ಚಿಕ್ಕಮಗಳೂರು: ಕೊಪ್ಪ ತಾಲ್ಲೂಕಿನಲ್ಲಿ ನುಗ್ಗಿ ಗ್ರಾಮ ಪಂಚಾಯಿತಿಯ ಎರಡು ಹಳ್ಳಿಗಳು ಮಂಗನ ಕಾಯಿಲೆಯ ಕೇಂದ್ರ ಬಿಂದುವಾಗಿವೆ. ಅರಣ್ಯ ಇಲಾಖೆ ಜಾಗದಲ್ಲಿದ್ದ ಮರಗಳನ್ನು ಕಡಿದಿದ್ದೇ ರೋಗ ಹರಡಲು ಕಾರಣ ಎಂಬುದು ಬಹಿರಂಗವಾಗಿದೆ.
ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ಒಟ್ಟು 26 ಪ್ರಕರಣ ಇದ್ದು, ಈ ಪೈಕಿ 24 ಪ್ರಕರಣ ಕೊಪ್ಪ ತಾಲ್ಲೂಕಿನಲ್ಲೆ ದಾಖಲಾಗಿವೆ. 79 ವರ್ಷ ವಯಸ್ಸಿನ ಒಬ್ಬರು ಮೃತಪಟ್ಟಿದ್ದು, ಉಳಿದವರು ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಇನ್ನೂ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕ್ಯಾಸನೂರು ಕಾಡಿನ ಕಾಯಿಲೆ(ಕೆಎಫ್‌ಡಿ) ಎಂದು ಕರೆಯಲಾಗುತ್ತದೆ. ಈ ಕಾಯಿಲೆ ಹರಡಿದ ಮಂಗಗಳಿಗೆ ಕಚ್ಚಿದ ಉಣ್ಣೆಗಳು ಮನುಷ್ಯರಿಗೆ ಕಚ್ಚುವುದರಿಂದ ಈ ರೋಗ ಹರಡುತ್ತಿದೆ. ಮಂಗಗಳು ಸಾಯುವುದು ಈ ರೋಗದ ಮುನ್ಸೂಚನೆ.
ಅರಣ್ಯಕ್ಕೆ ಹೋದ ಜನರಿಗೆ ಉಣ್ಣೆಗಳು ಕಚ್ಚಿದರೆ ಅವರಿಗೆ ಈ ರೋಗ ಕಾಣಿಸಿಕೊಳ್ಳುತ್ತದೆ. ಕೊಪ್ಪ ತಾಲ್ಲೂಕಿನಲ್ಲಿ ಹರಡಿರುವ ಮಂಗನ ಕಾಯಿಲೆಗೆ ಮರ ಕಡಿತವೇ ಕಾರಣ ಎಂಬುದನ್ನು ಸ್ಥಳೀಯರು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಬೇರುಕೂಡಿಗೆ ಬಳಿ ಅರಣ್ಯ ಇಲಾಖೆ ಜಾಗದಲ್ಲಿದ್ದ ಅಕೇಷಿಯಾ ಮರಗಳನ್ನು ಕಡಿದು ಸಾಗಿಸುವ ಕೆಲಸ ನಡೆಯುತ್ತಿದೆ.
ಈ ಕೆಲಸಕ್ಕೆ ವಲಸೆ ಕಾರ್ಮಿಕರು ಬಂದಿದ್ದು, ಅದೇ ಜಾಗದಲ್ಲಿ ಟೆಂಟ್ ನಿರ್ಮಿಸಿಕೊಂಡಿದ್ದಾರೆ. ಅವರಿಗೇ ಹೆಚ್ಚಿನ ಪ್ರಮಾಣದಲ್ಲಿ ಈ ಕಾಯಿಲೆ ಹರಡಿದ್ದು, ಮರ ಕಡಿದ ಸ್ಥಳದಲ್ಲಿ ಸೌದೆ ತರಲು ಹೋದ ಸ್ಥಳೀಯರಿಗೂ ಕಾಯಿಲೆ ಕಾಣಿಸಿಕೊಂಡಿದೆ. ಕಾಡು ಕಡಿದಿರುವುದು ಊರಿನಿಂದ ದೂರದ ಅರಣ್ಯದಲ್ಲಿ ಅಲ್ಲ, ಊರಿನ ಬಸ್ ನಿಲ್ದಾಣದ ಹಿಂಭಾಗ. ಆದ್ದರಿಂದ ಸ್ಥಳೀಯರು ಸೌದೆ ತರಲು ಹೋಗಿ ಕಾಯಿಲೆ ಹರಡಿಸಿಕೊಂಡಿದ್ದಾರೆ.
ರೋಗ ಹರಡುವುದು ಆರಂಭವಾದ ಬಳಿಕವೂ ಮರ ಕಡಿತಲೆ ಕೆಲಸ ನಿಂತಿಲ್ಲ. ವಲಸೆ ಕಾರ್ಮಿಕರು ಇದೇ ಕೆಲಸದಲ್ಲಿ ನಿರತವಾಗಿದ್ದು, ಇದರಿಂದ ರೋಗ ಹಲವರಿಗೆ ಹರಡುತ್ತಿರಬಹುದು ಎಂದೂ ಸ್ಥಳೀಯರು ಅನುಮಾನಪಡುತ್ತಾರೆ. ಈ ಭಾಗದಲ್ಲಿ ಮೂರು ಮಂಗಗಳು ಮೃತಪಟ್ಟಿವೆ. ಆದರೆ, ಅವುಗಳಿಗೆ ಮಂಗನ ಕಾಯಿಲೆ ಇತ್ತು ಎಂಬುದು ದೃಢವಾಗಿಲ್ಲ. ಆದರೂ, ಮಂಗನ ಕಾಯಿಲೆ ಪ್ರಕರಣ ದಿನೇ ದಿನೇ ಹೆಚ್ಚುತ್ತಲೇ ಇದೆ.
ಅರೋಗ್ಯ ಇಲಾಖೆ ಗ್ರಾಪಂನಿಂದ ಜಾಗೃತಿ
ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ಸಭೆ ನಡೆಸಿ ಕರಪತ್ರ ಹಂಚುತ್ತಿದ್ದಾರೆ. ನುಗ್ಗಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಿಗಳು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ‘ಉಣ್ಣೆಗಳ ಕಡಿತದಿಂದ ರಕ್ಷಣೆ ಪಡೆಯಲು ಬಳಸುವ ಡಿಇಪಿಎ(ಡೈಥೈಲ್ ಫೀನೈಲ್ ಅಸಿಟಮೈಡ್) ತೈಲವನ್ನು ಆರೋಗ್ಯ ಇಲಾಖೆ ವಿತರಿಸುತ್ತಿದೆ. ಜನರಲ್ಲಿ ಭಯ ಕಾಣಿಸುತ್ತಿಲ್ಲ. ತೈಲ ಸವರಿಕೊಂಡು ತೋಟದ ಕೆಲಸಕ್ಕೆ ಹೋಗುತ್ತಿದ್ದಾರೆ’ ಎಂದು ನುಗ್ಗಿ ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್ ಹೇಳಿದರು. ಮೊದಲಿಗೆ ವಿಪರೀತ ಜ್ವರ ಕಾಣಿಸಿಕೊಳ್ಳುವುದು ತಲೆನೋವು ಸೊಂಟನೋವು ಕೈಕಾಲು ನೋವು ನಿಶ್ಯಕ್ತಿ ಕಣ್ಣು ಕೆಂಪಾಗುವುದು ಈ ರೋಗದ ಲಕ್ಷಣ. ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಎರಡು ವಾರಗಳ ಬಳಿಕ ಮೂಗು ಬಾಯಿ ಮತ್ತು ಗುದದ್ವಾರದಿಂದ ರಕ್ತಸ್ತ್ರಾವವಾಗುತ್ತದೆ. ಆದ್ದರಿಂದ ಕೂಡಲೇ ಪರೀಕ್ಷೆಗೆ ಒಳಪಟ್ಟು ಚಿಕಿತ್ಸೆ ಪಡೆದುಕೊಳ್ಳಬೇಕು. ನಿರ್ಲಕ್ಷ್ಯ ವಹಿಸದೆ ಮುನ್ನೆಚ್ಚರಿಕೆ ವಹಿಸಬೇಕು ಎಂಬುದು ಆರೋಗ್ಯ ಇಲಾಖೆ ಅಧಿಕಾರಿಗಳ ಸಲಹೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.