ADVERTISEMENT

ಶುಶ್ರೂಷಕಿಯರ ಪಾತ್ರ ಮಹತ್ವದ್ದು: ಡಾ.ಮೋಹನ್‌ಕುಮಾರ್

ಪ್ಲಾರೆನ್ಸ್ ನೈಟಿಂಗೇಲ್ ಜನ್ಮದಿನಾಚರಣೆಯಲ್ಲಿ ಡಾ.ಮೋಹನ್‍ಕುಮಾರ್

​ಪ್ರಜಾವಾಣಿ ವಾರ್ತೆ
Published 18 ಮೇ 2024, 14:33 IST
Last Updated 18 ಮೇ 2024, 14:33 IST
ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಏರ್ಪಡಿಸಿದ್ದ ಶುಶ್ರೂಷಕರ ಹಬ್ಬ ಕಾರ್ಯಕ್ರಮವನ್ನು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮೋಹನ್‌ಕುಮಾರ್ ಉದ್ಘಾಟಿಸಿದರು
ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಏರ್ಪಡಿಸಿದ್ದ ಶುಶ್ರೂಷಕರ ಹಬ್ಬ ಕಾರ್ಯಕ್ರಮವನ್ನು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮೋಹನ್‌ಕುಮಾರ್ ಉದ್ಘಾಟಿಸಿದರು   

ಚಿಕ್ಕಮಗಳೂರು: ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆ ಮಾಡುವ ಮೂಲಕ ಹಗಲಿರುಳು ಶ್ರಮಿಸುವ ಶುಶ್ರೂಷಕಿಯರ ಪಾತ್ರ ಮಹತ್ವದಾಗಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮೋಹನ್‌ಕುಮಾರ್ ಹೇಳಿದರು.

ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಸರ್ಕಾರಿ ಶುಶ್ರೂಷಕರ ಸಂಘದ ವತಿಯಿಂದ ಪ್ಲಾರೆನ್ಸ್ ನೈಟಿಂಗೇಲ್ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಶುಶ್ರೂಷಕರ ಹಬ್ಬ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕೋವಿಡ್ ತಲ್ಲಣದ ಕಾಲದಲ್ಲಿ ಯೋಧರಂತೆ ದುಡಿದ ದಾದಿಯರು ನೂರಾರು ಜೀವಗಳನ್ನು ರಕ್ಷಿಸಿದ್ದಾರೆ. ಕುಟುಂಬ ಹಾಗೂ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕಾರ್ಯನಿರ್ವಹಿಸಿದ್ದಾರೆ ಎಂದು ಸ್ಮರಿಸಿದರು.

ADVERTISEMENT

ಡಾ.ಚಂದ್ರಶೇಖರ್ ಮಾತನಾಡಿ ಶುಶ್ರೂಷಕಿಯರ ವೃತ್ತಿ ನಿಜಕ್ಕೂ ಸವಾಲಿನ ಕೆಲಸ ಇದ್ದಂತೆ. ಒಬ್ಬ ರೋಗಿಗೆ ವೈದ್ಯರು ದೈಹಿಕ, ಆರೋಗ್ಯ ಸುಧಾರಣೆಗೆ ಔಷಧಿಗಳನ್ನು ನೀಡಿದರೂ ಆತನನ್ನು ಮಾನಸಿಕವಾಗಿ ಉಪಚರಿಸಿ ಸನ್ನದ್ಧಗೊಳಿಸುವಲ್ಲಿ ದಾದಿಯರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಸಂಘದ ಜಿಲ್ಲಾಧ್ಯಕ್ಷೆ ಜ್ಯೋತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವೈದ್ಯರು ರೋಗಿಯ ಪಾಲಿಗೆ ದೇವರಿದ್ದಂತೆ. ಆದರೆ ಶುಶ್ರೂಷಕರು ಆ ರೋಗಿಗಳನ್ನು ಪೋಷಿಸುವ, ತಾಯಿ ಮತ್ತು ಸಹೋದರಿಯಂತೆ. ದಾದಿಯರು ಇಲ್ಲದಿದ್ದರೆ ರೋಗಿಯ ಸ್ಥಿತಿ ಊಹಿಸಲು ಅಸಾಧ್ಯ ಎಂದರು.

ಈ ವೇಳೆ ವೈದ್ಯರಾದ ಲೋಹಿತ್‍ಕುಮಾರ್, ಡಾ.ಕಲ್ಪನಾ, ಡಾ.ಲಾವಣ್ಯ, ಸಂಘದ ಕಾರ್ಯದರ್ಶಿ ಕೆ.ಎಸ್.ರಂಗನಾಥ್, ಖಜಾಂಚಿ ಪದ್ಮಮ್ಮ, ಗೌರವಾಧ್ಯಕ್ಷೆ ಶಶಿಕಲಾವತಿ ಪಾಲ್ಗೊಂಡಿದ್ದರು.

ರೋಗಿಗಳ ಗುಣಪಡಿಸುವಲ್ಲಿ ವೈದ್ಯರಂತೆ ದಾದಿಯರ ಸೇವೆಯೂ ಮುಖ್ಯ. ದಾದಿಯರು ಸದಾ ಯಾವಾಗಲೂ ಹಸನ್ಮುಖಿಯರಾಗಿ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. -ಡಾ.ಮೋಹನ್‌ಕುಮಾರ್ ಜಿಲ್ಲಾ ಶಸ್ತ್ರಚಿಕಿತ್ಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.