ADVERTISEMENT

ಕಳಸ: ಗಿರಿಜನರಿಗೆ ಭೂತಬಾಳೆ ಎಲೆ ಮನೆ ಆಸರೆ

ಗಾಳಿ ಮಳೆಗೆ ಕುಸಿದು ಬಿದ್ದ ಗುಡಿಸಲು; ಸಹೋದರಿ ಮನೆಯಲ್ಲಿ ತಾತ್ಕಾಲಿಕ ವಾಸ

ರವಿ ಕೆಳಂಗಡಿ
Published 9 ಜುಲೈ 2024, 7:34 IST
Last Updated 9 ಜುಲೈ 2024, 7:34 IST
ಕಳಸ ತಾಲ್ಲೂಕಿನ ಕಾರ್ಲೆ ಸಮೀಪದ ಜೇಡಿಕೊಂಡದಲ್ಲಿ ನೆಲಸಮ ಆದ ಗುಡಿಸಲಿನ ಅವಶೇಷದಲ್ಲಿ ತಮ್ಮ ದಿನಬಳಕೆಯ ವಸ್ತುಗಳನ್ನು ಶೇಷ ದಂಪತಿ ಹುಡುಕುತ್ತಿರುವುದು.
ಕಳಸ ತಾಲ್ಲೂಕಿನ ಕಾರ್ಲೆ ಸಮೀಪದ ಜೇಡಿಕೊಂಡದಲ್ಲಿ ನೆಲಸಮ ಆದ ಗುಡಿಸಲಿನ ಅವಶೇಷದಲ್ಲಿ ತಮ್ಮ ದಿನಬಳಕೆಯ ವಸ್ತುಗಳನ್ನು ಶೇಷ ದಂಪತಿ ಹುಡುಕುತ್ತಿರುವುದು.   

ಕಳಸ: ವಾಸವಾಗಿದ್ದ ಗುಡಿಸಲು ಕುಸಿದು ಬಿದ್ದ ಪರಿಣಾಮ ಕಾರ್ಲೆ ಗ್ರಾಮದ ಗಿರಿಜನ ಕುಟುಂಬವೊಂದು ಬೇರೊಬ್ಬರ ಗುಡಿಸಿಲಿನಲ್ಲಿ ಆಶ್ರಯ ಪಡೆಯುವ ಅನಿವಾರ್ಯತೆ ಸ್ಥಿತಿಗೆ ಒಳಗಾಗಿದ್ದಾರೆ.

ಕಳಸ ತಾಲ್ಲೂಕು ಸಂಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳಕೋಡು ಸಮೀಪದ ಕಾರ್ಲೆಯ ಜೇಡಿಕೊಂಡದ ಗಿರಿಜನ ಸಮುದಾಯದ ಶೇಷ ಅವರ ಗುಡಿಸಲು ಕಳೆದ ವಾರ ಭಾರಿ ಗಾಳಿ ಮಳೆಗೆ ನೆಲಸಮ ಆಗಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲವೂ ಕೆಸರಿನಡಿ ಸೇರಿವೆ. ಕೆಲವು ವಸ್ತುಗಳನ್ನು ಕೆಸರಿನಿಂದ ತೆಗೆದಿದ್ದಾರೆ. ನಂತರ ಸಮೀಪದಲ್ಲೇ ಇರುವ ಶೇಷ ಅವರ ಸಹೋದರಿ ಶಾರದಾ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.

ಶಾರದಾ ಅವರ ಗುಡಿಸಲಿಗೆ ಭೂತಬಾಳೆ ಎಂಬ ದಪ್ಪ ಎಲೆಗಳೇ ಶಾರದಾ ಅವರ ಮನೆಯ ಆಧಾರ. ಈ ಮನೆ ಯಾವಾಗ ನೆಲಸಮ ಆಗುವುತ್ತದೆಯೋ ಎಂಬ ಆತಂಕ ಎರಡೂ ಕುಟುಂಬಗಳನ್ನು ಕಾಡುತ್ತಿದೆ.

ADVERTISEMENT

'ಸರ್ಕಾರದಿಂದ ಯಾವ ಸೌಲಭ್ಯವೂ ಸಿಗಲಿಲ್ಲ. ಕೊಟ್ಟ ಅರ್ಜಿಗಳಿಗೆ ಲೆಕ್ಕವೇ ಇಲ್ಲ. ಹೋದ ವರ್ಷ ಯಾರೋ ಬಂದು ನೋಡಿಕೊಂಡು ಹೋದ್ರು. ಆಮೇಲೆ ಪತ್ತೆಯೇ ಇಲ್ಲ. ಹುಷಾರು ತಪ್ಪಿದರೆ ಜೋಳಿಗೆ ಕಟ್ಟಿಕೊಂಡು 4 ಕಿಮೀ ಹೋಬೇಕು' ಎಂದು ಶಾರದಾ ಹೇಳುತ್ತಾರೆ.

ಶೇಷ ಅವರಿಗೆ ಮನೆ ಮಂಜೂರಾಗಿ ವರ್ಷಗಳೇ ಕಳೆದಿವೆ. ಅಡಿಪಾಯ ಮಾಡಿಕೊಂಡು ಒಂದು ಕಂತಿನ ಅನುದಾನ ಪಡೆದುಕೊಂಡಿದ್ದಾರೆ. ಆನಂತರ ಕಾಮಗಾರಿ ಮುಂದುವರಿಸಲಿಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ರವಿಕುಮಾರ್ ಸ್ಪಷ್ಟಪಡಿಸಿದರು.

ಶೇಷ ಅವರ ಇಬ್ಬರು ಸೋದರರು ಹಾಗೂ ಸಹೋದರಿ ಅವಿವಾಹಿತರು. ಎಲ್ಲರ ಹೆಸರು ಒಂದೇ ರೇಷನ್ ಕಾರ್ಡಿನಲ್ಲಿ ಇದೆ. ಆದ್ದರಿಂದ ಅವರನ್ನು ಬೇರೆ ಕುಟುಂಬ ಎಂದು ಪರಿಗಣಸಿ ಬೇರೆ ಮನೆಗೆ ಅನುದಾನ ನೀಡಲು ಸಾಧ್ಯ ಆಗಿಲ್ಲ ಎಂದು ಅವರು ತಿಳಿಸಿದರು.

ಗುಡಿಸಲು ಬಿದ್ದ ಸ್ಥಳಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೇಣಿಕ ಭೇಟಿ ನೀಡಿದ್ದಾರೆ. ಈ ಕುಟುಂಬಗಳ ಸಂಕಷ್ಟದ ಬಗ್ಗೆ ಶಾಸಕರ ಗಮನ ಸೆಳೆದು ರೇಷನ್ ಕಾರ್ಡ್ ಮತ್ತು ಮನೆಗೆ ಅನುದಾನ ಕೊಡಿಸುವುದಾಗಿ ಅವರು ತಿಳಿಸಿದ್ದಾರೆ. 

ಶೇಷ ಅವರ ಕುಟುಂಬಕ್ಕೆ ಆಸರೆ ನೀಡಿರುವ ಶಾರದಾ ಅವರ ಭೂತಬಾಳೆ ಎಲೆಗಳ ಗೋಡೆ ಇರುವ ಗುಡಿಸಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.