ADVERTISEMENT

ಚಿಕ್ಕಮಗಳೂರು | ನಿವಾಸಿಗಳ ನಿದ್ರೆಗೆಡಿಸಿದ ನಿರಂತರ ಕಳ್ಳತನ

ಕಲ್ಯಾಣನಗರ ಬಡಾವಣೆ ವ್ಯಾಪ್ತಿಯಲ್ಲಿ ರಾತ್ರಿ ಹೆಚ್ಚುವರಿ ಪೊಲೀಸ್ ಕಾವಲಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2024, 5:35 IST
Last Updated 8 ಜೂನ್ 2024, 5:35 IST

ಕಳ್ಳತನ ಪ್ರಕರಣದಲ್ಲಿ ನಗರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ವಶಪಡಿಸಿಕೊಂಡಿರುವ ಚಿನ್ನಾಭರಣಗಳು

ಕಳ್ಳತನ ಪ್ರಕರಣದಲ್ಲಿ ನಗರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ವಶಪಡಿಸಿಕೊಂಡಿರುವ ಚಿನ್ನಾಭರಣಗಳು

ಚಿಕ್ಕಮಗಳೂರು: ಕಲ್ಯಾಣನಗರ ಬಡಾವಣೆ ವ್ಯಾಪ್ತಿಯ ಮನೆಗಳಲ್ಲಿ ಕಳೆದ ಮೂರು ತಿಂಗಳಿನಿಂದ ಕಳ್ಳತನ ಪ್ರಕರಣಗಳು ನಿರಂತರವಾಗಿದ್ದು, ನಿವಾಸಿಗಳನ್ನು ನಿದ್ದೆಗೆಡಿಸುವಂತೆ ಮಾಡಿದೆ.

ADVERTISEMENT

ದೀರ್ಘಕಾಲ ಊರುಗಳಿಗೆ ತೆರಳುವ ಅಥವಾ ನಿತ್ಯ ಕೆಲಸಕ್ಕೆಂದು ಹೋಗುವ, ಯಾರೂ ಇಲ್ಲದ ಮನೆಗಳನ್ನೇ ಗುರಿ ಮಾಡುತ್ತಿರುವ ಕಳ್ಳರು, ಹಗಲು ರಾತ್ರಿಯ ಭಯವಿಲ್ಲದೇ ಮನೆಗೆ ನುಗ್ಗಿ ಕನ್ನ ಹಾಕುತ್ತಿದ್ದಾರೆ. ಮನೆ ಬೀಗ ಮುರಿದು ಹಣ, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಕಳೆದ ಮೂರು ತಿಂಗಳಲ್ಲಿ 10ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿವೆ.

ಕಲ್ಯಾಣನಗರ ಸುಶಿಕ್ಷಿತರೇ ಹೆಚ್ಚಾಗಿರುವ, ಸುಸ್ಸಜ್ಜಿತ ರಸ್ತೆ, ಬೀದಿ ದೀಪಗಳನ್ನು ಒಳಗೊಂಡ ವ್ಯವಸ್ಥಿತ ಬಡಾವಣೆಯಾಗಿದೆ. ಇಲ್ಲಿ ನಿತ್ಯವೂ ರಾತ್ರಿ ಪೊಲೀಸ್ ಕಾವಲು ಇದ್ದರೂ, ಇತ್ತೀಚಿನ ಮನೆ ಕಳ್ಳತನದ ಘಟನೆಗಳು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿವೆ. ಸಾಮಾನ್ಯವಾಗಿ ಬೆಳಿಗ್ಗೆ ಸಮಯದಲ್ಲಿ ಕಸ ಆಯುವುದು ಅಥವಾ ಭಿಕ್ಷಾಟನೆ ನೆಪದಲ್ಲಿ ಮನೆ– ಮನೆ ಸುತ್ತುವ ಕಳ್ಳರು, ಮನೆಯಲ್ಲಿ ಯಾರು ಇಲ್ಲದ್ದನ್ನು ಖಾತ್ರಿ ಪಡಿಸಿಕೊಂಡು ಮನೆಯೊಳಗೆ ನುಗ್ಗುತ್ತಿದ್ದಾರೆ.  ಹಣ ಹಾಗೂ ಅಧಿಕ ಮೌಲ್ಯದ ವಸ್ತ್ರ, ಚಿನ್ನಾಭರಣಗಳನ್ನು ಕದಿಯುತ್ತಿದ್ದಾರೆ.

‘ಮೇ ತಿಂಗಳಲ್ಲಿ ಮನೆಯವರಿಗೆ ಅನಾರೋಗ್ಯದ ಕಾರಣ ಬೆಂಗಳೂರಿನ ಆಸ್ಪತ್ರೆಗೆ ಹೋಗಿದ್ದೆ. 2 ದಿನಗಳ ಬಳಿಕ ವಾಪಸ್ ಬಂದಾಗ ರಾತ್ರಿ ವೇಳೆ ಕಳ್ಳರು ಮನೆ ಬಾಗಿಲಿನ ಬೀಗ ಮುರಿದು ಬೀರುವಿನಲ್ಲಿದ್ದ ನಗದು, ಚಿನ್ನ, ಬೆಳ್ಳಿ ಸಾಮಗ್ರಿಗಳು ಸೇರಿ ₹13 ಲಕ್ಷ ಮೌಲ್ಯದ ಸ್ವತ್ತುಗಳನ್ನು ಕಳವು ಮಾಡಿದ್ದರು. ಕಳ್ಳರ ಪತ್ತೆ ಹಚ್ಚುವಂತೆ ಕೋರಿ ನಗರ ಠಾಣೆಯಲ್ಲಿ ದೂರು ನೀಡಿದ್ದೇವೆ’ ಎಂದು ಕಲ್ಯಾಣನಗರ ವಾಸಿ ತಾರಾನಾಥ್ ಹೇಳಿದರು.

‘ಇತ್ತೀಚಿಗೆ ಮನೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ನಗರಕ್ಕೆಂದು ಹೋಗಿದ್ದಾಗ ಮಧ್ಯಾಹ್ನದ ಸಮಯದಲ್ಲೇ ನನ್ನ ಮನೆಯ ಹಿಂಬಾಗಿಲಿನ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದರು. ಮನೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿರಲಿಲ್ಲ. ಠಾಣೆಗೆ ದೂರು ನೀಡಿದಾಗ ಪೊಲೀಸರು ಕಳ್ಳನನ್ನು ಪತ್ತೆ ಹಚ್ಚಿದ್ದರು’ ಎಂದು ಕಲ್ಯಾಣ ನಗರದ ನಾಲ್ಕನೇ ಹಂತದ ನಿವಾಸಿ ರಾಮಚಂದ್ರಪ್ಪ ವಿವರಿಸಿದರು.

ಪೊಲೀಸ್ ಇಲಾಖೆಯಿಂದ ನಗರದ ಬಡಾವಣೆಗಳಲ್ಲಿ ಕಳ್ಳತನದ ಕುರಿತು ಕರಪತ್ರ ಹಂಚಿ ಜಾಗೃತಿ ಮೂಡಿಸಲಾಗಿದೆ. ಮನೆಯ ಎದುರು ಸಿಸಿಟಿವಿ ಕ್ಯಾಮೆರಾ ಅಳವಡಿಸಿಕೊಂಡು ಭದ್ರತೆ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಆದರೂ, ಜನತೆ ಎಚ್ಚೆತ್ತುಕೊಂಡಿಲ್ಲ. ಹಿಂದಿನ ಪ್ರಕರಣಗಳು ಸೇರಿದಂತೆ ಈವರೆಗೂ 17 ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ ₹30 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ರೇಣುಕಾಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

ರಾತ್ರಿ ಹೆಚ್ಚುವರಿ ಕಾವಲು ನಿಯೋಜನೆ

ನಗರದಲ್ಲಿ ಕಳ್ಳತನ ಪ್ರಕರಣ ತಡೆ ಸಂಬಂಧ ಡಿವೈಎಸ್ಪಿ ನೇತೃತ್ವದಲ್ಲಿ ಈಗಾಗಲೇ ಸಭೆ ನಡೆಸಲಾಗಿದೆ. ನಿತ್ಯ ರಾತ್ರಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಕಾವಲು ನಿಯೋಜನೆ ಮಾಡಲು ಕ್ರಮ ವಹಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ತಿಳಿಸಿದರು.

‘ಯಾವುದೇ ಮನೆಯಲ್ಲಿ ದೀರ್ಘಕಾಲ ಊರಿಗೆ ಹೋಗುವಾಗ ಠಾಣೆಗೆ ಮಾಹಿತಿ ನೀಡಬೇಕು. ಇದರಿಂದ ಪೊಲೀಸರು ರಾತ್ರಿ ಅಲ್ಲಿಗೆ ಹೋಗಿ ತಪಾಸಣೆ ನಡೆಸಲು ಸಹಕಾರಿಯಾಗಲಿದೆ. ಕೆಲವು ಮನೆಗಳಲ್ಲಿ ಇಂಟರ್‌ಲಾಕ್‌ ಇದ್ದರೂ ಮನೆಯ ಗೇಟ್‌ಗೆ ಬೀಗ ಹಾಕುವುದರಿಂದ ಕಳ್ಳತನಕ್ಕೆ ಸಹಕಾರಿಯಾಗಲಿದೆ. ಕಳ್ಳತನ ತಡೆಗೆ ವಿಶೇಷ ಕ್ರಮ ವಹಿಸಲಾಗುವುದು. ಸಾರ್ವಜನಿಕರ ಸಹಕಾರ ಅಗತ್ಯ’ ಎಂದು ಅವರು ಹೇಳಿದರು.

ಸ್ಥಳೀಯರಿಂದ ಜಾಗೃತಿ

ಕಲ್ಯಾಣನಗರದ ಬಡಾವಣೆಯಲ್ಲಿ ಮನೆ ಕಳ್ಳತನ ಪ್ರಕರಣ ಹೆಚ್ಚುತ್ತಿರುವುದರಿಂಧ ಮುಖಂಡ ಎಂ.ಪಿ. ಈರೇಗೌಡ ಅವರು ಸ್ಥಳೀಯರ ಸಹಕಾರದೊಂದಿಗೆ ಆಟೊರಿಕ್ಷಾ ಮೂಲಕ ಜಾಗೃತಿಗೆ ಮುಂದಾಗಿದ್ದಾರೆ.

‘ಕಳೆದ ಮೂರು ತಿಂಗಳಲ್ಲಿ 10ಕ್ಕೂ ಹೆಚ್ಚು ಮನೆಗಳಲ್ಲಿ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಹಾಗಾಗಿ ಅನುಮಾನಸ್ಪದ, ವ್ಯಕ್ತಿಗಳು ಓಡಾಡುವುದು ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ಜಾಗೃತಿ ಮೂಡಿಸುತ್ತಿದ್ದೇವೆ. ರಾತ್ರಿ ಪೊಲೀಸರ ಕಾವಲು ಹೆಚ್ಚಿಸಬೇಕು’ ಎಂದು ಅವರು ಮನವಿ ಮಾಡಿದರು.

ಮನೆಗಳ್ಳತನ ಸಂಬಂಧ ವಿವಿಧ ಠಾಣೆಗಳ 17 ಪ್ರಕರಣಗಳಲ್ಲಿ ಭಾಗಿಯಾದ ಒಬ್ಬ ಆರೋಪಿಯನ್ನು ಪ‍ತ್ತೆ ಹಚ್ಚಲಾಗಿದೆ. ₹28 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ
ವಿಕ್ರಮ ಅಮಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.