ನರಸಿಂಹರಾಜಪುರ: ಕನ್ನಡ ಭಾಷೆ ಉಳಿಸಿ–ಬೆಳೆಸಲು ಆಟೊ ಚಾಲಕರ ಪಾತ್ರ ಪ್ರಮುಖವಾಗಿದೆ ಎಂದು ಸಬ್ ಇನ್‌ಸ್ಪೆಕ್ಟರ್ ನಿರಂಜನಗೌಡ ಹೇಳಿದರು.
ಪಟ್ಟಣದ ಜೈ ಭುವನೇಶ್ವರಿ ಆಟೊ ಚಾಲಕರು ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ಶನಿವಾರ ಆಯೋಜಿಸಿರುವ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಆಟೊ ಚಾಲಕರು ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಿಸುವುದಲ್ಲದೇ ಸದಾ ಕನ್ನಡ ಭಾಷೆಯಲ್ಲಿ ಮಾತನಾಡಿ ಕನ್ನಡ ಭಾಷೆಗೆ ಗೌರವ ನೀಡುತ್ತಾರೆ. ಪ್ರತಿ ಆಟೊ ಚಾಲಕರು ಹಾಗೂ ಇತರ ವಾಹನ ಚಾಲಕರು ವಾಹನದ ದಾಖಲೆಗಳ ಪ್ರತಿಯನ್ನು ತಮ್ಮಲ್ಲಿ ಇಟ್ಟುಕೊಳ್ಳಬೇಕು ಹಾಗೂ ವಾಹನ ವಿಮೆ ಮಾಡಿಸಬೇಕು ಎಂದರು.
ಪಟ್ಟಣ ಪಂಚಾಯಿತಿ ಸದಸ್ಯೆ ಜುಬೇದಾ, ಜೈ ಭುವನೇಶ್ವರಿ ಆಟೊ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿ. ಮಧುಸೂದನ್, ಗೌರವ ಅಧ್ಯಕ್ಷ ಅಣ್ಣಪ್ಪ, ಎಚ್.ಡಿ.ಎಫ್.ಸಿ ಬ್ಯಾಂಕ್ ವ್ಯವಸ್ಥಾಪಕಿ ರಶ್ಮಿ, ಗೂಡ್ಸ್ ಆಟೊ ಚಾಲಕರ ಸಂಘದ ಅಧ್ಯಕ್ಷ ಸುನಿಲ್, ಶಿವಮೊಗ್ಗ ರೆಡ್‌ಕ್ರಾಸ್ ಸಂಸ್ಥೆಯ ಮುಖ್ಯಸ್ಥ ದಿನಕರ್, ಅಭಿನವ ಪ್ರತಿಭಾ ವೇದಿಕೆ ಅಧ್ಯಕ್ಷ ಅಭಿನವ ಗಿರಿರಾಜ್, ಶಾಮಿಯಾನ ಸೌಂಡ್ ಸಿಸ್ಟಮ್ ಸಂಘದ ಅಧ್ಯಕ್ಷ ಬಾಬು ಇದ್ದರು.
ನಂತರ ಆಟೊ ಸಂಘದವರು ಕನ್ನಡಾಂಬೆಯ ಭಾವಚಿತ್ರ ಹಾಗೂ ವಿವಿಧ ಸ್ತಬ್ಧ ಚಿತ್ರದೊಂದಿಗೆ ಟಿ.ಬಿ.ಸರ್ಕಲ್‌ನಿಂದ ಬಿ.ಎಚ್.ಕೈಮರದವರೆಗೆ ಮೆರವಣಿಗೆ ನಡೆಸಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಅಭಿನವ ಪ್ರತಿಭಾ ವೇದಿಕೆ, ಶಿವಮೊಗ್ಗ ಸಂಜೀವಿನಿ ರಕ್ತನಿಧಿ ಕೇಂದ್ರ,ಜೈ ಭುವನೇಶ್ವರಿ ಆಟೊ ಚಾಲಕರ ಹಾಗೂ ಮಾಲೀಕರ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಟೊ ನಿಲ್ದಾಣದಲ್ಲಿ ರಕ್ತದಾನ ಶಿಬಿರ ನಡೆಯಿತು. 57 ಜನರು ರಕ್ತ ನೀಡಿದರು. ಅಭಿನವ ಪ್ರತಿಭಾ ವೇದಿಕೆ ಅಧ್ಯಕ್ಷ ಅಭಿನವ ಗಿರಿರಾಜ್ 102ನೇ ಬಾರಿ ರಕ್ತದಾನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.