುದು ದುರಂತ. ಅಸ್ಪೃಶ್ಯತೆ ಕಾನೂನು ಪುಸ್ತಕದಲ್ಲಿದೆಯೇ ಹೊರತು ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿಲ್ಲ. ಕೆಲವು ಆರೋಪಿಗಳನ್ನು ಬಂಧಿಸಿ ಇನ್ನೂ ಉಳಿದವರನ್ನು ಬಂಧಿಸಿಲ್ಲ. ಪೊಲೀಸರು ಗ್ರಹಗತಿ ನೋಡುತ್ತಾ ಕುಳಿತಿದ್ದಾರೆಯೇ’ ಎಂದು ಪ್ರಶ್ನಿಸಿದರು.
ಸಮಾಜ ಕಲ್ಯಾಣ ಇಲಾಖೆ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಆರೋಪಿಗಳನ್ನು ಕೂಡಲೇ ಬಂಧಿಸಬೇಕು, ಇಲ್ಲದಿದ್ದರೆ ರಾಜ್ಯ ಚಲೋ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಡೆದ ಘಟನೆ ಬಗ್ಗೆ ಹಲ್ಲೆಗೆ ಒಳಗಾಗದ ಮಾರುತಿ, ಪರಿಶಿಷ್ಟ ಮುಖಂಡ ಸುನೀಲ್ ಸಭೆಗೆ ಮಾಹಿತಿ ನೀಡಿದರು. ಕೆ.ಸಿ.ನಾಗರಾಜು, ಚಳುವಳಿ ಕೆ. ಅಯ್ಯಪ್ಪ, ಶಂಕರ ರಾಮಲಿಂಗಯ್ಯ, ದಲಿತ ರಮೇಶ, ಟೈಗರ್ ಅರುಣ್, ಶೂದ್ರ ಶ್ರೀನಿವಾಸ್, ಕರಿಯಪ್ಪ ಗುಡಿಮನಿ, ಶಿವಪ್ರಸಾದ್, ವಕೀಲ ಚಂದ್ರಪ್ಪ, ಮುಖಂಡರಾದ ಬಾಲರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.